ಪತ್ನಿ ಜೊತೆ ಅನೈತಿಕ ಸಂಬಂಧ ಶಂಕೆ – ಪಾರ್ಟಿ ನೆಪದಲ್ಲಿ ಸ್ನೇಹಿತನ ಮರ್ಡರ್

Public TV
1 Min Read

ಚಿಕ್ಕಬಳ್ಳಾಪುರ: ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದ ಮೇರೆಗೆ ವ್ಯಕ್ತಿಯೊಬ್ಬ ಸ್ನೇಹಿತನನ್ನು ಪಾರ್ಟಿಗೆ ಕರೆದು ಕೊಲೆ (Murder) ಮಾಡಿರುವ ಘಟನೆ ದೇವನಹಳ್ಳಿಯ (Devanahalli) ಸಿಂಗ್ರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಪ್ರದೀಪ್ ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ವೆಂಕಟೇಶ್ ಹಾಗೂ ನಾಗೇಶ್ ಕೊಲೆ ಮಾಡಿದ ಆರೋಪಿಗಳು. ವೆಂಕಟೇಶ್ ಹಾಗೂ ಪ್ರದೀಪ್ ಇಬ್ಬರು ಸ್ನೇಹಿತರು. ಮನೆಗೆ ಬಂದು ಹೋಗುತ್ತಿದ್ದ ಪ್ರದೀಪ್, ಆರೋಪಿ ವೆಂಕಟೇಶ್ ಹೆಂಡತಿ ಜೊತೆ ಚಾಟಿಂಗ್ ಮಾಡುತ್ತಿದ್ದ. ಇದೇ ವಿಚಾರವಾಗಿ ಹಲವು ಬಾರಿ ವೆಂಕಟೇಶ್, ಪ್ರದೀಪ್‍ನಿಗೆ ವಾರ್ನಿಂಗ್ ಮಾಡಿದ್ದ. ಕಳೆದ ತಿಂಗಳು ಈ ವಿಚಾರ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ವಿಶ್ವನಾಥಪುರ ಪೊಲೀಸರು (Vishwanathapura Police Station) ಇಬ್ಬರನ್ನು ಕರೆಸಿ ಬುದ್ಧಿವಾದ ಹೇಳಿ ಕಳಿಸಿದ್ದರು. ಇದನ್ನೂ ಓದಿ: ಕೊಲೆ ಪಾತಕಿಗೆ ಜೀವಾವಧಿ ಶಿಕ್ಷೆ – 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯ

ಆದರೆ ಇಷ್ಟೆಲ್ಲ ನಡೆದ ಮೇಲೂ ಪ್ರದೀಪ್ ಮತ್ತೆ ಮತ್ತೆ ಕಾಲ್ ಹಾಗೂ ಮೆಸೇಜ್ ಮಾಡುತ್ತಿದ್ದ. ಇದೇ ಕಾರಣಕ್ಕೆ ಕಳೆದ ರಾತ್ರಿ ಪಾರ್ಟಿ ಮಾಡುವುದಾಗಿ ಗ್ರಾಮದ ಪಕ್ಕದ ಬಡಾವಣೆಯೊಂದಕ್ಕೆ ಕರೆಸಿಕೊಂಡಿದ್ದಾನೆ. ಈ ವೇಳೆ ಸ್ನೇಹಿತ ನಾಗೇಶನ ಜೊತೆ ಸೇರಿ ಪ್ರದೀಪ್ ಮೇಲೆ ಬಿಯರ್ ಬಾಟ್ಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಇತ್ತ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ್ದ ಪ್ರದೀಪ್, ಜೀವ ಉಳಿಸಿಕೊಳ್ಳಲು ಒಂದು ಕಿಲೋ ಮೀಟರ್ ಓಡಿ ಬಂದಿದ್ದಾನೆ. ಆದರೆ ಮನೆಯ ಬಳಿ ಬರುತ್ತಿದ್ದಂತೆ ಕಿರುಚಾಡಿಕೊಂಡು ಕುಸಿದು ಬಿದ್ದಿದ್ದಾನೆ. ಇದನ್ನು ಕಂಡು ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಆತನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಇಬ್ಬರು ಆರೋಪಿಗಳನ್ನು ವಿಶ್ವನಾಥಪುರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಾರಿಗೆ ಬಸ್‌ನಲ್ಲಿ ಅಕ್ರಮ ಗಾಂಜಾ ಸಾಗಾಟ – ಇಬ್ಬರ ಬಂಧನ

Share This Article