PublicTV Explainer: ‘ಸೋಷಿಯಲ್‌’ನಲ್ಲಿ ಬೆತ್ತಲಾದ ‘ಡೀಪ್‌ಫೇಕ್’; ಏನಿದು ತಂತ್ರಜ್ಞಾನ? ಇದರ ಆಳ ಎಷ್ಟು? ಅಪರಾಧಕ್ಕೆ ಶಿಕ್ಷೆ ಏನು?

By
5 Min Read

ವಿಜ್ಞಾನದಲ್ಲಿ ನೆರಳು ಬೆಳಕಿನ ಆಟ ಎಂಬ ಮಾತಿನಂತೆ, ಈಗ ತಂತ್ರಜ್ಞಾನದಲ್ಲಿ ನಕಲಿ-ಅಸಲಿ ಆಟ ಶುರುವಾಗಿದೆ. ಅಸಲಿಯನ್ನ ನಕಲಿಯಾಗಿಸುವ, ಹಾಗೆಯೇ ನಕಲಿಯನ್ನ ಅಸಲಿಯಾಗಿಸುವ ಟೆಕ್ನಾಲಜಿ ಈಗಾಗಲೇ ಬೆಳೆದು ನಿಂತಿದೆ. ‘ಒಂದು ನಾಣ್ಯದ ಎರಡು ಮುಖ’ ಕಥೆ ಕೇಳಿದ್ದೀರಾ ಅಲ್ವಾ? ಹಾಗೆಯೇ ಯಾವುದೇ ವಿಚಾರದಲ್ಲೂ ಪಾಸಿಟಿವ್‌-ನೆಗೆಟಿವ್‌ ಎರಡೂ ಇರುತ್ತದೆ. ನಿಮಗೆ ‘ಎಐ’ ತಂತ್ರಜ್ಞಾನ ಗೊತ್ತಿರಬೇಕಲ್ವಾ? ಅದರ ಕಥೆಯೂ ಇದೇ ಆಗಿದೆ. ಒಂದು ತಂತ್ರಜ್ಞಾನದ ಪಾಸಿಟಿವ್‌ ವರ್ಶನ್ ನೋಡಿ ಚಪ್ಪಾಳೆ ತಟ್ಟಿ ಖುಷಿ ಪಡುವವರು, ಅದರ ನೆಗೆಟಿವ್‌ ವರ್ಶನ್‌ಗೆ ಬೇಸರದ ಜೊತೆಗೆ ಕೋಪವನ್ನೂ ವ್ಯಕ್ತಪಡಿಸುತ್ತಾರೆ. ಜನರನ್ನು ಬಹುಬೇಗ ತನ್ನತ್ತ ಸೆಳೆಯುವ ಸಿನಿಮಾ ಜಗತ್ತಿನಲ್ಲೂ ಅಂತಹದ್ದೊಂದು ಘಟನೆ ನಡೆದಿದೆ.

ನ್ಯಾಷನಲ್‌ ಕ್ರಷ್‌ಗೆ ಸ್ಟ್ರೆಸ್‌ ಎದುರಾಗಿದೆ. ಸ್ಯಾಂಡಲ್‌ವುಡ್‌ನಿಂದ ಟಾಲಿವುಡ್‌.. ಅಲ್ಲಿಂದ ಬಾಲಿವುಡ್‌ಗೂ ಎಂಟ್ರಿ ಕೊಟ್ಟು ವಿಖ್ಯಾತಿ ಪಡೆದಿರುವ ರಶ್ಮಿಕಾ ಮಂದಣ್ಣ ಕಾಲೆಳೆಯಲು ಹೋಗಿ ಟೆಕ್ನಾಲಜಿವೊಂದು ಕುಖ್ಯಾತಿ ಗಳಿಸಿದೆ. ಸೆಲೆಬ್ರಿಟಿಗಳನ್ನು ಬೆತ್ತಲಾಗಿಸಲು ಹೋಗಿ ತಾನೇ ಬೆತ್ತಲಾಗಿದೆ. ರಶ್ಮಿಕಾ ಅಷ್ಟೇ ಅಲ್ಲ, ಕತ್ರಿನಾ ಕೈಫ್‌ ಸೇರಿ ಅನೇಕ ಸೆಲೆಬ್ರಿಟಿಗಳು ಈ ತಂತ್ರಜ್ಞಾನದ ಕಣ್ಣಿಗೆ ಬಿದ್ದು ಸುದ್ದಿಯಾಗಿದ್ದಾರೆ. ಅದೇನು ಅಂತೀರಾ? ಅದುವೇ ‘ಡೀಪ್‌ಫೇಕ್’ (Deepfake).‌ ಈ ತಂತ್ರಜ್ಞಾನ ಹೆಸರಿಗೆ ತಕ್ಕಂತೆ ‘ಡೀಪ್’ (ಆಳ) ಆಗಿದೆ. ಬನ್ನಿ ಈ ತಂತ್ರಜ್ಞಾನದ ಆಳ-ಅಗಲ ತಿಳಿದುಕೊಳ್ಳೋಣ. ಇದನ್ನೂ ಓದಿ: ರಶ್ಮಿಕಾ ಡೀಪ್‍ ಫೇಕ್ ವಿಡಿಯೋ: ಆತಂಕ ವ್ಯಕ್ತಪಡಿಸಿದ ನಾಗಚೈತನ್ಯ

ಏನಿದು ಪ್ರಕರಣ?
ಈ ತಂತ್ರಜ್ಞಾನ ಯಾಕೆ ಚರ್ಚೆಗೆ ಬಂತು ಎಂಬುದನ್ನು ಮೊದಲು ತಿಳಿಯೋಣ. ಕಳೆದ 2 ದಿನಗಳಿಂದ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣಗೆ (Rashmika Mandanna) ಸಂಬಂಧಿಸಿದ್ದು ಎನ್ನುವಂತಿದ್ದ ಫೋಟೋ, ವೀಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ತುಂಡುಡುಗೆಯಲ್ಲಿರುವ ಯುವತಿಯೊಬ್ಬರ ವೀಡಿಯೋವನ್ನು ಥೇಟ್‌ ರಶ್ಮಿಕಾ ಮಂದಣ್ಣ ಅವರಂತೆ ಮಾರ್ಫ್‌ ಮಾಡಿ ವೀಡಿಯೋ ಸೃಷ್ಟಿಸಲಾಗಿತ್ತು. ಆರಂಭದಲ್ಲಿ ವೀಡಿಯೋ ನೋಡಿದವರು ಇವರೇ ರಶ್ಮಿಕಾ ಮಂದಣ್ಣ ಎಂದುಕೊಂಡಿದ್ದರು. ಆದರೆ ನಂತರ ತಿಳಿಯಿತು ಅದು ನಕಲಿ ವೀಡಿಯೋ ಎಂದು.

ಜರಾ ಪಟೇಲ್‌ ಎಂಬ ಯುವತಿ ದೇಹಕ್ಕೆ ರಶ್ಮಿಕಾ ಮಂದಣ್ಣ ಮುಖ ಮಾರ್ಫ್‌ ಮಾಡಲಾಗಿತ್ತು. ಡೀಪ್‌ಫೇಕ್‌ ತಂತ್ರಜ್ಞಾನ ರಶ್ಮಿಕಾ ಮಂದಣ್ಣ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಲಾಗಿತ್ತು. ಇದಕ್ಕೆ ಸ್ವತಃ ನಟಿಯೇ ಬೇಸರ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರು ಸಹ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲ ಬಿಗ್‌ ಬಿ ಅಮಿತಾಬ್‌ ಬಚ್ಚನ್‌, ನಟ ನಾಗಚೈತನ್ಯ ಕೂಡ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಒಬ್ಬರ ತೇಜೋವಧೆ ಮಾಡುವ ಇಂತಹ ಮಾರ್ಫಿಂಗ್‌ ವೀಡಿಯೋಗಳಿಗೆ ಕಡಿವಾಣ ಹಾಕಬೇಕು. ಸೋಷಿಯಲ್‌ ಮೀಡಿಯಾಗಳು ಈ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲಿಂದೀಚೆಗೆ ‘ಡೀಪ್‌ಫೇಕ್’‌ ತಂತ್ರಜ್ಞಾನ ಹೆಚ್ಚು ಚರ್ಚೆಯಲ್ಲಿದೆ. ಇದನ್ನೂ ಓದಿ: ಏನಿದು ಡೀಪ್‌ಫೇಕ್‌ ತಂತ್ರಜ್ಞಾನ? ಹೇಗೆ ಮಾಡುತ್ತಾರೆ? – ನೀವು ತಿಳ್ಕೋಳ್ಳಲೇಬೇಕು

ಏನಿದು ಡೀಪ್‌ಫೇಕ್‌ ತಂತ್ರಜ್ಞಾನ?
ಒಬ್ಬರ ದೇಹಕ್ಕೆ ಇನ್ನೊಬ್ಬರ ತಲೆಯನ್ನು ಜೋಡಿಸಿ ಎಡಿಟಿಂಗ್‌ ಮಾಡುತ್ತಿದ್ದ ಫೋಟೋ, ವೀಡಿಯೋಗಳು ಸಾಮಾನ್ಯವಾಗಿದ್ದವು. ಇವು ಎಡಿಟಿಂಗ್‌ ಆಗಿರುವ ಫೋಟೋ/ವೀಡಿಯೋ ಎಂಬುದು ನೋಡಿದಾಕ್ಷಣ ತಿಳಿಯುತ್ತಿತ್ತು. ಇಲ್ಲವೇ ಸ್ವಲ್ಪವಾದರೂ ಅನುಮಾನ ಮೂಡುತ್ತದೆ. ಆದರೆ ಡೀಪ್‌ಫೇಕ್‌ ತಂತ್ರಜ್ಞಾನದಲ್ಲಿ ಆ ಯಾವುದೇ ಅನುಮಾನ ಬರುವುದಿಲ್ಲ. ಆ ರೀತಿ ಫೋಟೋ/ವೀಡಿಯೋ ಎಡಿಟ್‌ ಮಾಡಲಾಗುತ್ತದೆ. ವ್ಯಕ್ತಿಯ ದೇಹ ಮತ್ತು ಮುಖಕ್ಕೆ ಕೊಂಚವೂ ವ್ಯತ್ಯಾಸ ಇಲ್ಲದಂತೆ ವೀಡಿಯೋಗಳನ್ನ ಸೃಷ್ಟಿಸಲಾಗುತ್ತದೆ. ವೀಡಿಯೋ ನೋಡಿದರೆ ‘ಇದು ಬೇರೆ ಯಾರೂ ಅಲ್ಲ.. ಅವರೇ’ ಎನ್ನುವಷ್ಟು ನಿಖರತೆಯಿಂದ ಕೂಡಿರುತ್ತದೆ.

ಎಐ (ಕೃತಕ ಬುದ್ದಿಮತ್ತೆ) ಮಷಿನ್‌ ಲರ್ನಿಂಗ್‌ ಸಹಾಯದಿಂದ ಮಾರ್ಫಿಂಗ್‌ ವೀಡಿಯೋ, ಫೋಟೋ ಸೃಷ್ಟಿಸುವುದಕ್ಕೆ ಡೀಪ್‌ಫೇಕ್‌ ಎಂದು ಕರೆಯಲಾಗುತ್ತದೆ. ಒಬ್ಬ ವ್ಯಕ್ತಿಯಂತೆಯೇ ಸೇಮ್‌ ಟು ಸೇಮ್‌ ಡೂಪ್‌ ಸೃಷ್ಟಿಸಬಹುದು. ವೀಡಿಯೋ/ಫೋಟೋ ನೋಡಿದಾಗ ಇದು ಅಸಲಿಯೇ ಅಥವಾ ನಕಲಿಯೇ ಎಂಬುದು ತಿಳಿಯುವುದೇ ಇಲ್ಲ. ಈ ತಂತ್ರಜ್ಞಾನ ಬಳಸಿ ಯಾರನ್ನು ಬೇಕಾದರೂ ಸ್ಕ್ರೀನ್‌ ಮೇಲೆ ತೋರಿಸಬಹುದು. ಹಿಂದಿ, ಇಂಗ್ಲಿಷ್‌ ಅಷ್ಟೇ ಬರುವ ವ್ಯಕ್ತಿ ಕನ್ನಡದಲ್ಲಿ ಮಾತನಾಡಿದಂತೆಯೂ, ಹಾಡಿದಂತೆಯೂ ತೋರಿಸಬಹುದು. ಕೆಲವೊಮ್ಮೆ ಈ ತಂತ್ರಜ್ಞಾನ ಲಾಭದಾಯಕ ಎನಿಸುತ್ತದೆ. ಆದರೆ ಅಷ್ಟೇ ದುರ್ಬಳಕೆ ಕೂಡ ಆಗುತ್ತಿದೆ. ಅದಕ್ಕೆ ಉತ್ತಮ ಉದಾಹರಣೆ ರಶ್ಮಿಕಾ ಮಂದಣ್ಣ ಪ್ರಕರಣ. ಇದನ್ನೂ ಓದಿ: ಡೀಪ್‍ ಫೇಕ್ ವಿಡಿಯೋ: ಶಾಕ್ ಆಗಿದೆ ಎಂದ ನಟ ರಶ್ಮಿಕಾ ಮಂದಣ್ಣ

ಈ ತಂತ್ರಜ್ಞಾನ ಉಚಿತ, ವ್ಯಾಪಕವಾಗಿ ಲಭ್ಯವಿದೆ. ಯಾವುದೇ ತಾಂತ್ರಿಕ ಪರಿಣತಿಯ ಅಗತ್ಯವಿಲ್ಲ. ಈ ಅಪ್ಲಿಕೇಶನ್‌ಗಳು ಬಳಕೆದಾರರಿಗೆ, ಚಿತ್ರಗಳನ್ನು ಡಿಜಿಟಲ್‌ ಸಹಾಯದಿಂದ ತೆಗೆದುಹಾಕಲು ಅಥವಾ ಅಶ್ಲೀಲ ವೀಡಿಯೊಗಳಲ್ಲಿ ಅವರ ಮುಖಗಳನ್ನು ಸೇರಿಸಲು ಅನುಮತಿಸುತ್ತದೆ. ಗಾಯಕ ಟೇಲರ್ ಸ್ವಿಫ್ಟ್ ಮತ್ತು ನಟಿ ಎಮ್ಮಾ ವ್ಯಾಟ್ಸನ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಡೀಪ್‌ಫೇಕ್ ತಂತ್ರಜ್ಞಾನದ ಸಂತ್ರಸ್ತರಾಗಿದ್ದಾರೆ. ಡಚ್ ಎಐ ಕಂಪನಿ ಸೆನ್ಸಿಟಿಯ ಅಧ್ಯಯನದ ಪ್ರಕಾರ, ಆನ್‌ಲೈನ್‌ನಲ್ಲಿ ಸುಮಾರು 96% ಡೀಪ್‌ಫೇಕ್ ವೀಡಿಯೋಗಳು ಅಶ್ಲೀಲತೆಯಿಂದ ಕೂಡಿವೆ. ಅವುಗಳಲ್ಲಿ ಹೆಚ್ಚಿನವು ಮಹಿಳೆಯರನ್ನೇ ಚಿತ್ರಿಸಿವೆ ಎಂದಿದೆ.

ಡೀಪ್‌ಫೇಕ್‌ ಸೃಷ್ಟಿಕರ್ತ ಯಾರು?
ತಂತ್ರಜ್ಞಾನ ವಲಯದಲ್ಲಿ ಸಂಚಲನ ಮೂಡಿಸಿರುವ ಡೀಪ್‌ಫೇಕ್‌ ನಿರ್ಮಾತೃ ಡೀಪ್‌ಟ್ರೇಸ್‌ ಎಂಬ ಎಐ ಸಂಸ್ಥೆ. 2019 ರ ಸೆಪ್ಟೆಂಬರ್‌ನಲ್ಲಿ ಆನ್‌ಲೈನ್‌ನಲ್ಲಿ 15,000 ಡೀಪ್‌ಫೇಕ್‌ ವೀಡಿಯೋಗಳನ್ನ ಈ ಸಂಸ್ಥೆ ತಯಾರಿಸಿತ್ತು. ಆದರೆ ಕೇವಲ 9 ತಿಂಗಳಲ್ಲಿ ಇದರ ಡಬಲ್‌ ಆಗಿದೆ. ಅನೇಕ ತಂತ್ರಜ್ಞರು ಈ ತಂತ್ರಜ್ಞಾನದ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ. ಈ ತಂತ್ರಜ್ಞಾನದ ಮೂಲಕ ಹೆಚ್ಚಾಗಿ ಮಹಿಳೆಯರನ್ನೇ ಟಾರ್ಗೆಟ್‌ ಮಾಡುತ್ತಿರುವುದು ಕಳವಳಕಾರಿ.

ಡೀಪ್‌ಫೇಕ್‌ನಿಂದ ಪಾರಾಗುವುದು ಹೇಗೆ?
* ಡೀಪ್‌ಫೇಕ್‌ಗಳನ್ನು ರಚಿಸಲು ಲಭ್ಯವಿರುವ ಡೇಟಾವನ್ನು ಕಡಿಮೆ ಮಾಡಲು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ವೈಯಕ್ತಿಕ ಮಾಹಿತಿಯ ಪ್ರಮಾಣವನ್ನು ಮಿತಿಗೊಳಿಸಿ. ಇದನ್ನೂ ಓದಿ: ರಶ್ಮಿಕಾ ನಂತರ ಕತ್ರಿನಾಗೆ ಡೀಪ್ ಫೇಕ್ ಕಾಟ

* ನಿಮ್ಮ ವೈಯಕ್ತಿಕ ಡೇಟಾ ಭದ್ರತೆಯನ್ನು ಹೆಚ್ಚಿಸುವುದು. ಡೀಪ್‌ಫೇಕ್‌ಗಳನ್ನು ರಚಿಸಲು ಬಳಸಬಹುದಾದ ಫೋಟೋಗಳು ಅಥವಾ ವೀಡಿಯೋಗಳನ್ನು ಹಂಚಿಕೊಳ್ಳುವುದರಿಂದ ದೂರವಿರುವುದು.

* ವೈಯಕ್ತಿಕ ಡೇಟಾದ ಬಗ್ಗೆ ಕಾಳಜಿ ಹೊಂದಿರುವವರು ತಮ್ಮ Instagram ಖಾತೆಯನ್ನು ‘ಪಬ್ಲಿಕ್‌’ ಬದಲಿಗೆ ‘ಪ್ರೈವೇಟ್‌’ ಆಗಿ ಬದಲಾಯಿಸುವುದು ಸೂಕ್ತ.

* ಬಳಕೆದಾರರು ಬುಸಿನೆಸ್‌ ಅಕೌಂಟ್‌ ಹೊಂದಿದ್ದರೆ, ಅವರು Instagram ನಲ್ಲಿ ವೈಯಕ್ತಿಕ ಚಿತ್ರಗಳು ಮತ್ತು ವೀಡಿಯೊಗಳನ್ನು ಹೈಡ್‌ ಮಾಡುವುದು ಒಳಿತು.

* ಸೋಷಿಯಲ್‌ ಮೀಡಿಯಾ ಬಳಸುವಾಗ ಮತ್ತು ನಿಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವಾಗ ಯಾವಾಗಲೂ ಜಾಗರೂಕರಾಗಿರಿ.

ಡೀಪ್‌ಫೇಕ್‌ ಅಪರಾಧಕ್ಕೆ ಶಿಕ್ಷೆ ಏನು?
ಡೀಪ್‌ಫೇಕ್ ಸೈಬರ್‌ ಅಪರಾಧಕ್ಕೆ ಸಂಬಂಧಿಸಿದಂತೆ ಭಾರತ ಕಾನೂನಿನಲ್ಲಿ ಸ್ಪಷ್ಟವಾದ ವ್ಯಾಖ್ಯಾನ ಇಲ್ಲ. ಆದರೆ ಈ ಅಪರಾಧದ ವಿರುದ್ಧ ಇತರ ಹಲವಾರು ಕಾನೂನು ಕ್ರಮಗಳನ್ನು ಬಳಸಿಕೊಳ್ಳಬಹುದು.

* ಐಟಿ ಕಾಯಿದೆ: ಮಾಹಿತಿ ತಂತ್ರಜ್ಞಾನ ಕಾಯಿದೆ 2000 ಸೆಕ್ಷನ್‌ 66ರ ಪ್ರಕಾರ, ಐಡೆಂಟಿಫಿಕೇಷನ್‌ ಥೆಫ್ಟ್‌ (ಗುರುತು ಕಳವು) ಮಾಡಿ ಅದನ್ನು ಅನ್ಯ ಉದ್ದೇಶಗಳಿಗೆ ಬಳಸಿದರೆ ಅದಕ್ಕೆ 3 ವರ್ಷ ಜೈಲು ಶಿಕ್ಷೆ. ಜೊತೆಗೆ 1 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ.

* ಐಟಿ ಕಾಯಿದೆ ಸೆಕ್ಷನ್‌ 66ಇ ಪ್ರಕಾರ, ಖಾಸಗಿ ಹಕ್ಕು ಉಲ್ಲಂಘನೆಗಾಗಿ 3 ವರ್ಷ ಜೈಲು ಮತ್ತು 2 ಲಕ್ಷದ ವರೆಗೆ ದಂಡ ವಿಧಿಸಲಾಗುವುದು.

* ಹಕ್ಕುಸ್ವಾಮ್ಯ ಕಾಯಿದೆ, 1957: ಕಾಯಿದೆಯ ಸೆಕ್ಷನ್ 51 ವಿಶೇಷ ಹಕ್ಕನ್ನು ಹೊಂದಿರುವ ಇನ್ನೊಬ್ಬ ವ್ಯಕ್ತಿಗೆ ಸೇರಿದ ಯಾವುದೇ ಆಸ್ತಿಯನ್ನು ಬಳಸಿದಾಗ ಹಕ್ಕುಸ್ವಾಮ್ಯ ಕಾಯಿದೆಯ ಉಲ್ಲಂಘನೆಯಾಗಿದೆ.

* ಭಾರತೀಯ ದಂಡ ಸಂಹಿತೆ ಸೆಕ್ಷನ್‌ 153ಎ (ಧರ್ಮ, ಜಾತಿ ಮತ್ತಿತರ ಹೆಸರಿನಲ್ಲಿ ನಿಂದನೆ) ಮತ್ತು 295ಎ (ಉದ್ದೇಶಪೂರ್ವಕವಾಗಿ ಅಪಮಾನಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಬಹುದು.

* ಕಾಪಿ ರೈಟ್‌ ಕಾಯಿದೆ 1957ರ ಸೆಕ್ಷನ್‌ 16ರ ಪ್ರಕಾರ ವೀಡಿಯೋ ದುರ್ಬಳಕೆ ಮಾಡಿಕೊಂಡರೆ 3 ವರ್ಷ ಜೈಲು, 2 ಲಕ್ಷ ರೂ. ದಂಡ ವಿಧಿಸಬಹುದು.

Share This Article