ಬಿಜೆಪಿಯ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ನೆರವಿಗಾಗಿಯೇ ಕಾಂಗ್ರೆಸ್ ಗ್ಯಾರಂಟಿಗಳನ್ನ ತಂದಿದೆ: ದಿನೇಶ್ ಗುಂಡೂರಾವ್

By
3 Min Read

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳು (Congress Guarantee) ಸರ್ಕಾರದ ಮೇಲೆ ಸಾಕಷ್ಟು ಹೊರೆ ಆಗುತ್ತಿದ್ದರೂ, ರಾಜ್ಯದ ಜನಸಾಮಾನ್ಯರ ಹೊರೆ ಇಳಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಬಿಜೆಪಿಗೆ (BJP) ತಿರುಗೇಟು ನೀಡಿರುವ ಗುಂಡೂರಾವ್, ಕೇಂದ್ರ ಬಿಜೆಪಿ ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದ ಬೆಲೆ ಏರಿಕೆ ಬಿಸಿ ಜನಸಾಮಾನ್ಯನಿಗೆ ತಟ್ಟಿದೆ. ಜನರ ಮೇಲಾಗಿರುವ ಬೆಲೆ ಏರಿಕೆಯ ಹೊರೆ ಕಡಿಮೆ ಮಾಡಲೆಂದೇ ಕಾಂಗ್ರೆಸ್ ಐದು ಗ್ಯಾರಂಟಿಗಳನ್ನ ತರಬೇಕಾಯ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರ ಅಧಿಕಾರವಧಿ ಅರ್ಧಕ್ಕೆ ಅಂತ ಯಾರೂ ಹೇಳಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮಹಿಳೊಯೊಬ್ಬರು ಅಕ್ಕಿ ಬೇಳೆ ಕಾಳುಗಳ ಬೆಲೆ ಏರಿಕೆ ಕಡಿಮೆ ಮಾಡಿ ಎಂದು ಮನವಿ ಮಾಡಿದ್ದರು. ಮಹಿಳೆಯ ವೀಡಿಯೋವನ್ನ ಟ್ವೀಟ್ ಮಾಡಿದ್ದ ಬಿಜೆಪಿ, ಸರ್ಕಾರದ ವಿರುದ್ಧ ಮಹಿಳೆಯರು ತಿರುಗಿ ಬಿದ್ದಿದ್ದಾರೆ ಎಂದು ಆರೋಪಿಸಿತ್ತು.

ಬಿಜೆಪಿ ಟ್ವೀಟ್‍ಗೆ ತಿರುಗೇಟು ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬೆಲೆ ಏರಿಕೆ ಕೇಂದ್ರ ಬಿಜೆಪಿ ಸರ್ಕಾರದ ಕುರುಡು ಆರ್ಥಿಕ ನೀತಿಗಳಿಂದ ಆಗಿರುವುದು. ಬೆಲೆ ಏರಿಕೆಗೆ ಮೋದಿಯವರಲ್ಲದೇ ಬೇರೆ ಯಾರು ಕಾರಣ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಗೆ ಆತ್ಮಸಾಕ್ಷಿ ಇದ್ದರೆ ಬೆಲೆ ಏರಿಕೆಗೆ ಯಾರು ಕಾರಣ ಎಂದು ತಮ್ಮನ್ನ ತಾವು ಪ್ರಶ್ನಿಸಿಕೊಳ್ಳಲಿ ಎಂದಿದ್ದಾರೆ.

ಜನಸಾಮಾನ್ಯರಿಗೆ ನೇರವಾಗಿ ಬಿಸಿ ತಟ್ಟುವಂತಹ ನಾಲ್ಕು ಉತ್ಪನ್ನಗಳ ಬೆಲೆ ಏರಿಕೆಯ ಪಟ್ಟಿಯನ್ನು ಟ್ವೀಟ್ ಮಾಡಿರುವ ಅವರು, ಇದಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿದ್ದಾರೆ. 65 ರೂ. ಇದ್ದ ಪೆಟ್ರೋಲ್ 103 ಆಯ್ತು, 50 ರೂ. ಇದ್ದ ಡೀಸೆಲ್ 90 ರೂ. ಏರಿಸಿದ್ರು. 80 ರೂ. ಇದ್ದ ಅಡುಗೆ ಎಣ್ಣೆ 170 ರೂ. ಗೆ, 400 ರೂ. ಇದ್ದ ಸಿಲಿಂಡರ್ ಗ್ಯಾಸ್ 1,150 ರೂ.ಗೆ ಏರಿಸಿದ್ದು ನಾವಾ ಮೋದಿಯವರಾ (Narendra Modi) ಎಂದು ಬಿಜೆಪಿಯನ್ನ ಪ್ರಶ್ನಿಸಿದ್ದಾರೆ.

ಇಷ್ಟೊಂದು ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯನ ಹೊರೆ ಇಳಿಸಲೆಂದೇ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹಜ್ಯೋತಿಯಂತಹ ಕಾರ್ಯಕ್ರಮಗಳನ್ನ ತರಬೇಕಾಯ್ತು ಎಂದು ಗುಂಡೂರಾವ್ ಮಾಹಿತಿ ಹಂಚಿಕೊಂಡಿದ್ದಾರೆ. ಐದು ಗ್ಯಾರಂಟಿಗಳಿಂದ ಸರ್ಕಾರಕ್ಕೆ ಹೊರೆಯಾಗಬಹುದು. ಆದರೆ ಜನರನ್ನ ಬೆಲೆ ಏರಿಕೆಯಿಂದ ರಕ್ಷಿಸುವುದು ಮುಖ್ಯವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮಹಿಳೆಯರು ಬಿಜೆಪಿ ವಿರುದ್ಧ ತಿರುಗಿಬಿದ್ದು ಚುನಾವಣೆಯಲ್ಲಿ ಫಲಿತಾಂಶವನ್ನು ಕೊಟ್ಟಿದ್ದಾರೆ. ಕರ್ನಾಟಕ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಬೆಲೆ ಏರಿಕೆ ವಿರುದ್ಧ ಮಹಿಳೆಯರ ಸಿಟ್ಟು ಸೆಡವು ಸ್ಪಷ್ಟವಾಗಿ ಕಾಣಿಸುತ್ತದೆ. ಹೀಗಿರುವಾಗ ಬಿಜೆಪಿ ಆಕಾಶಕ್ಕೆ ಉಗುಳುವ ಮೂರ್ಖತನ ಏಕೆ ಮಾಡುತ್ತಿದೆ ಎಂದು ಗುಂಡೂರಾವ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನನ್ನ ಲಿವರ್ ಏನು ಕಬ್ಬಿಣದ್ದಾ? ಹಗಲು ರಾತ್ರಿ ಮದ್ಯಪಾನ ಆರೋಪಕ್ಕೆ ಭಗವಂತ್ ಮಾನ್ ತಿರುಗೇಟು

Share This Article