ಪ್ರೇಯಸಿಯ ಕತ್ತು ಕುಯ್ದು ಆತ್ಮಹತ್ಯೆಗೆ ಶರಣಾದ ಪ್ರೇಮಿ

Public TV
1 Min Read

ತುಮಕೂರು: ಪ್ರೀತಿಯಲ್ಲಿ (Love) ಬಿರುಕು ಉಂಟಾದ ಹಿನ್ನೆಲೆ ಪ್ರೇಯಸಿಯ ಕತ್ತು ಕುಯ್ದು, ಮಾರಣಾಂತಿಕವಾಗಿ ಹಲ್ಲೆ ನಡೆಸಿ ಬಳಿಕ ತಾನೂ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ತುಮಕೂರಿನ (Tumakuru) ಚಿಕ್ಕನಾಯಕನಹಳ್ಳಿಯ (Chikkanayakana Halli) ಹುಳಿಯಾರು ಹೋಬಳಿಯ ಯಳನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ಭಟ್ಟರಹಳ್ಳಿಯ ಸಿದ್ದರಾಮಯ್ಯ ಅವರ ಪುತ್ರ ಬಿ.ಎಸ್.ವಿನಯಕುಮಾರ್ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಅದೇ ಗ್ರಾಮದ ದಿ.ಕಲ್ಲೆಗೌಡರ ಪುತ್ರಿ ಕೆ.ಜೀವಿತಾ (17) ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಜೀವಿತಾ ದೊಡ್ಡಬಿದರೆ ಗ್ರಾಮದವಳಾಗಿದ್ದು, ತಾಯಿಯ ಜೊತೆ ಭಟ್ಟರಹಳ್ಳಿಯ ಅಜ್ಜಿ ಮನೆಯಲ್ಲಿ ವಾಸವಿದ್ದಳು. ಈಕೆ ತುಮಕೂರಿನ ಕಾಲೇಜು ಒಂದರಲ್ಲಿ ಓದುತ್ತಿದ್ದು, ಈ ವರ್ಷ ದ್ವಿತೀಯ ಪಿಯುಸಿ ಉತ್ತೀರ್ಣಳಾಗಿದ್ದಳು. ಇದನ್ನೂ ಓದಿ: ಕಾರು, ಟಿಟಿ ಮುಖಾಮುಖಿ ಡಿಕ್ಕಿ – ಮಗು ಸೇರಿ ಇಬ್ಬರು ಸ್ಥಳದಲ್ಲೇ ಸಾವು

ವಿನಯಕುಮಾರ್ ಗ್ರಾಮದ ಸಿದ್ದರಾಮೇಶ್ವರ ದೇಗುಲದ ಅರ್ಚಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಕೆಲ ದಿನಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದು, ಇತ್ತೀಚಿಗೆ ಇಬ್ಬರ ನಡುವೆ ಬಿರುಕು ಉಂಟಾಗಿತ್ತು. ಇದರಿಂದ ಕೋಪಗೊಂಡಿದ್ದ ವಿನಯಕುಮಾರ್ ಗುರುವಾರ ಮಂಜಾನೆ 5:30ರ ವೇಳೆಗೆ ಯುವತಿಯ ಮನೆಗೆ ತೆರಳಿ ಮಚ್ಚಿನಿಂದ ಆಕೆಯ ಕುತ್ತಿಗೆಗೆ ಬಲವಾಗಿ ಬೀಸಿದ್ದಾನೆ. ಮಾರಣಾಂತಿಕವಾಗಿ ಗಾಯಗೊಂಡಿರುವ ಆಕೆ ಹಾಸನ (Hassan) ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದನ್ನೂ ಓದಿ: ಬಲೂನ್‌ನೊಂದಿಗೆ ಆಟವಾಡುತ್ತಿದ್ದಾಗ ಬಾವಿಗೆ ಬಿದ್ದು 3ರ ಬಾಲಕಿ ಸಾವು

ಹಲ್ಲೆ ನಡೆಸಿದ ಬಳಿಕ ವಿನಯಕುಮಾರ್ ಕಣ್ಮರೆಯಾಗಿದ್ದ. ನಾಪತ್ತೆಯಾದ ಆತನಿಗಾಗಿ ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಗ್ರಾಮದ ಕಲ್ಯಾಣಿ ಬಳಿ ಆತನ ಟೀ ಶರ್ಟ್ ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡು ಅಗ್ನಿಶಾಮಕ ದಳದ ಸಿಬ್ಬಂದಿ ಕಲ್ಯಾಣಿಯಲ್ಲಿ ಹುಡುಕಾಟ ನಡೆಸಿದಾಗ ಆತನ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಚಾಲಕನ ಬರ್ಬರ ಹತ್ಯೆ

Share This Article