ಮುಂದೇ ನಾನೇ ಜೀನ್ಸ್ ಪಾರ್ಕ್ ಉದ್ಘಾಟಿಸಲು ಬರುತ್ತೇನೆ – ಮಳೆಯಲ್ಲೇ ರಾಹುಲ್ ಗಾಂಧಿ ಭಾಷಣ

Public TV
2 Min Read

ಬಳ್ಳಾರಿ/ಕಲಬುರಗಿ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಶುಕ್ರವಾರ ರಾಜ್ಯಕ್ಕೆ ಆಗಮಿಸಿ ಬಳ್ಳಾರಿ ಹಾಗೂ ಕಲಬುರಗಿಯಲ್ಲಿ ಪ್ರಚಾರ ಕಾರ್ಯಕ್ರಮವನ್ನು ನಡೆಸಿದ್ದಾರೆ. ನಗರಗಳಲ್ಲಿ ನಡೆಸಿದ ಸಮಾವೇಶದ ವೇಳೆ ಮಳೆ (Rain) ಸುರಿದಿದ್ದರೂ ರಾಗಾ ಮಳೆಯನ್ನು ಲೆಕ್ಕಿಸದೇ ಭಾಷಣ ಮಾಡಿದ್ದಾರೆ.

ಜೇವರ್ಗಿಯಲ್ಲಿ ಅಜಯ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಸಮಾವೇಶವನ್ನು ಹಮ್ಮಿಕೊಂಡಿತ್ತು. ರಾಹುಲ್ ಗಾಂಧಿ ಆಗಮನಕ್ಕೂ ಮುನ್ನವೇ ಮಳೆ ಶುರುವಾಗಿದ್ದು, ಮಳೆಯಿಂದ ರಕ್ಷಣೆ ಪಡೆಯಲು ಕ್ರೀಡಾಂಗಣದ ಗ್ಯಾಲರಿಯಲ್ಲಿ ಜನರು ಆಶ್ರಯ ಪಡೆದರು. ನೂರಾರು ಜನ ತಲೆ ಮೇಲೆ ಕುರ್ಚಿ ಹೊತ್ತು ಕಾರ್ಯಕ್ರಮದಲ್ಲಿ ಭಾಗಿಯಾದರು.

ಹವಾಮಾನ ವೈಪರಿತ್ಯ ಹಿನ್ನೆಲೆ ಹೆಲಿಕಾಪ್ಟರ್ ಹಾರಾಟಕ್ಕೆ ತೊಂದರೆಯಾಗಿದ್ದು, ರಾಹುಲ್ ಗಾಂಧಿ ರಸ್ತೆ ಮೂಲಕ ಜೇವರ್ಗಿಗೆ ಆಗಮಿಸಿದರು. ಬಳಿಕ ಸಮಾವೇಶಕ್ಕೆ ಆಗಮಿಸಿದ ರಾಹುಲ್ ಗಾಂಧಿ ಮಳೆಯಲ್ಲಿ ನೆನೆಯುತ್ತಲೇ ಭಾಷಣ ಮಾಡಿದರು. ಜೋರು ಗಾಳಿ ಮಳೆ ಹಿನ್ನೆಲೆ ವೇದಿಕೆ ಮೇಲಿನ ಕಟೌಟ್, ವೇದಿಕೆ ಎದುರು ಹಾಕಲಾಗಿದ್ದ ಟೆಂಟ್ ಎಲ್ಲವೂ ಕಿತ್ತುಹೋಗಿತ್ತು.

ಬಳಿಕ ಬಳ್ಳಾರಿ ತೆರಳಿದ ರಾಹುಲ್ ಗಾಂಧಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಬಿ ನಾಗೇಂದ್ರ ಹಾಗೂ ಬಳ್ಳಾರಿ ನಗರ ಅಭ್ಯರ್ಥಿ ಭರತ ರೆಡ್ಡಿ ಪರವಾಗಿ ಪ್ರಚಾರ ಕಾರ್ಯ ನಡೆಸಿದರು. ಟಿಬಿ ಸ್ಯಾನಿಟೋರಿಯಂ ನಿಂದ ರಾಹುಲ್ ಗಾಂಧಿ ರೋಡ್ ಶೋ ಆರಂಭವಾಗಿ ಬೆಳಗಲ್ ಕ್ರಾಸ್, ಕೌಲ್ ಬಜಾರ್ ಮಾರ್ಗವಾಗಿ ಮೋತಿ ಸರ್ಕಲ್ ವರೆಗೆ ಸಾಗಿತ್ತು. ಬಳಿಕ ರಾಹುಲ್ ಗಾಂಧಿ ಮೋತಿ ಸರ್ಕಲ್‌ನಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ರಾಹುಲ್, ರಾಜ್ಯದಲ್ಲಿ ಚುನಾವಣೆ ನಡೆಯುತ್ತಿದೆ. 5 ವರ್ಷದ ಹಿಂದೆ ಚುನಾವಣೆ ನಡೆದಿತ್ತು. ನಿಮ್ಮ ಮತ ಪಡೆದು ಬಿಜೆಪಿಯವರು ಸರ್ಕಾರ ರಚನೆ ಮಾಡಿಲ್ಲ. ನಮ್ಮ ಎಮ್‌ಎಲ್‌ಎಗಳನ್ನು ಖರೀದಿ ಮಾಡಿ ಸರ್ಕಾರ ಮಾಡಿದ್ದಾರೆ. 40% ಸರ್ಕಾರವನ್ನು ಕಿತ್ತು ಹಾಕಬೇಕು. ಜೆಪಿಯವರಿಗೆ 40 ನಂಬರ್ ಚೆನ್ನಾಗಿ ಒಪ್ಪುತ್ತೆ. ಅವರಿಗೆ 40 ಸೀಟ್ ಮಾತ್ರ ನೀಡಿ. ಕಾಂಗ್ರೆಸ್‌ಗೆ 140-150 ಸೀಟ್ ಗೆಲ್ಲಿಸಬೇಕಾಗಿದೆ. ಕಾಂಗ್ರೆಸ್ ಸರ್ಕಾರ 5 ತರಹದ ಗ್ಯಾರಂಟಿ ನೀಡಲಿದೆ ಎಂದರು. ಇದನ್ನೂ ಓದಿ: ಶನಿವಾರ ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ – ಪರ್ಯಾಯ ರಸ್ತೆಗಳ ಪೂರ್ಣ ವಿವರ ಇಲ್ಲಿದೆ

ಸಮಾವೇಶದ ವೇಳೆ ಮತ್ತೆ ತುಂತುರು ಮಳೆ ಸುರಿದಿತ್ತು. ರಾಹುಲ್ ಗಾಂಧಿ ಯಾವುದನ್ನೂ ಲೆಕ್ಕಿಸದೇ ಭಾಷಣವನ್ನು ಮುಂದುವರಿಸಿದ್ದರು. ಬಳ್ಳಾರಿಯನ್ನು ಜೀನ್ಸ್ ಕ್ಯಾಪಿಟಲ್ ಮಾಡುವೆ. ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆ ಮಾಡಲಾಗುವುದು. ನಾನು ಸಾಮಾನ್ಯವಾಗಿ ಭರವಸೆ ನೀಡಲ್ಲ. ನೀಡಿದರೆ ಮಾಡಿ ತೋರಿಸುವೆ. ಮೋದಿಯವರ ತರಹ ನಾನು ಸುಳ್ಳು ಆಶ್ವಾಸನೆ ನೀಡಲ್ಲ. ನಾನು ಮುಂದೆ ಜೀನ್ಸ್ ಪಾರ್ಕ್ ಉದ್ಘಾಟನೆಗೆ ಆಗಮಿಸುವೆ ಎಂದು ತಿಳಿಸಿದರು. ಇದನ್ನೂ ಓದಿ: ಮತಯಾಚನೆ ವೇಳೆ ಪರಮೇಶ್ವರ್‌ ತಲೆಗೆ ಕಲ್ಲೇಟು, ರಕ್ತಸ್ರಾವ

Share This Article