ನೀವು ಗಡ್ಡ ಟ್ರಿಮ್‌ ಮಾಡಿ ಬೇಗ ಮದುವೆಯಾಗಿ: ರಾಹುಲ್‌ ಗಾಂಧಿಗೆ ಲಾಲು ಯಾದವ್‌ ಸಲಹೆ

Public TV
1 Min Read

ಪಾಟ್ನಾ: ರಾಹುಲ್‌ ಗಾಂಧಿ (Rahul Gandhi) ಅವರು ಗಡ್ಡ ಟ್ರಿಮ್‌ ಮಾಡಿ ಬೇಗ ಮದುವೆ ಆಗಬೇಕು ಎಂದು ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ (Lalu Prasad Yadav) ಸಲಹೆ ನೀಡಿದರು. ಈ ಮಾತು ಕೇಳಿ ರಾಹುಲ್‌ ಗಾಂಧಿ ಹಾಗೂ ಸಭೆಯಲ್ಲಿದ್ದವರೆಲ್ಲ ನಗೆ ಬೀರಿದರು.

ಪಾಟ್ನಾದಲ್ಲಿ ನಡೆದ ಪ್ರತಿಪಕ್ಷಗಳ ಏಕತಾ ಸಭೆಯಲ್ಲಿ ಭಾಗವಹಿಸಿದ್ದ ಆರ್‌ಜೆಡಿ (RJD) ನಾಯಕ ಲಾಲು ಪ್ರಸಾದ್, ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ಯಾತ್ರೆಯಿಂದ (Bharat Jodo Yatra) ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ನಮ್ಮ ಮಾತು ಕೇಳಿ ಈಗಲೇ ಮದುವೆಯಾಗಬೇಕು ಎಂದು ಹೇಳಿದರು. ಇದನ್ನೂ ಓದಿ: ಮೊದಲ ಬಾರಿಗೆ ಲೈಫ್‌ ಪಾರ್ಟ್ನರ್‌ ಬಗ್ಗೆ ಮಾತನಾಡಿದ ರಾಹುಲ್‌ ಗಾಂಧಿ

ಈ ವಿಚಾರವಾಗಿ ನಿಮ್ಮ ತಾಯಿ ಯಾವಾಗಲೂ ನಮ್ಮಲ್ಲಿ ದೂರುತ್ತಾರೆ. ನೀವು ಅವರ ಮಾತನ್ನು ಕೇಳುವುದಿಲ್ಲವಂತೆ. ನಮ್ಮ ಮಾತು ಕೇಳಿ, ಈಗಲೇ ಒಂದು ನಿರ್ಧಾರಕ್ಕೆ ಬನ್ನಿ ಎಂದು ಸಲಹೆ ಕೊಟ್ಟರು.

ಈ ಮಾತಿಗೆ 53 ವಯಸ್ಸಿನ ರಾಹುಲ್‌ ಗಾಂಧಿ ನಗೆ ಬೀರಿದರು. ನಂತರ ಪ್ರತಿಕ್ರಿಯಿಸಿದ ಅವರು, ಈಗ ನೀವು ಹೇಳಿದ್ದೀರಿ. ಖಂಡಿತ ಅದು ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ: ಹೈಕಮಾಂಡ್‌ಗೆ ಸೋಮಣ್ಣ ಮನವಿ

ಭಾರತ್‌ ಜೋಡೋ ಯಾತ್ರೆ ವೇಳೆ ಸಂದರ್ಶನವೊಂದರಲ್ಲಿ ರಾಹುಲ್‌ ಗಾಂಧಿಗೆ ಮದುವೆ ಕುರಿತು ಪ್ರಶ್ನೆ ಕೇಳಲಾಗಿತ್ತು. ನನ್ನ ಬಾಳ ಸಂಗಾತಿಯಾಗುವವರಿಗೆ ತಾಯಿ ಸೋನಿಯಾ ಗಾಂಧಿ ಮತ್ತು ಅಜ್ಜಿ ಇಂದಿರಾ ಗಾಂಧಿ ಇಬ್ಬರ ಗುಣಗಳು ಇರಬೇಕು. ಅಂತಹ ಸಂಗಾತಿಯೊಂದಿಗೆ ಜೀವನ ನಡೆಸಲು ನಾನು ಬಯಸುತ್ತೇನೆ ಎಂದು ಕಾಂಗ್ರೆಸ್ ನಾಯಕ ಪ್ರತಿಕ್ರಿಯಿಸಿದ್ದರು.

Share This Article