ಅದಾನಿ ಕಂಪನಿ ವಿರುದ್ಧ JPC ತನಿಖೆಗೆ ಆಗ್ರಹ – ಸಂಸತ್‌ನಲ್ಲಿ ಕಪ್ಪು ಬಟ್ಟೆ ಧರಿಸಿ ವಿಪಕ್ಷಗಳ ಪ್ರತಿಭಟನೆ

Public TV
2 Min Read

ನವದೆಹಲಿ : ಮಾಜಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ಬಳಿಕ ಉದ್ಯಮಿ ಗೌತಮ್ ಅದಾನಿ (Gautam Adani) ವಿರುದ್ಧ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಹೋರಾಟ ತೀವ್ರಗೊಳಿಸಿದೆ. ದೇಶದ್ಯಾಂತ ಪ್ರತಿಭಟನೆ (Protest) ನಡೆಯುತ್ತಿದ್ದು, ಇದರ ಭಾಗವಾಗಿ ಸಂಸತ್‌ನಲ್ಲೂ ಇಂದು ಕಾಂಗ್ರೆಸ್ ಸಂಸದರು ವಿಪಕ್ಷಗಳ ಬೆಂಬಲದೊಂದಿಗೆ ಪ್ರತಿಭಟನೆ ನಡೆಸಿದರು.

ಕಪ್ಪು ಬಟ್ಟೆ ಧರಿಸಿ ತೆರಳಿದ್ದ ವಿಪಕ್ಷ ನಾಯಕರು ಸಂಸತ್‌ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಭಟನೆ ಆರಂಭಿಸಿದರು. ಹಿಂಡೆನ್‌ಬರ್ಗ್ ರಿಪೋರ್ಟ್ ಆಧರಿಸಿ ಅದಾನಿ ಕಂಪನಿ ಮೇಲೆ ಸಂಸದೀಯ ಜಂಟಿ ಸಮಿತಿಯಿಂದ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ತೀವ್ರವಾಗುತ್ತಿದ್ದಂತೆ ಲೋಕಸಭೆಯನ್ನು ಸಂಜೆ 4 ಗಂಟೆಗೆ, ರಾಜ್ಯಸಭೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಕಲಾಪ‌ ಮುಂದೂಡಿಕೆಯಾದ ಬೆನ್ನಲ್ಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ನೇತೃತ್ವದಲ್ಲಿ ಸಂಸತ್ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿಯಿಂದ ವಿಜಯ್‌ಚೌಕ್‌ವರೆಗೂ ವಿಪಕ್ಷ ನಾಯಕರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಅಧಿಕಾರ ದುರ್ಬಳಕೆ ಖಂಡಿಸಿ ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.

ಈ ಬಗ್ಗೆ ಟ್ವೀಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ, ಸಾರ್ವಜನಿಕ ಹಣದ ಲೂಟಿಯ ಬಗ್ಗೆ ಜೆಪಿಸಿ ತನಿಖೆ ನಡೆಯಬೇಕು ಎಂದು ಪ್ರತಿಪಕ್ಷಗಳ ಒಂದೇ ಒಂದು ಬೇಡಿಕೆ ಇಟ್ಟಿವೆ. ಆದರೆ ಅದಾನಿಯನ್ನು ಉಳಿಸಿ ಮತ್ತು ಪ್ರಜಾಪ್ರಭುತ್ವವನ್ನು ನಾಶಮಾಡಿ ಎನ್ನುವ ನಿಲುವು ಮೋದಿ ಸರ್ಕಾರ ತೆಗೆದುಕೊಂಡಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮಹಿಳಾ ಮತದಾರರಿಗೆ ಹಂಚಲು ತೆಗೆದುಕೊಂಡು ಹೋಗುತ್ತಿದ್ದ ಸಾವಿರಾರು ಸೀರೆಗಳು ಜಪ್ತಿ

ಪ್ರತಿಭಟನೆಗೂ ಮುನ್ನ ಸಂಸತ್ ಭವನದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಕಚೇರಿಯಲ್ಲಿ ವಿಪಕ್ಷಗಳ ನಾಯಕರು ಸಭೆ ನಡೆಸಿದರು. ಸಭೆಯಲ್ಲಿ DMK, SP, JDU, BRS, CPM, RJD, NCP, CPI, IUML, MDMK, KC, TMC, RSP, AAP, J&K NC ಸೇರಿ ಹಲವು ಪಕ್ಷದ ನಾಯಕರು ಉಪಸ್ಥಿತರಿದ್ದರು. ಸಭೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಹೋರಾಟಗಳನ್ನು ರೂಪಿಸುವ ಬಗ್ಗೆ ಚರ್ಚೆಗಳು ನಡೆದಿವೆ. ಇದನ್ನೂ ಓದಿ: ನಾಡಬಾಂಬ್ ಎಸೆದು BJP ಮುಖಂಡನ ಕೊಲೆ

Share This Article