ಚುನಾವಣಾ ಹೊಸ್ತಿಲಲ್ಲೇ ʼಕೈʼಗೆ ಶಾಕ್-‌ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ ಶಾಸಕ

Public TV
1 Min Read

ಜೈಪುರ: ರಾಜಸ್ಥಾನದಲ್ಲಿ ಆಡಳಿತರೂಢ ಕಾಂಗ್ರೆಸ್‍ನ (Congress) ಹಾಲಿ ಶಾಸಕರೊಬ್ಬರು ಬಿಜೆಪಿ (BJP) ಸೇರ್ಪಡೆಯಾಗಿದ್ದಾರೆ. ಈ ಮೂಲಕ ವಿಧಾನಸಭೆ ಚುನಾವಣಾ ಹೊಸ್ತಿಲಲ್ಲೇ ಆಡಳಿತಾರೂಢ ಪಕ್ಷಕ್ಕೆ ಹೊಡೆತ ಬಿದ್ದಿದೆ.

ಧೋಲ್‍ಪುರದ ಬಾರಿ ಕ್ಷೇತ್ರದ ಶಾಸಕ ಗಿರ್ ರಾಜ್ ಮಾಲಿಂಗ (Girraj Malinga) ಅವರು ‘ಕೈ’ ತೊರೆದು ‘ಕಮಲ’ ಹಿಡಿದಿದ್ದಾರೆ. ಜೈಪುರದಲ್ಲಿ ಕಾಂಗ್ರೆಸ್ ಶಾಸಕ ಬಿಜೆಪಿಗೆ ಸೇರಿದ ಸಂದರ್ಭದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಇತರ ಹಿರಿಯ ನಾಯಕರು ಉಪಸ್ಥಿತರಿದ್ದರು.

ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಅವರು, ಕಳೆದ ವರ್ಷ ಎಂಜಿನಿಯರ್ ಗಳ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಸುಳ್ಳು ಮೊಕದ್ದಮೆಯನ್ನು ದಾಖಲಿಸಿ ಪೊಲೀಸರಿಗೆ ಶರಣಾಗುವಂತೆ ಮಾಡಿದ್ದರು. ಸಿಎಂ ಅವರು ನನ್ನ ಮಾತನ್ನು ಕೇಳದೆ ಯಾರೋ ಕೆಲವರ ಮಾತನ್ನು ಕೇಳಿಕೊಂಡು ರಾಜಕೀಯ ಮಾಡಿದರು. ಪಕ್ಷದಲ್ಲಿ ನನ್ನನ್ನು ನಡೆಸಿಕೊಂಡ ರೀತಿಯಿಂದ ಮನನೊಂದಿದ್ದೇನೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಾಯಕತ್ವವನ್ನು ಮೆಚ್ಚಿ ಬಿಜೆಪಿ ಸೇರಿದ್ದೇನೆ ಎಂದು ತಿಳಿಸಿದ್ದಾರೆ.

 

ಒಟ್ಟಿನಲ್ಲಿ ಧೋಲ್‍ಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಮ್ಮದೇ ಆದ ಪ್ರಾಬಲ್ಯವನ್ನು ಹೊಂದಿರುವ ಗಿರಿರಾಜ್ ಬಿಜೆಪಿ ಸೇರ್ಪಡೆ ಕಾಂಗ್ರೆಸ್‍ಗೆ ಭಾರೀ ನಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಸತತ 4ನೇ ದಿನ ವಾಯುಗುಣಮಟ್ಟ ಕುಸಿತ – ದೆಹಲಿಯಲ್ಲಿ ಹೈವೋಲ್ಟೇಜ್‌ ಸಭೆ ಕರೆದ ಸಿಎಂ

ಗಿರಿರಾಜ್ ಅವರ ಜೊತೆಗೆ ರಾಜ್ಯ ಕಾಂಗ್ರೆಸ್ ಘಟಕದ ಪ್ರಮುಖ ನಾಯಕರಾದ ಮುಸ್ತಾಕ್ ಅಹ್ಮದ್ ಖಾನ್, ರವಿ ಪಚೌರಿ, ದೀಪ್ ಸಿಂಗ್ ಕುಶ್ವಾಹ, ಮಂಗಿಲಾಲ್ ಶರ್ಮಾ ಮತ್ತು ರಾಮವರನ್ ಶರ್ಮಾ ಹಾಗೂ ಆಪ್‍ನ ಯುವ ಘಟಕದ ಅಧ್ಯಕ್ಷ ಅನುರಾಗ್ ಸಿಂಗ್ ಬ್ರಾರ್ ಕೂಡ ಬಿಜೆಪಿ ಸೇರಿದ್ದಾರೆ. 200 ಸದಸ್ಯಬಲದ ರಾಜಸ್ಥಾನ ವಿಧಾನಸಭೆಗೆ ನವೆಂಬರ್ 25ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

Share This Article