ಅಗತ್ಯವಿದ್ದರೆ ರಾಜ್ಯದಲ್ಲೂ ಬಜರಂಗದಳ ನಿಷೇಧ ಮಾಡ್ತೀವಿ – ಛತ್ತೀಸಗಢ ಸಿಎಂ

Public TV
1 Min Read

ರಾಯ್ಪುರ: ರಾಜ್ಯದಲ್ಲಿ ಬಜರಂಗದಳ (Bajrang Dal) ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಗತ್ಯವಿದ್ದರೆ ರಾಜ್ಯದಲ್ಲೂ ಸಂಘಟನೆಯನ್ನು ನಿಷೇಧಿಸಲಾಗುವುದು ಎಂದು ಛತ್ತೀಸಗಢ (Chhattisgarh) ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ (Bhupesh Baghel) ತಿಳಿಸಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್‌ (Congress) ಪ್ರಣಾಳಿಕೆ ಬಿಡುಗಡೆ ಮಾಡಿತು. ಪಕ್ಷ ಅಧಿಕಾರಕ್ಕೆ ಬಂದರೆ ಬಜರಂಗದಳ ಸಂಘಟನೆಯನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಪ್ರಣಾಳಿಕೆ ವಿರುದ್ಧ ಹಿಂದೂಪರ ಸಂಘಟನೆಗಳ ಆಕ್ರೋಶ ಹೊರಹಾಕಿವೆ. ಇದೇ ಹೊತ್ತಿನಲ್ಲಿ ಬಜರಂಗದಳ ಸಂಘಟನೆ ಬಗ್ಗೆ ಛತ್ತೀಸಗಢ ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಬ್ರಾಹ್ಮಣರು ಭಾರತದವರಲ್ಲ, ರಷ್ಯಾದಿಂದ ಬಂದಿದ್ದಾರೆ: ಆರ್‌ಜೆಡಿ ನಾಯಕ ಯದುವಂಶ್ ಕುಮಾರ್

ಎರಡೂ ರಾಜ್ಯಗಳಲ್ಲಿನ ಪರಿಸ್ಥಿತಿಗಳು ವಿಭಿನ್ನವಾಗಿರುವ ಕಾರಣ ಕರ್ನಾಟಕದಲ್ಲಿ ತೆಗೆದುಕೊಂಡ ನಿರ್ಧಾರಗಳು ಛತ್ತೀಸಗಢಕ್ಕೆ ಅನ್ವಯಿಸುವುದಿಲ್ಲ. ಬಜರಂಗಿಗಳು ಇಲ್ಲಿ (ಛತ್ತೀಸ್‌ಗಢದಲ್ಲಿ) ಕೆಲವು ಗೊಂದಲಗಳನ್ನು ಉಂಟುಮಾಡಿದರು. ಅವೆಲ್ಲವನ್ನು ನಾವು ಸರಿಪಡಿಸಿದ್ದೇವೆ. ಕರ್ನಾಟಕ ಕಾಂಗ್ರೆಸ್‌ನ ನಿರ್ಧಾರಗಳು ಛತ್ತೀಸಗಢಕ್ಕೂ ಅನ್ವಯಿಸುವ ಅಗತ್ಯವಿಲ್ಲ. ಒಂದು ವೇಳೆ ಅಗತ್ಯವೆನಿಸಿದರೆ ಆಲೋಚಿಸಿ ಕ್ರಮಕೈಗೊಳ್ಳುತ್ತೇವೆ. ನಮ್ಮ ನಾಯಕರು ಮತ್ತು ಪಕ್ಷದ ಪದಾಧಿಕಾರಿಗಳು ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಹೇಳಿಕೆಗೆ ಛತ್ತೀಸಗಢ ರಾಜ್ಯದ ಬಜರಂಗದಳ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮೊದಲು ರಾಮ ಜನ್ಮಭೂಮಿ. ನಂತರ ರಾಮಸೇತು ಪುರಾವೆ ಕೇಳಿದರು. ಈಗ ಅವರು ಬಜರಂಗದಳವನ್ನು ಪ್ರಶ್ನಿಸುತ್ತಿದ್ದಾರೆ. ಛತ್ತೀಸಗಢದ ಜನರು ಇದನ್ನು ಸಹಿಸುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸುತ್ತಾರೆ ಎಂದು ಹಿರಿಯ ಬಿಜೆಪಿ ನಾಯಕ ಬ್ರಿಜ್‌ಮೋಹನ್ ಅಗರ್ವಾಲ್ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ತಂದೆಗೆ ಟಿಕೆಟ್ ಸಿಕ್ಕಿದ್ದಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ ಬಿಜೆಪಿ ಅಭ್ಯರ್ಥಿಯ ಪುತ್ರ – ಕಾಂಗ್ರೆಸ್‍ನಿಂದ ವೀಡಿಯೋ ರಿಲೀಸ್

Share This Article