ಹಮಾಸ್‌ ಉಗ್ರರ ದಾಳಿಗೆ ಇಸ್ರೇಲ್‌ ಮಹಿಳಾ ಯೋಧೆ‌ ದಾರುಣ ಸಾವು

Public TV
2 Min Read

ಟೆಲ್‌ ಅವೀವ್‌: ಅಕ್ಟೋಬರ್‌ 7ರಂದು ಹಮಾಸ್‌ ಉಗ್ರರು (Hamas Terrorist) ಇಸ್ರೇಲ್‌ ಮೇಲೆ 5,000 ರಾಕೆಟ್‌ಗಳಿಂದ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಅಪಹರಣಕ್ಕೊಳಗಾದ 19 ವರ್ಷದ ಮಹಿಳಾ ಯೋಧೆಯೊಬ್ಬರು (Israel Soldier) ಕೊಲೆಯಾಗಿರುವುದು ಪತ್ತೆಯಾಗಿದೆ. ಇಸ್ರೇಲ್‌ ರಕ್ಷಣಾ ಪಡೆ ಈ ಬಗ್ಗೆ ಸೋಶಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಕಾರ್ಪೋರಲ್ ನೋವಾ ಮಾರ್ಸಿಯಾನೊ (19) ಅವರ ಮೃತದೇಹವು ಗಾಜಾಪಟ್ಟಿಯಲ್ಲಿರುವ ಶಿಫಾ ಹಾಸ್ಪಿಟಲ್‌ ಪಕ್ಕದಲ್ಲಿ ಪತ್ತೆಯಾಗಿದೆ. ಹಮಾಸ್‌ ಉಗ್ರರ ಗುಂಪು ಶಸ್ತ್ರಾಸ್ತ್ರ ಸಂಗ್ರಹಣೆಗಾಗಿ ಶಾಲೆಗಳು, ಆಸ್ಪತ್ರೆಗಳಂತಹ ನಾಗರಿಕ ಕಟ್ಟಡಗಳನ್ನು ಹಮಾಸ್‌ ಬಳಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇಸ್ರೇಲ್‌ ರಕ್ಷಣಾ ಪಡೆ (IDF) ಅನೇಕ ವೀಡಿಯೋಗಳನ್ನು ಬಿಡುಗಡೆ ಮಾಡಿದೆ. ಈ ನಡುವೆಯೇ ಇಸ್ರೇಲ್‌ ಮಹಿಳಾ ಸೈನಿಕರೊಬ್ಬರು ಕೊಲೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ನೋವಾ ಮಾರ್ಸಿಯಾನೊ ಅವರನ್ನ ಅಕ್ಟೋಬರ್‌ 7ರಂದು ಅಪಹರಿಸಿ ಹಮಾಸ್‌ ಉಗ್ರರು ಹತ್ಯೆಗೈದಿದ್ದಾರೆ. ಆಕೆಯ ದೇಹವನ್ನು ಗಾಜಾದ ಶಿಫಾ ಆಸ್ಪತ್ರೆ ಸಮೀಪದಲ್ಲಿ ಬಿಸಾಡಿದ್ದಾರೆ. ಇದನ್ನು ಇಸ್ರೇನ್‌ ಸೇನೆ ಪತ್ತೆಮಾಡಿದ್ದು, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದೆ. ಅಲ್ಲದೇ ಇಂದು ಗಾಜಾ ಆಸ್ಪತ್ರೆಯ ಸಮೀಪದಲ್ಲೇ ಒತ್ತಾಯಾಳಾಗಿದ್ದ 5 ಮಕ್ಕಳ ತಾಯಿ ಹಮಾಸ್‌ ಉಗ್ರರಿಂದ ಕೊಲ್ಲಲ್ಪಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

ಹಮಾಸ್‌ ತನ್ನ ಭಯೋತ್ಪಾದಕ ಚಟುವಟಿಕೆಗಳಿಗೆ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಆಸ್ಪತ್ರೆಗಳನ್ನು ಹಮಾಸ್ ಬಳಸುತ್ತದೆ ಎಂಬುದಕ್ಕೆ ತನ್ನ ಪಡೆಗಳು ಪುರಾವೆಗಳನ್ನು ಕಂಡುಕೊಂಡಿವೆ. ಅಲ್ ಶಿಫಾ ಆಸ್ಪತ್ರೆಯ (Al-Shifa Hospital) ಎಂಆರ್‌ಐ ಯೂನಿಟ್‌ನಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಇಸ್ರೇಲ್‌ ತಿಳಿಸಿದೆ. ಹಮಾಸ್‌ಗೆ ಸೇರಿದ ಬ್ಯಾಗ್‌ಗಳಲ್ಲಿ ಎಕೆ 47, ಗ್ರೆನೇಡ್ ಸೇರಿ ಹಲವು ಶಸ್ತ್ರಾಸ್ತ್ರ ಸಿಕ್ಕಿವೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೋವನ್ನು ಇಸ್ರೇಲ್ ಸೇನೆ (Israeli Defence Force) ಬಿಡುಗಡೆ ಮಾಡಿದೆ. ಅಲ್ ಶಿಫಾ ಆಸ್ಪತ್ರೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಇಸ್ರೇಲ್ ಸೇನೆ, ಆಸ್ಪತ್ರೆಯ ಇಂಚಿಂಚನ್ನೂ ಜಾಲಾಡುತ್ತಿದೆ. ಅಷ್ಟೇ ಅಲ್ಲ, ಅಲ್ ಶಿಫಾ ಆಸ್ಪತ್ರೆ ಮೇಲೆ ಬುಲ್ಡೋಜರ್‌ಗಳು ನುಗ್ಗಿವೆ ಎಂದು ವರದಿಯಾಗಿದೆ.

Share This Article