ಯಾರ ಒತ್ತಡಕ್ಕೆ ಮಣಿಯದೇ ಸ್ವ ಇಚ್ಛೆಯಿಂದ ಚುನಾವಣಾ ರಾಜಕೀಯಕ್ಕೆ ನಿವೃತ್ತಿ: ಈಶ್ವರಪ್ಪ

Public TV
1 Min Read

ಶಿವಮೊಗ್ಗ: ಯಾರ ಒತ್ತಡಕ್ಕೆ ಮಣಿಯದೇ ನಾನು ಸ್ವ ಇಚ್ಛೆಯಿಂದ ಚುನಾವಣಾ ರಾಜಕೀಯಕ್ಕೆ (Election Politics) ನಿವೃತ್ತಿ ಹೇಳಿದ್ದೇನೆ ಎಂದು ಬಿಜೆಪಿ ಹಿರಿಯ ಮುಖಂಡ ಕೆಎಸ್‌ ಈಶ್ವರಪ್ಪ (KS Eshwarappa) ಹೇಳಿದ್ದಾರೆ.

ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಹೇಳಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ (JP Nadda) ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಮಾಧ್ಯಮಗಳ ಜೊತೆ ಈಶ್ವರಪ್ಪ ಮಾತನಾಡಿದರು.

ಕರ್ನಾಟಕದಲ್ಲಿ (Karnataka) ಬಿಜೆಪಿಗೆ ಪೂರ್ಣ ಬಹುಮತ ಇಲ್ಲಿಯವರೆಗೆ ಸಿಕ್ಕಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ (BJP) ಪೂರ್ಣ ಬಹುಮತ ಸಿಗಬೇಕು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಲಕ್ಷಾಂತರ ಯುವಕರು ಕೆಲಸ ಮಾಡುತ್ತಿದ್ದಾರೆ. ನಾನು ಮತ್ತೆ ಪಕ್ಷ ಸಂಘಟನೆಯತ್ತ ಹೋಗುತ್ತೇನೆ. ರಾಜ್ಯದಲ್ಲಿ ಪೂರ್ಣ ಬಹುಮತ ತರುವುದರ ಜೊತೆಗೆ ಮತ್ತೆ 2024ರಲ್ಲಿ ನರೇಂದ್ರ ಮೋದಿ (Narendra Modi) ಅವರನ್ನು ಗೆಲ್ಲಿಸಬೇಕು ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯ ನಾಯಕರು ತಂದ ಪಟ್ಟಿ ನೋಡಿ ಮೋದಿ ಕೆಂಡ : ಬಿಜೆಪಿ ಸಭೆಯಲ್ಲಿ ಏನಾಯ್ತು?

ಈ ಬಾರಿ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು  ಏಪ್ರಿಲ್‌ 6, 7 ರಂದು ರಾಜ್ಯದ ಚುನಾವಣಾ ಸಮಿತಿ ನಡೆಸಿದ ಸಭೆಯಲ್ಲಿ ಕೇಂದ್ರ ನಾಯಕರ ಬಳಿ ತಿಳಿಸಿದ್ದೆ. ಈ ವೇಳೆ ಅವರು ನೀವೇ ಸ್ಪರ್ಧೆ ಮಾಡಬೇಕು ಎಂದು ಹೇಳಿದ್ದರು. ಈಗ ಅಧಿಕೃತವಾಗಿ ಜೆಪಿ ನಡ್ಡಾ ಅವರಿಗೆ ಪತ್ರ ಬರೆದು ನನ್ನ ನಿರ್ಧಾರ ತಿಳಿಸಿದ್ದೇನೆ ಎಂದು ಹೇಳಿದರು.

ಪುತ್ರ ಸ್ಪರ್ಧೆ ಮಾಡುವ ಬಗ್ಗೆ ನನಗೆ ಗೊತ್ತಿಲ್ಲ. ಕೇಂದ್ರ ಚುನಾವಣಾ ಸಮಿತಿ ಯಾವ ನಿರ್ಧಾರ ಕೈಗೊಳ್ಳುತ್ತದೋ ನೋಡಬೇಕಿದೆ. ನಾನು ಯಾರ ಪರವಾಗಿ ಟಿಕೆಟ್‌ ಕೇಳಿಲ್ಲ. ನಾನು ಕಳುಹಿಸಿದ ಪತ್ರವನ್ನು ನಮ್ಮ ಕಾರ್ಯಕರ್ತರು ಮೆಚ್ಚುತ್ತಾರೆ ಎಂದರು.

ಸುದ್ದಿಗೋಷ್ಠಿ ನಡೆಸುತ್ತಿರುವಾಗಲೇ ರಾಜಕೀಯ ನಿವೃತ್ತಿ ಘೋಷಣೆ ಮಾಡದಂತೆ ಈಶ್ವರಪ್ಪ ಅಭಿಮಾನಿಗಳು ಆಗ್ರಹಿಸಿದರು. ಈಶ್ವರಪ್ಪ ಅವರೇ ಈ ಬಾರಿಯೂ ಸ್ಪರ್ಧಿಸಬೇಕು. ಈಶ್ವರಪ್ಪ ಇಲ್ಲದೇ ಚುನಾವಣೆ ಹೇಗೆ ಮಾಡುತ್ತಾರೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

Share This Article