ಇಂದು ರಮ್ಯಾ ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಟ್ರೈಲರ್ ರಿಲೀಸ್

Public TV
2 Min Read

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ (Ramya) ನಿರ್ಮಾಣದಲ್ಲಿ ಮೂಡಿ ಬಂದಿರುವ ಸ್ವಾತಿ ಮುತ್ತಿನ ಮಳೆ ಹನಿಯೇ (Swati Muthina Male Haniye) ಸಿನಿಮಾದ ಟ್ರೈಲರ್ ಇಂದು ಅದ್ದೂರಿಯಾಗಿ ರಿಲೀಸ್ ಆಗಲಿದೆ. ಸಂಜೆ 6 ಗಂಟೆಗೆ ಬೆಂಗಳೂರಿನ ಪ್ರತಿಷ್ಠಿತ ಮಾಲ್ ಒಂದರಲ್ಲಿ ಟ್ರೈಲರ್ (Trailer) ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಚಿತ್ರತಂಡ. ನಿರ್ಮಾಪಕಿ ರಮ್ಯಾ, ನಟ ರಾಜ್ ಬಿ ಶೆಟ್ಟಿ (Raj B Shetty), ನಟಿ ಸಿರಿ ಸೇರಿದಂತೆ ಹಲವಾರು ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

ಅಂದುಕೊಂಡಂತೆ ಆಗಿದ್ದರೆ, ಈ ಸಿನಿಮಾದ ಮೂಲಕ ರಮ್ಯಾ ನಟಿಯಾಗಿ ಮತ್ತೆ ಚಿತ್ರೋದ್ಯಮ ಪ್ರವೇಶಿಸಬೇಕಿತ್ತು. ಮೊದ ಮೊದಲು ಈ ಸಿನಿಮಾಗೆ ರಮ್ಯಾನೆ ನಾಯಕಿ ಎಂದು ಹೇಳಲಾಗಿತ್ತು. ಆದರೆ, ಬಳಿಕ ಚಿತ್ರದಿಂದ ಹೊರಬಂದರು. ಈ ಕುರಿತಂತೆ ಮೊನ್ನೆಯಷ್ಟೇ ರಮ್ಯಾ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.

‘ಸ್ವಾತಿ ಮುತ್ತಿನ ಮಳೆ ಹನಿಯೇ’ ಇದು ನನಗೆ ಬಹಳ ವಿಶೇಷವಾದ ಚಿತ್ರ. ನಿರ್ಮಾಪಕಿಯಾಗಿ ನನ್ನ ಮೊದಲ ಚಿತ್ರ ಎಂದಷ್ಟೇ ಅಲ್ಲ. ಜೀವನದ ಬಗ್ಗೆ ನನ್ನ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಿಸಿದ ವಿಷಯಾಧರಿತ ಚಿತ್ರ ಎಂದು ಸಿನಿಮಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ ಬರೆದುಕೊಂಡಿದ್ದಾರೆ.

ನಿಮ್ಮಲ್ಲಿ ಹಲವರಿಗೆ ಈ ಪ್ರಶ್ನೆ ಇದೆ ಎಂದು ನನಗೆ ತಿಳಿದಿದೆ. ನಾನು ಚಿತ್ರದಿಂದ ಹೊರಗುಳಿದದ್ದು ಏಕೆಂದರೆ ಅದು ಓಟಿಟಿಯಲ್ಲಿ ಬಿಡುಗಡೆಯಾಗುವುದೆಂದು ನಿರ್ಧರಿಸಿದ್ದೆವು. ನನ್ನ ಕಮ್‌ಬ್ಯಾಕ್ ಚಿತ್ರವು ಚಿತ್ರಮಂದಿರದಲ್ಲಿಯೇ ಬಿಡುಗಡೆಯಾಗಬೇಕೆಂದು ನಾನು ಬಯಸಿದ್ದೆ. ಚಿತ್ರವನ್ನು ಖರೀದಿಸುವುದಾಗಿ ಭರವಸೆ ನೀಡಿದ ಓಟಿಟಿ ವೇದಿಕೆಯು ನಂತರ ಹಿಂದೆ ಸರಿಯಿತು. ಕನ್ನಡದಲ್ಲಿ ಇದು ಹೆಚ್ಚಾಗಿ ನಡೆಯುತ್ತದೆ. ಆದರೆ, ನಿಮ್ಮನ್ನು ಸೇರಲು ಹಲವು ಮಾರ್ಗಗಳನ್ನು ಹುಡುಕುತ್ತೇವೆ ಎಂದು ನಟಿ ತಿಳಿಸಿದ್ದಾರೆ.

 

‘ಟೋಬಿ’ ಹೀರೋ ರಾಜ್ ಬಿ ಶೆಟ್ಟಿ ಜೊತೆ ಮೋಹಕ ತಾರೆ ರಮ್ಯಾ ನಟಿಸಬೇಕಿತ್ತು. ಆದರೆ ಈಗ ಅಸಲಿ ಕಾರಣವನ್ನ ತಿಳಿಸುವ ಮೂಲಕ ಗಾಸಿಪ್‌ಗೆಲ್ಲಾ ನಟಿ ಸ್ಪಷ್ಟನೆ ನೀಡಿದ್ದಾರೆ. ರಾಜ್ ಬಿ ಶೆಟ್ಟಿ, ಸಿರಿ ರವಿಕುಮಾರ್ ಸೇರಿದಂತೆ ಇಡೀ ಚಿತ್ರತಂಡಕ್ಕೆ ಮತ್ತು ಕೆವಿಎನ್‌ ಸಂಸ್ಥೆಯ ರೂವಾರಿ ಕಾರ್ತಿಕ್-ಯೋಗಿಗೆ, ರಮ್ಯಾ ಧನ್ಯವಾದಗಳನ್ನ ತಿಳಿಸಿದ್ದಾರೆ. ನವೆಂಬರ್ 24ಕ್ಕೆ ರಿಲೀಸ್ ಆಗುತ್ತಿರೋ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ನೋಡಿ ಎಂದು ಮನವಿ ಮಾಡಿದ್ದಾರೆ.

Share This Article