Exclusive: ವಿಜಯ್ ಸೇತುಪತಿ ಜೊತೆ ನಟಿಸ್ತಿರೋದೇ ಅದ್ಭುತ ಫೀಲಿಂಗ್- ರುಕ್ಮಿಣಿ ವಸಂತ್

Public TV
2 Min Read

‘ಬೀರ್‌ಬಲ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ರುಕ್ಮಿಣಿ ವಸಂತ್ (Rukmini Vasanth) ಅವರು ಕನ್ನಡದಲ್ಲಿ ನಟಿಸಿರುವ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ರಿಲೀಸ್‌ಗೆ ರೆಡಿಯಿದೆ. ಹೀಗಿರುವಾಗಲೇ ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ (Vijay Sethupathi) ಜೊತೆ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಇದೀಗ ತಮ್ಮ ಪಾತ್ರ, ವಿಜಯ್ ಜೊತೆ ನಟಿಸಿದ ಅನುಭವವನ್ನ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ರುಕ್ಮಿಣಿ ಹಂಚಿಕೊಂಡಿದ್ದಾರೆ.

‘ಘೋಸ್ಟ್’ ಶ್ರೀನಿ ನಿರ್ದೇಶನದ ಬೀರ್‌ಬಲ್ ಚಿತ್ರಕ್ಕೆ ನಾಯಕಿ ನಟಿಯಾಗಿ ಬೆಂಗಳೂರು ಬ್ಯೂಟಿ ರುಕ್ಮಿಣಿ ಎಂಟ್ರಿ ಕೊಟ್ಟರು. ಮೊದಲ ಸಿನಿಮಾದಲ್ಲೇ ನಟಿ ಗಮನ ಸೆಳೆದರು. ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ (Goldenstar Ganesh) ಜೊತೆ ‘ಬಾನದಾರಿಯಲಿ’, ರಕ್ಷಿತ್ ಶೆಟ್ಟಿ(Rakshit Shetty) ಜೊತೆ ‘ಸಪ್ತಸಾಗರದಾಚೆ ಎಲ್ಲೋ’, ಶ್ರೀಮುರಳಿ ಜೊತೆ ‘ಬಘೀರ’ ಸಿನಿಮಾ ತೆರೆಗೆ ಬರೋದ್ದಕ್ಕೆ ರೆಡಿಯಾಗಿದೆ. ಈ ಬೆನ್ನಲ್ಲೇ ಕಾಲಿವುಡ್‌ನತ್ತ ರುಕ್ಮಿಣಿ ಮುಖ ಮಾಡಿದ್ದಾರೆ. ತಮಿಳಿನ ನಟ ವಿಜಯ್ ಜೊತೆ ನಟಿಸುವ ಅವಕಾಶ ಹೇಗೆ ಸಿಕ್ತು.? ಎಂಬುದನ್ನ ನಟಿ ತಿಳಿಸಿದ್ದಾರೆ.

ಚಿತ್ರತಂಡ ಈ ಸಿನಿಮಾ ವಿಚಾರವಾಗಿ ನನಗೆ ಕರೆ ಮಾಡಿದ್ದರು. ಒಮ್ಮೆ ಭೇಟಿಯಾಗಿ ಸ್ಕ್ರಿಪ್ಟ್ ಬಗ್ಗೆ ಮಾತನಾಡಿದ್ದೇವು. ನನಗೆ ತಮಿಳಿನಲ್ಲಿ ಸ್ಪಷ್ಟತೆ ಇಲ್ಲದಿರೋ ಕಾರಣ ನೀವು ಯೋಚಿಸಿ ಎಂದು ತಂಡಕ್ಕೆ ತಿಳಿಸಿದ್ದೆ, ಆದರೆ ಚಿತ್ರತಂಡ ನನ್ನ ಮೇಲೆ ನಂಬಿಕೆಯಿಟ್ಟು ಈ ಪಾತ್ರಕ್ಕೆ ನೀವು ಸೂಕ್ತ ಎಂದಾಗ ಬಂದ ಅವಕಾಶವನ್ನ ಒಪ್ಪಿಕೊಂಡೆ ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಸ್ಟಾರ್‌ ನಟರ ಚಿತ್ರಕ್ಕೆ ಶ್ರೀಲೀಲಾನೇ ಬೇಕು- ತೆಲುಗಿನ 9 ಸಿನಿಮಾಗಳಲ್ಲಿ ‘ಕಿಸ್‌’ ನಟಿ ಬ್ಯುಸಿ

ತಮಿಳಿನ ನನ್ನ ಮೊದಲ ಸಿನಿಮಾದಲ್ಲೇ ವಿಜಯ್ ಸೇತುಪತಿ ಸರ್ ಜೊತೆ ನಟಿಸುವ ಆಫರ್ ಸಿಕ್ಕಿದ್ದರ ಬಗ್ಗೆ ತುಂಬಾನೇ ಖುಷಿಯಿದೆ. ಅವರ ಜೊತೆ ನಟಿಸ್ತಿರೋದು ಅದ್ಭುತ ಫೀಲಿಂಗ್, ನಾನು ಡೈಲಾಗ್ ಹೇಳುವಾಗ ವಿಜಯ್ ಸರ್ ತಾಳ್ಮೆಯಿಂದ ಕಾದು ನನಗೆ ಸಪೋರ್ಟ್ ಮಾಡುತ್ತಾರೆ. ಹೊಸಬರು ಎಂದೂ ದೂರದೇ ಕಂಫರ್ಟ್ ಫೀಲಿಂಗ್ ಕೊಡುತ್ತಾರೆ. ವಿಜಯ್ ಸರ್ ಜೊತೆ ನಟಿಸುವ ಚಾನ್ಸ್ ಸಿಕ್ಕಿದ್ದು ನನ್ನ ಅದೃಷ್ಟ ಎಂದು ರುಕ್ಮಿಣಿ ಖುಷಿಯಿಂದ ಹೇಳಿಕೊಂಡಿದ್ದಾರೆ.

ಆರ್ಮುಗ ಕುಮಾರ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಮಲೇಷಿಯಾದಲ್ಲಿ 40 ದಿನಗಳ ಕಾಲ ಶೂಟಿಂಗ್ ಇರಲಿದೆ. ಈಗಾಗಲೇ ಶೂಟಿಂಗ್ ಶುರುವಾಗಿದೆ. ನಾನು ಮಲೇಷಿಯಾದ ಪ್ರಜೆಯಾಗಿರುತ್ತೇನೆ, ಇದೊಂದು ವಿಭಿನ್ನ ಪಾತ್ರವಾಗಿದೆ. ನನ್ನ ತಂಡದ ಬೆಂಬಲದಿಂದ ಈ ಪ್ರಾಜೆಕ್ಟ್ ಅಷ್ಟು ಕಷ್ಟ ಎಂದೇನಿಸುತ್ತಿಲ್ಲ. ಬಾನದಾರಿಯಲಿ, ಬಘೀರ, ಸಪ್ತಸಾಗರದಾಚೆ ಎಲ್ಲೋ, ಈ ಮೂರು ಸಿನಿಮಾದಲ್ಲಿ ನನ್ನ ಪಾತ್ರ ಒಂದಕ್ಕಿಂತ ಒಂದು ಭಿನ್ನವಾಗಿದೆ. ಕಥೆ ಮತ್ತು ಪಾತ್ರ ಜನರ ಮನಸ್ಸಿಗೆ ತಲುಪುತ್ತದೆ ಎಂಬ ಭರವಸೆ ನನಗಿದೆ ಎಂದು ನಟಿ ರುಕ್ಮಿಣಿ ಪಬ್ಲಿಕ್‌ ಟಿವಿ ಡಿಜಿಟಲ್‌ಗೆ ಮಾಹಿತಿ ನೀಡಿದ್ದಾರೆ.

ಭರವಸೆಯ ನಟಿಯಾಗಿ ಗಮನ ಸೆಳೆದಿರುವ ರುಕ್ಮಿಣಿ ವಸಂತ್ ಅವರು ತೆರೆಗೆ ರೆಡಿಯಿರುವ ಚಿತ್ರಗಳ ಮೂಲಕ ಅದೆಷ್ಟರ ಮಟ್ಟಿಗೆ ಮೋಡಿ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ‘ಬೀರ್‌ಬಲ್’ ಸುಂದರಿಯ ನಟನೆಯನ್ನ ಪ್ರೇಕ್ಷಕರ ಪ್ರಭುಗಳು ಒಪ್ಪಿಕೊಳ್ತಾರಾ ಕಾದುನೋಡಬೇಕಿದೆ.‌

ಶೃತಿ ನಾಗೇಶ್‌, ಪಬ್ಲಿಕ್‌ ಟಿವಿ ಡಿಜಿಟಲ್

Share This Article