ಇಷ್ಟು ದಿನ ಏಕೆ ಸುಮ್ಮನಿದ್ದರು?- ಸುಧಾಕರ್ ವಿರುದ್ಧವೇ ತಿರುಗಿ ಬಿದ್ದ ಎಂಟಿಬಿ

Public TV
1 Min Read

ಬೆಂಗಳೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಮಾಜಿ ಶಿಷ್ಯಂದಿರಲ್ಲಿಯೇ ಇದೀಗ ಒಡಕು ಮೂಡಿದೆ. ಸಿದ್ದರಾಮಯ್ಯ ಪರ ಎಂಟಿಬಿ ನಾಗರಾಜ್ (MTB Nagaraj) ಬ್ಯಾಟಿಂಗ್ ಮಾಡಿದ್ದಾರೆ.

ಬಿಜೆಪಿಗೆ ಸಿದ್ದರಾಮಯ್ಯ ಪ್ರೇರಣೆ ಎಂಬ ಡಾ.ಕೆ.ಸುಧಾಕರ್ (K Sudhakar), ಎಸ್ ಟಿ ಸೋಮಶೇಖರ್ (ST Somashekhar) ಟ್ವೀಟ್ ಹಿನ್ನೆಲೆಯಲ್ಲಿ ಇದೀಗ ಎಂಟಿಬಿ ಅವರು ಸುಧಾಕರ್ ಗೆ ಕೌಂಟರ್ ನೀಡಿದ್ದಾರೆ. ಸುಧಾಕರ್ ಟ್ವೀಟ್ ಗೆ ಎಂಟಿಬಿ ವಿರೋಧ ವ್ಯಕ್ತಪಡಿಸಿದ್ದು, ಸುಧಾಕರ್ ಸುಳ್ಳು ಹೇಳ್ತಿದ್ದಾರೆಂದು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ನನ್ನ ಬೆನ್ನಿಗೆ ಚೂರಿ ಹಾಕ್ತೀರಿ, ಎಷ್ಟು ಕಿರುಕುಳ ಕೊಡ್ತೀರಿ: ಖೂಬಾ ವಿರುದ್ಧ ಪ್ರಭು ಚವ್ಹಾಣ್ ಕೆಂಡಾಮಂಡಲ

ಮನೆ ದೇವರ ಮೇಲೆ ಆಣೆ ಮಾಡಿ ಸುಧಾಕರ್ ಈ ಮಾತು ಹೇಳಲಿ ಎಂದು ಎಂಟಿಬಿ ಸವಾಲು ಎಸೆದಿದ್ದಾರೆ. ಸಿದ್ದರಾಮಯ್ಯರವರನ್ನು ನಾನು ಕೂಡ ಹಲವಾರು ಬಾರಿ ಭೇಟಿ ಮಾಡಿದ್ದೇನೆ. ಈ ವೇಳೆ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಕ್ಷೇತ್ರದಲ್ಲಿ ಹಾಗೂ ನಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಏನು ಕೆಲಸ ಕಾರ್ಯಗಳು ಆಗುತ್ತಿಲ್ಲವೆಂದು ಹೇಳಿಕೊಂಡಾಗ ಲೋಕಸಭೆ ಚುನಾವಣೆವರೆಗೆ ಸುಮ್ಮನಿರಿ ಎಂದು ಹೇಳಿದ್ದರು ಇದು ಸತ್ಯ. ಆದರೆ ಮಾಜಿ ಸಚಿವರಾದ ಸುಧಾಕರ್ ರವರು ಇಂದು ಸಿದ್ದರಾಮಯ್ಯರವರ ಬಗ್ಗೆ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಮಾತುಗಳು ಸತ್ಯಕ್ಕೆ ದೂರವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸುಧಾಕರ್ ರವರು ಚುನಾವಣೆಯಲ್ಲಿ ಸೋತ ನಂತರ ಭ್ರಮನಿರಸನರಾಗಿ ಈ ಮಾತುಗಳನ್ನು ಹೇಳಿದ್ದಾರೆ. ಹಾಗಾದರೆ ಇಷ್ಟು ದಿನ ಏಕೆ ಸುಮ್ಮನಿದ್ದರು? ಬಿಜೆಪಿ ಸೇರಲು ಸಿದ್ದರಾಮಯ್ಯರವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇತ್ತೆಂದು ಸುಧಾಕರ್ ರವರು ತಮ್ಮ ಮನೆ ದೇವರ ಮೇಲೆ ಪ್ರಮಾಣ ಮಾಡಿ ಹೇಳುವರೆ? ಇಷ್ಟು ದಿನ ಮೌನವಾಗಿದ್ದು ಈಗ ಇದರ ಪ್ರಸ್ತಾಪದ ಮರ್ಮವಾದರೂ ಏನು ಎಂದು ಪ್ರಶ್ನಿಸಿದ್ದಾರೆ.

Share This Article