ಟವರ್ ಏರಿದ ಯುವತಿಯನ್ನು ‘ಮಗಳೇ ಕೆಳಗಿಳಿ’ ಎಂದ ಪ್ರಧಾನಿ ಮೋದಿ!

Public TV
2 Min Read

ಹೈದರಾಬಾದ್: ಶನಿವಾರ ತೆಲಂಗಾಣದಲ್ಲಿ (Telangana) ಪ್ರಧಾನಿ ನರೇಂದ್ರ ಮೋದಿಯವರ (Narendra Modi) ರ‍್ಯಾಲಿಯಲ್ಲಿ ಯುವತಿಯೊಬ್ಬರು (Young Woman) ಪ್ರಧಾನಿಯ ಗಮನ ಸೆಳೆಯಲು ಮತ್ತು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಲೈಟ್ ಟವರ್ (Tower) ಅನ್ನು ಏರಿದ್ದರು. ಇದನ್ನು ಗಮನಿಸಿ ಗಾಬರಿಗೊಂಡ ಮೋದಿ ಮಗಳೇ ಕೆಳಗಿಳಿ ಎಂದು ಮನವಿ ಮಾಡಿಕೊಂಡಿರುವ ಘಟನೆ ನಡೆದಿದೆ.

ಘಟನೆಗೆ ಸಂಬಂಧಿಸಿದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಯುವತಿಯೊಬ್ಬರು ಲೈಟ್ ಟವರ್ ಏರುತ್ತಿರುವುದು ಅದರಲ್ಲಿ ಕಂಡುಬಂದಿದೆ. ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದ ಮೋದಿ ಇದನ್ನು ಗಮನಿಸಿ ತಕ್ಷಣವೇ ಹೀಗೆ ಮಾಡದಂತೆ, ಟವರ್‌ನಿಂದ ಕೆಳಗಿಳಿಯುವಂತೆ ಯುವತಿಗೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಟವರ್‌ನಲ್ಲಿ ಅಳವಡಿಸಲಾಗಿದ್ದ ತಂತಿಗಳಿಂದ ಅವರಿಗೆ ಶಾಕ್ ತಗುಲಬಹುದು ಎಂದು ಭೀತಿ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮೋದಿ, ಮಗಳೇ ಕೆಳಗೆ ಬಾ, ನಾವು ನಿಮ್ಮೊಂದಿಗಿದ್ದೇವೆ. ಅದರ ತಂತಿಗಳು ಸುರಕ್ಷಿತ ಸ್ಥಿತಿಯಲ್ಲಿಲ್ಲ, ಶಾರ್ಟ್ ಸರ್ಕ್ಯೂಟ್ ಆಗಬಹುದು. ಇದರಿಂದ ಯಾರಿಗೂ ಪ್ರಯೋಜನವಾಗುವುದಿಲ್ಲ. ನಾನು ನಿಮಗಾಗಿ ಬಂದಿದ್ದೇನೆ. ನಾನು ನಿಮ್ಮ ಮಾತುಗಳನ್ನು ಕೇಳುತ್ತೇನೆ ಎಂದು ವೇದಿಕೆಯಿಂದಲೇ ಯುವತಿಗೆ ಹೇಳಿದ್ದಾರೆ. ತಮ್ಮ ಸಮಸ್ಯೆಗೆ ಪರಿಹಾರ ನೀಡುವುದಾಗಿ ಮೋದಿ ಭರವಸೆ ನೀಡಿದ ಬಳಿಕ ಯುವತಿ ನಿಧಾನವಾಗಿ ಟವರ್‌ನಿಂದ ಕೆಳಗಿಳಿದಿದ್ದಾರೆ. ಇದನ್ನೂ ಓದಿ: ಪಂಚ ರಾಜ್ಯಗಳ ಮತದಾರರು ಕಾಂಗ್ರೆಸ್ ಗ್ಯಾರಂಟಿ ಭಜನೆಗೆ ಮರುಳಾಗಬಾರದು: ಹೆಚ್‍ಡಿಕೆ

ಸಿಕಂದರಾಬಾದ್‌ನಲ್ಲಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಮಾದಿಗ ಸಮುದಾಯ ತೆಲುಗು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಗಳ ಅತಿದೊಡ್ಡ ಘಟಕಗಳಲ್ಲಿ ಒಂದಾಗಿದೆ. ನವೆಂಬರ್ 3 ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾದ ನಂತರ ನಗರದಲ್ಲಿ ಮೋದಿಯವರು ಸತತ 2ನೇ ರ‍್ಯಾಲಿಯಲ್ಲಿ ಭಾಗವಹಿಸಿದ್ದಾರೆ. ನವೆಂಬರ್ 30 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ತೆಲಂಗಾಣದಲ್ಲಿ ಬಿಸಿ ಸಮುದಾಯದ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿದೆ ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಲೆಪ್ಚಾದಲ್ಲಿ ಸೈನಿಕರೊಂದಿಗೆ ಪ್ರಧಾನಿ ದೀಪಾವಳಿ ಆಚರಣೆ


Share This Article