ಮೈಸೂರು ಬಳಿ ರಸ್ತೆ ಅಪಘಾತಕ್ಕೆ 10 ಬಲಿ – ಪರಿಹಾರ ಘೋಷಿಸಿದ ಸಿಎಂ

Public TV
2 Min Read

ಬೆಂಗಳೂರು: ಮೈಸೂರಿನಲ್ಲಿ (Mysuru) ನಡೆದ ಖಾಸಗಿ ಬಸ್ ಹಾಗೂ ಇನ್ನೋವಾ ಕಾರಿನ ನಡುವಿನ ಭೀಕರ ಅಪಘಾತ (Accident) 10 ಜನರ ಬಲಿ ಪಡೆದುಕೊಂಡಿದೆ. ದುರ್ಘಟನೆಗೆ ಆಘಾತ ವ್ಯಕ್ತಪಡಿಸಿರುವ ಸಿಎಂ ಸಿದ್ದರಾಮಯ್ಯ (Siddaramaiah) ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ, ಮೈಸೂರು ಜಿಲ್ಲೆಯ ಟಿ ನರಸೀಪುರ (T Narasipur) ಬಳಿ ಸಂಭವಿಸಿದ ಅಪಘಾತದಲ್ಲಿ 10 ಮಂದಿ ಸಾವಿಗೀಡಾದ ಸುದ್ದಿ ಕೇಳಿ ಸಂಕಟವಾಯಿತು‌. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ದುರ್ಘಟನೆಯಲ್ಲಿ ಸಾವಿಗೀಡಾದವರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ರೂ. 2 ಲಕ್ಷ ಪರಿಹಾರ ನೀಡಲಾಗುವುದು. ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಖಾಸಗಿ ಬಸ್, ಇನ್ನೋವಾ ಭೀಕರ ಅಪಘಾತ- 10 ಮಂದಿ ದುರ್ಮರಣ

ಕೊಳ್ಳೇಗಾಲದ ಟಿ ನರಸೀಪುರ ಮುಖ್ಯ ರಸ್ತೆಯ ಕುರುಬೂರು ಗ್ರಾಮದ ಪಿಂಜರ ಪೋಲ್ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, 10 ಜನ ಸಾವನ್ನಪ್ಪಿದ್ದಾರೆ. ಡಿಕ್ಕಿಯ ರಭಸಕ್ಕೆ ಇನ್ನೋವಾ ಕಾರು ಗುರುತು ಸಿಗದಂತೆ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಸ್ಥಳೀಯರು ರಕ್ಷಿಸುವ ಕಾರ್ಯ ಮಾಡಿದ್ದಾರೆ. ಮಗು ಸೇರಿ ಹಲವರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಇದನ್ನೂ ಓದಿ: ಕಾರು, ಲಾರಿ ಮುಖಾಮುಖಿ ಡಿಕ್ಕಿ – ಕಾಂಗ್ರೆಸ್ ಮುಖಂಡ ಸ್ಥಳದಲ್ಲೇ ಸಾವು

ಸಾವನ್ನಪ್ಪಿರುವ 10 ಜನರಲ್ಲಿ ಮೂವರು ಮಕ್ಕಳು, ಮೂವರು ಮಹಿಳೆಯರು ಹಾಗೂ ನಾಲ್ವರು ಪುರುಷರು ಸೇರಿದ್ದಾರೆ. ಮೃತರನ್ನು ಮಂಜುನಾಥ್ (35), ಪೂರ್ಣಿಮಾ (30), ಕಾರ್ತಿಕ್ (8), ಪವನ್ (8), ಗಾಯತ್ರಿ (28), ಶ್ರಾವ್ಯ (5), ಕೋಟ್ಯರೇಶ್ (45), ಸುಜಾತಾ (40), ಸಂದೀಪ್ (23) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಮೂವರು ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. 16 ಜನ ಗಾಯಾಳುಗಳಿಗೆ ಟಿ ನರಸೀಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಕೆಆರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Share This Article