ಒಡಿಶಾ ರೈಲು ದುರಂತ ವಿಧ್ವಂಸಕ ಕೃತ್ಯವೇ? – ಪ್ರಾಥಮಿಕ ತನಿಖೆಯ ಬೆನ್ನಲ್ಲೇ ಎದ್ದಿವೆ ಹಲವು ಪ್ರಶ್ನೆಗಳು

Public TV
4 Min Read

ನವದೆಹಲಿ: ಬರೋಬ್ಬರಿ 275 ಮಂದಿಯ ಜೀವ ಬಲಿ ಪಡೆದ ಬಾಲಸೋರ್ ತ್ರಿವಳಿ ರೈಲು ದುರಂತ (Odisha Train Tragedy) ಪ್ರಕರಣ ಇಡೀ ದೇಶವನ್ನೆ ಆಘಾತಕ್ಕೀಡು ಮಾಡಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿ ಪೋಸ್ಟ್ ಮಾರ್ಟಂ ನಡೆಯುತ್ತಿದ್ದು, ಘಟನೆಗೆ ಅಸಲಿ ಕಾರಣಗಳೇನು ಎಂಬುದು ಒಂದೊಂದಾಗಿಯೇ ಬಯಲಿಗೆ ಬರುತ್ತಿದೆ.

ದೇಶ ಕಂಡ 3ನೇ ಅತಿ ದೊಡ್ಡ ರೈಲು ಅಪಘಾತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಸಿಗ್ನಲಿಂಗ್ ಮತ್ತು ಎಲೆಕ್ಟ್ರಾನಿಕ್ ಇಂಟರ್‌ಲಾಕ್ ಸಿಸ್ಟಮ್ ಕಾರಣದಿಂದ ಈ ಘೋರ ದುರಂತ ಸಂಭವಿಸಿದೆ ಎಂಬ ಮಾಹಿತಿ ರೈಲ್ವೇ ಇಲಾಖೆಯ ಪ್ರಾಥಮಿಕ ವರದಿಯಲ್ಲಿದೆ.

ಮುಖ್ಯವಾದ ಹಳಿ ಸರಿಯಿದ್ದರೂ ಇದ್ದಕ್ಕಿಂದ್ದಂತೆ ಗೂಡ್ಸ್ ರೈಲು ನಿಂತಿದ್ದ ಲೂಪ್ ಲೈನ್‌ಗೆ ಕೋರಮಂಡಲ್ ಎಕ್ಸ್‌ಪ್ರೆಸ್ ಬಂದಿದ್ದು ಯಾಕೆ? ಇಂಟರ್‌ಲಾಕ್ ಸಿಸ್ಟಂ ಬದಲಾಗಿದ್ದು ಯಾಕೆ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಹಲವು ಅನುಮಾನಗಳು ಎದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ಹೆಗಲಿಗೆ ವಹಿಸಲಾಗಿದೆ.

ಆಗಿರುವ ತಪ್ಪನ್ನು ಖುದ್ದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕೂಡಾ ಒಪ್ಪಿಕೊಂಡಿದ್ದಾರೆ. ದುರಂತಕ್ಕೆ ಕಾರಣ ಏನೆಂದು ಗೊತ್ತಾಗಿದೆ. ಯಾರು ಕಾರಣ ಎಂಬುದನ್ನು ಪತ್ತೆ ಹಚ್ಚಲಾಗಿದೆ. ಕ್ರಮವಷ್ಟೇ ಬಾಕಿ ಉಳಿದಿದೆ ಎಂದು ರೈಲ್ವೇ ಮಂತ್ರಿ ಹೇಳಿಕೊಂಡಿದ್ದಾರೆ.

ಯಾಕೆ ಅನುಮಾನ?
ಪ್ರಧಾನಿ ನರೇಂದ್ರ ಮೋದಿ ಅವರು ಈ ದುರ್ಘಟನೆಗೆ ಕಾರಣರಾದ ತಪ್ಪಿತಸ್ಥರು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇದು ವಿಧ್ವಂಸಕ ಕೃತ್ಯ ಎಂದು ಖಚಿತವಾಗದ ಹೊರತು ಮೋದಿ ಈ ಪದವನ್ನು ಬಳಸುವ ಸಾಧ್ಯತೆ ಇಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಹಿಂದೆ ಸಿಡಿಎಸ್‌ ಬಿಪಿನ್‌ ರಾವತ್‌ ಅವರ ಹೆಲಿಕಾಪ್ಟರ್‌ ಪತನಗೊಂಡ ಸಮಯದಲ್ಲಿ ಸರ್ಕಾರದ ಕಡೆಯಿಂದ ಯಾವುದೇ ಈ ರೀತಿಯ ಹೇಳಿಕೆ ಬಂದಿರಲಿಲ್ಲ. ಆದರೆ ಇಲ್ಲಿ ಪ್ರಧಾನಿ ಬಾಯಿಯಿಂದಲೇ ಈ ಹೇಳಿಕೆ ಬಂದಿದೆ. ಪ್ರಾಥಮಿಕ ತನಿಖೆ ಮತ್ತು ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದೆ ಎನ್ನಲಾಗುತ್ತಿದೆ.

ಘೋರ ದುರಂತಕ್ಕೆ ಕಾರಣಗಳೇನು?
ಭೀಕರ ರೈಲ್ವೆ ಅಪಘಾತಕ್ಕೆ 2 ಮುಖ್ಯ ಕಾರಣಗಳಿವೆ ಎನ್ನಲಾಗಿದೆ. ಅವುಗಳಲ್ಲಿ ಮೊದಲನೆಯದ್ದು ಇಂಟರ್‌ಲಾಕ್ ಸಿಸ್ಟಂ ವೈಫಲ್ಯ. ಯಾವುದೇ ರೈಲು ಯಾವ ನಿಲ್ದಾಣಕ್ಕೆ ಯಾವ ಟ್ರ‍್ಯಾಕ್‌ನ ಮೂಲಕ ಹೋಗಬೇಕು, ನಿರ್ಗಮಿಸಬೇಕು ಎಂಬುದನ್ನು ಇಂಟರ್ ಲಾಕ್‌ನ ಮೂಲಕ ನಿರ್ಧಾರ ಮಾಡಲಾಗುತ್ತದೆ. ಮಾರ್ಗ ಬದಲಾವಣೆಗೂ ಇಂಟರ್ ಲಾಕ್ ಸಿಸ್ಟಮ್ ಅನ್ನೇ ಬಳಸಲಾಗುತ್ತಿದೆ. ಇದರಲ್ಲಿ ದೋಷವಿರುವ ಬಗ್ಗೆ ಕಿರಿಯ ಅಧಿಕಾರಿಗಳು ಫೆಬ್ರವರಿ 9 ರಂದೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿರಲಿಲ್ಲ ಎನ್ನಲಾಗುತ್ತಿದೆ.

ಅಪಘಾತಕ್ಕೆ 2ನೇ ಕಾರಣ ಸಿಗ್ನಲಿಂಗ್ ವ್ಯವಸ್ಥೆಯ ದೋಷ. ಪಾರಾದೀಪ್‌ನಿಂದ ಮುಖ್ಯ ಲೈನ್‌ನಲ್ಲಿ ತೆರಳುತ್ತಿದ್ದ ಗೂಡ್ಸ್ ರೈಲನ್ನು ಕೋರಮಂಡಲ್ ರೈಲಿಗೆ ದಾರಿ ಮಾಡಿಕೊಡಲು ಬಹನಾಗ್ ನಿಲ್ದಾಣದಲ್ಲಿ ಲೂಪ್ ಲೈನ್‌ಗೆ ತರಲಾಗಿತ್ತು. ಲೂಪ್ ಲೈನ್ ಅನ್ನು ರೆಡ್‌ನಲ್ಲಿ ಇರಿಸಿ, ಕೋರಮಂಡಲ್‌ಗೆ ಮುಖ್ಯ ಲೈನ್‌ನಲ್ಲಿ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಇದನ್ನು ತ್ರೂ ಲೈನ್ ಎನ್ನುತ್ತಾರೆ. ಹೀಗೆ ಸಿಗ್ನಲ್ ನೀಡಿದಾಗ ಹಳಿ ಬಳಿಯ ಪಾಯಿಂಟ್ ಬದಲಾಗಬೇಕು. ಕೋರಮಂಡಲ್ ಮುಖ್ಯ ಲೈನ್‌ನಲ್ಲಿ ತೆರಳುವಂತೆ ತ್ರೂ ಆಗಬೇಕು. ಆದರೆ ತ್ರೂ ಆಗಿಲ್ಲ. ಸಿಗ್ನಲ್ ಮತ್ತು ಪಾಯಿಂಟ್ ನಡುವೆ ಲೋಪ ಉಂಟಾಗಿದೆ. ಇದನ್ನೂ ಓದಿ: ಒಡಿಶಾ ರೈಲು ದುರಂತದ ತನಿಖೆ ಸಿಬಿಐ ಹೆಗಲಿಗೆ

ಸಿಗ್ನಲ್ ಸರಿಯಾಗಿದ್ದರೂ ಪಾಯಿಂಟ್ ಬದಲಾಗದ ಕಾರಣ ಗೂಡ್ಸ್ ಇದ್ದ ಲೂಪ್ ಲೈನ್‌ಗೆ ಕೋರಮಂಡಲ್ ಕೂಡ ಎಂಟ್ರಿ ಕೊಟ್ಟಿದೆ. ಇಲ್ಲಿ ಸಿಗ್ನಲ್ ಕೊಟ್ಟರೂ ರೈಲು ಲೂಪ್ ಲೈನ್‌ನಲ್ಲಿ ಹೋಗಿದ್ದಕ್ಕೆ ಕಾರಣವೇನು? ಸ್ಟೇಷನ್ ಮಾಸ್ಟರ್ ನಿರ್ಲಕ್ಷ್ಯವೆ? ಎಂಬ ಪ್ರಶ್ನೆ ಎದ್ದಿದೆ. ಏಕೆಂದರೆ ಸಿಗ್ನಲ್ ನೀಡುವುದು ಹಾಗೂ ಪಾಯಿಂಟ್ ಬದಲಿಸುವ ಜವಾಬ್ದಾರಿ ಸ್ಟೇಷನ್ ಮಾಸ್ಟರ್‌ದೇ ಆಗಿರುತ್ತದೆ.

ಅಪಘಾತ ಹೇಗಾಯ್ತು?
ಒಡಿಶಾ ಬಾಲಸೋರ್‌ನ ಬಹನಾಗ ಬಜಾರ್ ರೈಲು ನಿಲ್ದಾಣದಲ್ಲಿ 4 ಹಳಿಗಳು ಇವೆ. ಈ ಪೈಕಿ ಎರಡು ಮುಖ್ಯ ಅಥವಾ ಮೇನ್ ಹಳಿಗಳು ಆಗಿದ್ದರೆ ಇನ್ನು ಎರಡು ಲೂಪ್ ಹಳಿಗಳು. ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದೇ ಇರಲು ಗೂಡ್ಸ್ ರೈಲುಗಳನ್ನು ನಿಲ್ದಾಣದ ಲೂಪ್ ಲೈನಿನಲ್ಲಿ ನಿಲ್ಲಿಸಿರುತ್ತಾರೆ. ಅದೇ ರೀತಿಯಾಗಿ ಒಂದು ಹಳಿಯಲ್ಲಿ ಗೂಡ್ಸ್ ರೈಲನ್ನು ನಿಲ್ಲಿಸಲಾಗಿತ್ತು. ಸಂಜೆಯ ವೇಳೆ ವೇಗವಾಗಿ ಮುಖ್ಯ ಹಳಿಯಲ್ಲಿ ಬರುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಸಿಸ್ಟಂನಿಂದ ಗೂಡ್ಸ್ ರೈಲು ನಿಂತಿದ್ದ ಹಳಿಯನ್ನು ಪ್ರವೇಶಿಸಿ ಗುದ್ದಿದೆ. ಈ ರೈಲು ಡಿಕ್ಕಿ ಹೊಡೆಯುವ ಸಮಯದಲ್ಲೇ ಇನ್ನೊಂದು ಮುಖ್ಯ ಹಳಿಯಲ್ಲಿ ಬೆಂಗಳೂರಿನಿಂದ ಹೌರಾಗೆ ಹೊರಟಿದ್ದ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಬಂದಿದೆ. ಗೂಡ್ಸ್ ರೈಲಿಗೆ ಗುದ್ದಿದ ರಭಸಕ್ಕೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು ಯಶವಂತಪುರದಿಂದ ಹೊರಟಿದ್ದ ರೈಲಿನ ಕೊನೆಯ ಎರಡು ಬೋಗಿಗಳ ಮೇಲೆ ಬಿದ್ದ ಪರಿಣಾಮ ಸಾವು ನೋವು ಹೆಚ್ಚಾಗಿದೆ. ಇದನ್ನೂ ಓದಿ: ಒಡಿಶಾ ರೈಲ್ವೆ ದುರಂತ – ಅನಾಥರಾದ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಂಡ ಅದಾನಿ ಗ್ರೂಪ್

Share This Article