ಬ್ಯಾಟಿಂಗ್‌ನಲ್ಲಿ ಕೈಕೊಟ್ಟರೂ ಬೌಲಿಂಗ್‌ನಲ್ಲಿ ಕೈಹಿಡಿದ ಮ್ಯಾಕ್ಸಿ – ಪಂದ್ಯ ಸೋತು ಸರಣಿ ಗೆದ್ದ ಭಾರತ

By
4 Min Read

ರಾಜ್‌ಕೋಟ್‌: ಗ್ಲೇನ್‌ ಮ್ಯಾಕ್ಸ್‌ವೆಲ್‌ (Glenn Maxwell) ಮಿಂಚಿನ ಬೌಲಿಂಗ್‌ ದಾಳಿಯಿಂದ ಆಸ್ಟ್ರೇಲಿಯಾ (Australia) ತಂಡವು ಅಂತಿಮ ಪಂದ್ಯದಲ್ಲಿ ಭಾರತದ ವಿರುದ್ಧ 66 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆದ್ರೆ ಕಳೆದ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಭಾರತ 2-1 ಅಂತರದಲ್ಲಿ ಸರಣಿ ಗೆದ್ದು ಬೀಗಿದೆ.

ಇಲ್ಲಿನ ಸೌರಾಷ್ಟ್ರ ಕ್ರೀಡಾಂಗಣದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿರುವ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 352 ರನ್‌ ಗಳಿಸಿತ್ತು. 353 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ 49.4 ಓವರ್‌ಗಳಲ್ಲಿ 286 ರನ್‌ ಗಳಿಗೆ ಆಲೌಟ್‌ ಆಯಿತು. ಇದನ್ನೂ ಓದಿ: 20 ಓವರ್‌ಗಳಲ್ಲಿ 314 ರನ್‌, 9 ಎಸೆತಗಳಲ್ಲಿ ಸ್ಫೋಟಕ ಫಿಫ್ಟಿ; T20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ ನೇಪಾಳ

ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ (Rohit Sharma) ಹಾಗೂ ವಾಷಿಂಗ್ಟನ್‌ ಸುಂದರ್‌ ಜೋಡಿ 10.5 ಓವರ್‌ಗಳಲ್ಲಿ 74 ರನ್‌ ಜೊತೆಯಾಟ ನೀಡಿತ್ತು. ಆರಂಭದಿಂದಲೇ ಆಸೀಸ್‌ ಬೌಲರ್‌ಗಳನ್ನ ಬೆಂಡೆತ್ತಲು ಶುರು ಮಾಡಿದ ನಾಯಕ ರೋಹಿತ್‌ ಶರ್ಮಾ 31 ಎಸೆತಗಳಲ್ಲಿ 5 ಸಿಕ್ಸರ್‌, 3 ಬೌಂಡರಿಯೊಂದಿಗೆ ಅರ್ಧಶತಕ ಸಿಡಿಸಿದರು. ಇದೇ ವೇಳೆ ಮ್ಯಾಕ್ಸ್‌ವೆಲ್‌ ಬೌಲಿಂಗ್‌ನಲ್ಲಿ ಸಿಕ್ಸ್‌ ಸಿಡಿಸಲು ಯತ್ನಿಸಿದ ಸುಂದರ್‌ ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ ನೀಡಿ ನಿರ್ಗಮಿಸಿದರು. ಇದನ್ನೂ ಓದಿ: Ind vs Aus: ವೈಟ್‌ವಾಶ್‌ನಿಂದ ತಪ್ಪಿಸಿಕೊಳ್ಳಲು ಆಸೀಸ್‌ ತವಕ – ಭಾರತಕ್ಕೆ 353 ರನ್‌ಗಳ ಗುರಿ

57 ಎಸೆತಗಳಲ್ಲಿ 81 ರನ್‌ (6 ಸಿಕ್ಸರ್‌, 5 ಬೌಂಡರಿ) ಗಳಿಸಿ ಆಡುತ್ತಿದ್ದ ರೋಹಿತ್‌ ಶರ್ಮಾ‌, ಮ್ಯಾಕ್ಸ್‌ವೆಲ್‌ ಬೌಲಿಂಗ್‌ನಲ್ಲೇ ಸುಲಭ ಕ್ಯಾಚ್‌ಗೆ ತುತ್ತಾದರು. ಈ ಬೆನ್ನಲ್ಲೇ ರೋಹಿತ್‌ ಶರ್ಮಾ ಜೊತೆಗೂಡಿ 2ನೇ ವಿಕೆಟ್‌ಗೆ 61 ಎಸೆತಗಳಲ್ಲಿ 71 ರನ್‌ ಜೊತೆಯಾಟ ನೀಡಿದ್ದ ವಿರಾಟ್‌ ಕೊಹ್ಲಿ ಸಹ 56 ರನ್‌ (61 ಎಸೆತ, 1 ಸಿಕ್ಸರ್‌, 5 ಬೌಂಡರಿ) ಗಳಿಸಿ ಮ್ಯಾಕ್ಸ್‌ವೆಲ್‌ಗೆ ವಿಕೆಟ್‌ ಒಪ್ಪಿಸಿದರು. ನಂತರ ತಂಡದಲ್ಲಿ ಗೆಲುವಿನ ಭರವಸೆ ಮೂಡಿಸಿದ್ದ ಶ್ರೇಯಸ್‌ ಅಯ್ಯರ್‌ ಕೂಡ 48 ರನ್‌ (43 ಎಸೆತ, 2 ಸಿಕ್ಸರ್‌, 1 ಬೌಂಡರಿ) ಗಳಿಸಿ ಪೆವಿಲಿಯನ್‌ ಸೇರಿಕೊಂಡರು.

ಬ್ಯಾಟಿಂಗ್‌ನಲ್ಲಿ ಕೇವಲ 5 ರನ್‌ ಗಳಿಸಿ ಕೈಕೊಟ್ಟಿದ್ದ ಮ್ಯಾಕ್ಸ್‌ವೆಲ್‌ ಟೀಂ ಇಂಡಿಯಾ ವಿರುದ್ಧ ಮಿಂಚಿನ ಬೌಲಿಂಗ್‌ ದಾಳಿ ನಡೆಸುವ ಮೂಲಕ ಆಸೀಸ್‌ ತಂಡದ ಗೆಲುವಿಗೆ ಕಾರಣವಾದರು. 10 ಓವರ್‌ಗಳಲ್ಲಿ 40 ರನ್‌ ಬಿಟ್ಟುಕೊಟ್ಟ ಮ್ಯಾಕ್ಸ್‌ವೆಲ್‌, ವಾಷಿಂಗ್ಟನ್‌ ಸುಂದರ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ಶ್ರೇಯಸ್‌ ಅಯ್ಯರ್‌ ಪ್ರಮುಖರ ವಿಕೆಟ್‌ ಪಡೆಯುವ ಮೂಲಕ ಗೆಲುವು ತಂದುಕೊಟ್ಟರು.

ಉಳಿದಂತೆ ಟೀಂ ಇಂಡಿಯಾ ಪರ ಕೆ.ಎಲ್‌ ರಾಹುಲ್‌ 26 ರನ್‌, ರವೀಂದ್ರ ಜಡೇಜಾ 35 ರನ್‌, ಸೂರ್ಯಕುಮಾರ್‌ ಯಾದವ್‌ 8 ರನ್‌, ಕುಲ್ದೀಪ್‌ ಯಾದವ್‌ 2 ರನ್‌, ಜಸ್ಪ್ರೀತ್‌ ಬುಮ್ರಾ 5 ರನ್‌ ಹಾಗೂ ಮೊಹಮ್ಮದ್‌ ಸಿರಾಜ್‌ 1 ರನ್‌ ಗಳಿಸಿದ್ರೆ, ಪ್ರಸಿದ್ಧ್‌ ಕೃಷ್ಣ ರನ್‌ ಗಳಿಸದೇ ಅಜೇಯರಾಗುಳಿದರು. ಆಸೀಸ್‌ ಪರ ಜಾಶ್‌ ಹ್ಯಾಜಲ್‌ವುಡ್‌ 2 ವಿಕೆಟ್‌ ಕಿತ್ತರೆ, ಮಿಚೆಲ್‌ ಸ್ಟಾರ್ಕ್‌, ಪ್ಯಾಟ್‌ ಕಮ್ಮಿನ್ಸ್‌, ಕ್ಯಾಮರೂನ್‌ ಗ್ರೀನ್‌, ತನ್ವೀರ್‌ ಸಂಘ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಕ್ರೀಸ್‌ಗಿಳಿದ ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಟೀಂ ಇಂಡಿಯಾ ಬೌಲರ್‌ಗಳನ್ನ ಬೆಂಡೆತ್ತಿದರು. ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್‌ ವಾರ್ನರ್‌ ಹಾಗೂ ಮಿಚೆಲ್‌ ಮಾರ್ಷ್‌ ಮೊದಲ ವಿಕೆಟ್‌ಗೆ 8.1 ಓವರ್‌ಗಳಲ್ಲಿ 78 ರನ್‌ಗಳ ಜೊತೆಯಾಟ ನೀಡಿದರು. 34 ಎಸೆತಗಳಲ್ಲಿ 56 ರನ್‌ (4 ಸಿಕ್ಸರ್‌, 6 ಬೌಂಡರಿ) ಗಳಿಸಿ ಡೇವಿಡ್‌ ವಾರ್ನರ್‌ ಔಟಾಗುತ್ತಿದ್ದಂತೆ, ಮಿಚೆಲ್‌ ಮಾರ್ಷ್‌ ಹಾಗೂ ಸ್ಟೀವ್‌ ಸ್ಮಿತ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. 2ನೇ ವಿಕೆಟ್‌ಗೆ ಈ ಜೋಡಿ 119 ಎಸೆತಗಳಲ್ಲಿ 137 ರನ್‌ ಬಾರಿಸಿತ್ತು.

ಕಳೆದ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಮಿಚೆಲ್‌ ಮಾರ್ಷ್‌ ಅಂತಿಮ ಪಂದ್ಯದಲ್ಲಿ ಶತಕ ವಂಚಿತರಾಗಿ ನಿರ್ಗಮಿಸಿದರು. 84 ಎಸೆತಗಳನ್ನು ಎದುರಿಸಿದ ಮಾರ್ಷ್‌ 96 ರನ್‌ (13 ಬೌಂಡರಿ, 3 ಸಿಕ್ಸರ್‌) ಬಾರಿಸಿದ್ರೆ, ಸ್ಟೀವ್‌ ಸ್ಮಿತ್‌ 61 ಎಸೆತಗಳಲ್ಲಿ 74 ರನ್‌ (8 ಬೌಂಡರಿ, 1 ಸಿಕ್ಸರ್‌) ರನ್‌ ಚಚ್ಚಿದರು. 27 ಓವರ್‌ಗಳಲ್ಲಿ ಕೇವಲ 1 ವಿಕೆಟ್‌ ಕಳೆದುಕೊಂಡಿದ್ದ ಆಸೀಸ್‌ ಪಡೆ 400 ರನ್‌ಗಳನ್ನು ಕಲೆಹಾಕುವ ಭರವಸೆ ಮೂಡಿಸಿತ್ತು. ಆದ್ರೆ ಸ್ಟೀವ್‌‌ ಸ್ಮಿತ್‌, ಮಿಚೆಲ್‌ ಮಾರ್ಚ್‌ ವಿಕೆಟ್‌ ಪತನ ಬಳಿಕ ರನ್‌ ವೇಗ ಕೂಡ ಕಡಿಮೆಯಾಯಿತು.

ಅಂತಿಮವಾಗಿ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 352 ರನ್‌ ಗಳಿಸಿತು. ಆಸೀಸ್‌ ಪರ ಮಾರ್ನಸ್‌ ಲಾಬುಶೇನ್‌ 72 ರನ್‌ (9 ಬೌಂಡರಿ, 58 ಎಸೆತ), ಅಲೆಕ್ಸ್‌ ಕ್ಯಾರಿ 11 ರನ್‌, ಗ್ಲೇನ್‌ ಮ್ಯಾಕ್ಸ್‌ವೆಲ್‌ 5 ರನ್‌, ಕ್ಯಾಮರೂನ್‌ ಗ್ರೀನ್‌ 9 ರನ್‌ ಗಳಿಸಿ ಪೆವಿಲಿಯನ್‌ ಸೇರಿದರು. ಕೊನೆಯಲ್ಲಿ ಪ್ಯಾಟ್‌ ಕಮ್ಮಿನ್ಸ್‌ 19 ರನ್‌ ಹಾಘೂ ಮಿಚೆಲ್‌ ಸ್ಟಾರ್ಕ್‌ 1 ರನ್‌ ಗಳಿಸಿ ಅಜೇಯರಾಗುಳಿದರು.

ಟೀಂ ಇಂಡಿಯಾ ಪರ ವೇಗಿ ಜಸ್ಪ್ರೀತ್‌ ಬುಮ್ರಾ 3 ವಿಕೆಟ್‌ ಕಿತ್ತರೆ, ಕುಲ್ದೀಪ್‌ ಯಾದವ್‌ 2 ವಿಕೆಟ್‌ ಹಾಗೂ ಮೊಹಮ್ಮದ್‌ ಸಿರಾಜ್‌, ಪ್ರಸಿದ್ಧ್‌ ಕೃಷ್ಣ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್