ಒಡಿಶಾ ರೈಲು ದುರಂತ – ಅಪಘಾತವಾಗಿ 51 ಗಂಟೆಗಳ ಬಳಿಕ ಮೊದಲ ರೈಲು ಸಂಚಾರ

Public TV
2 Min Read

ಭುವನೇಶ್ವರ: ದೇಶದ ಇತಿಹಾಸದಲ್ಲೇ ಅತ್ಯಂತ ಭೀಕರ ಎನಿಸಿಕೊಂಡ ಬಾಲಸೋರ್‌ನಲ್ಲಿ ನಡೆದ ರೈಲುಗಳ ಅಪಘಾತವಾಗಿ (Odisha Train Tragedy) ಇದೀಗ ಹಳಿಗಳನ್ನು ದುರಸ್ತಿ ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದ್ದಾರೆ. ಅಪಘಾತವಾಗಿ 51 ಗಂಟೆಗಳಲ್ಲಿ ಮೊದಲ ರೈಲು ಹಳಿಯಲ್ಲಿ ಸಂಚರಿಸಿದ್ದು, ಇದೀಗ ಕಾರ್ಯಾಚರಣೆ ಪುನರಾರಂಭವಾಗಿದೆ.

ಒಡಿಶಾದ (Odisha) ಬಾಲಸೋರ್‌ನಲ್ಲಿ (Balasore) ನಡೆದ ತ್ರಿವಳಿ ರೈಲು ಅಪಘಾತದಲ್ಲಿ (Train Accident) 275 ಜನರು ಸಾವನ್ನಪ್ಪಿದ್ದರು ಹಾಗೂ 1,100 ಕ್ಕೂ ಹೆಚ್ಚು ಜನರು ಗಾಯಗೊಂಡರು. ಘಟನೆ ಬಳಿಕ ದುರಸ್ತಿ ಮಾಡಲಾದ ಹಳಿಗಳ ಮೂಲಕ ಮೊದಲ ರೈಲು ಸಂಚರಿಸಿದ ಸಂದರ್ಭ ರೈಲ್ವೆ ಸಚಿವರು ಖುದ್ದಾಗಿ ಸ್ಥಳದಲ್ಲಿ ಹಾಜರಿದ್ದರು.

ಎರಡೂ ಹಳಿಗಳನ್ನು ದುರಸ್ತಿ ಮಾಡಲಾಗಿದೆ. 51 ಗಂಟೆಗಳಲ್ಲಿ ರೈಲುಗಳ ಸಂಚಾರವನ್ನು ಸಾಮಾನ್ಯಗೊಳಿಸಲಾಗಿದೆ. ಈಗಿನಿಂದ ರೈಲುಗಳ ಸಂಚಾರ ಮತ್ತೆ ಪ್ರಾರಂಭವಾಗುತ್ತದೆ. ಟ್ರ್ಯಾಕ್ ಲೈನ್ ಈಗ ರೈಲಿಗೆ ಸರಿಹೊಂದಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಇದನ್ನೂ ಓದಿ: ಭವಿಷ್ಯದ ಬಗ್ಗೆ ಮೋದಿ ಮಾತನಾಡಲ್ಲ, ವೈಫಲ್ಯಗಳಿಗೆ ಬೇರೆಯವರನ್ನು ದೂರುತ್ತಾರೆ: ರಾಹುಲ್ ಕಿಡಿ

ಘಟನೆಯೇನು?
3 ರೈಲುಗಳಾದ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಹಾಗೂ ಗೂಡ್ಸ್ ರೈಲುಗಳ ನಡುವೆ ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಭೀಕರ ಅಪಘಾತ ಸಂಭವಿಸಿತ್ತು. ಇದನ್ನು ಭಾರತದಲ್ಲೇ ಸಂಭವಿಸಿದ 3 ಅತ್ಯಂತ ಕೆಟ್ಟ ರೈಲ್ವೆ ಅಪಘಾತಗಳಲ್ಲಿ ಒಂದು ಎಂದು ಹೇಳಲಾಗಿದೆ.

ಕೋರಮಂಡಲ್ ಎಕ್ಸ್‌ಪ್ರೆಸ್ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಅದರ ಹಲವು ಬೋಗಿಗಳು ಚದುರಿ ಹೋಗಿದ್ದವು. ಇದೇ ವೇಳೆ ಪಕ್ಕದ ಹಳಿಯಲ್ಲಿ ಹಾದು ಹೋಗುತ್ತಿದ್ದ ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ರೈಲಿಗೂ ಬೋಗಿಗಳು ಡಿಕ್ಕಿ ಹೊಡೆದು, ಅದರ ಕೆಲವು ಬೋಗಿಗಳೂ ಹಳಿ ತಪ್ಪಿದ್ದವು.

ವರದಿಗಳ ಪ್ರಕಾರ ಸುಮಾರು 260 ಗಾಯಾಳುಗಳು ಒಡಿಶಾದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಸುಮಾರು 900 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ದುರಂತ ವಿಧ್ವಂಸಕ ಕೃತ್ಯವೇ? – ಪ್ರಾಥಮಿಕ ತನಿಖೆಯ ಬೆನ್ನಲ್ಲೇ ಎದ್ದಿವೆ ಹಲವು ಪ್ರಶ್ನೆಗಳು

Share This Article