WPL 2023: ಮುಂಬೈ ಫೈನಲ್‌ಗೆ – ಯುಪಿ ವಾರಿಯರ್ಸ್‌ ಮನೆಗೆ

Public TV
2 Min Read

ಮುಂಬೈ: ನಾಟ್‌ ಸ್ಕಿವರ್‌ ಬ್ರಂಟ್‌ (Nat Sciver-Brunt) ಸ್ಫೋಟಕ ಅರ್ಧ ಶತಕ, ಇಸ್ಸಿ ವಾಂಗ್‌ ಮಿಂಚಿನ ಬೌಲಿಂಗ್‌ ದಾಳಿ ನೆರವಿನಿಂದ ಮುಂಬೈ ಇಂಡಿಯನ್ಸ್‌ (Mumbai Indians), ಯುಪಿ ವಾರಿಯರ್ಸ್‌ (UP Warriorz) ವಿರುದ್ಧ ಭರ್ಜರಿ ಜಯ ಸಾಧಿಸಿದ್ದು WPL ಫೈನಲ್‌ ಪ್ರವೇಶಿಸಿದೆ.

ಮುಂಬೈನ ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿಂದು ನಡೆದ ಮಹಿಳಾ ಪ್ರೀಮಿಯರ್‌ ಲೀಗ್‌ನ (WPL 2023) ಎಲಿಮಿನೇಟರ್‌ ಪಂದ್ಯದಲ್ಲಿ ಮುಂಬೈ ಭರ್ಜರಿ ಜಯದೊಂದಿಗೆ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದನ್ನೂ ಓದಿ: IPL 2023: ಕಣಕ್ಕಿಳಿಯಲು RCB, CSK ಬಲಿಷ್ಠ ತಂಡ ರೆಡಿ – ಈ ಸಲ ಕಪ್ ಯಾರದ್ದು?

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 182 ರನ್‌ ಗಳಿಸಿತ್ತು. 183 ರನ್‌ಗಳ ಬೃಹತ್‌ ಮೊತ್ತದ ಗುರಿ ಪಡೆದ ಯುಪಿ ವಾರಿಯರ್ಸ್‌ ಬ್ಯಾಟಿಂಗ್‌ ವೈಫಲ್ಯದಿಂದ 17.4 ಓವರ್‌ಗಳಲ್ಲಿ 110 ರನ್‌ಗಳಿಗೆ ಸರ್ವಪತನ ಕಂಡಿತು. ಪರಿಣಾಮ 72 ರನ್‌ಗಳ ಅಂತರದಿಂದ ಸೋತು ಟೂರ್ನಿಯಿಂದ ಹೊರಬಿದ್ದಿತು.

ಚೇಸಿಂಗ್‌ ಆರಂಭಿಸಿದ ಯುಪಿ ತಂಡವು ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಬಂದ ಕಿರನ್‌ ನವಗಿರೆ ಸ್ಫೋಟಕ 43 ರನ್‌ (4 ಬೌಂಡರಿ, 3 ಸಿಕ್ಸರ್‌), ಗ್ರೇಸ್‌ ಹ್ಯಾರಿಸ್‌ 14 ರನ್‌, ದೀಪ್ತಿ ಶರ್ಮಾ 16 ರನ್‌ ಗಳಿಸಿದ್ದು ಬಿಟ್ಟರೆ, ಯಾರೊಬ್ಬರೂ ಹೆಚ್ಚಿನ ರನ್‌ ಗಳಿಸದ ಕಾರಣ ಯುಪಿ ವಾರಿಯರ್ಸ್‌ ತಂಡ ಹೀನಾಯ ಸೋಲನುಭವಿಸಿತು. ಇದನ್ನೂ ಓದಿ: 3 ಪಂದ್ಯ, ಫಸ್ಟ್ ಬಾಲಿಗೆ ಔಟ್ – ಕೆಟ್ಟ ದಾಖಲೆ ಬರೆದ ಸೂರ್ಯ

ಮುಂಬೈ ಇಂಡಿಯನ್ಸ್‌ ಪರ ಇಸ್ಸಿ ವಾಂಗ್‌ 4 ಓವರ್‌ಗಳಲ್ಲಿ ಕೇವಲ 15 ರನ್‌ ನೀಡಿ 4 ವಿಕೆಟ್‌ ಕಿತ್ತರೆ, ಸೈಕಾ ಇಶಾಕ್‌ 2 ವಿಕೆಟ್‌, ಬ್ರಂಟ್, ಹೇಲಿ ಮ್ಯಾಥಿವ್ಸ್‌, ಜಿಂತಿಮಣಿ ಕಲಿತಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್‌ ತಂಡ ಬೃಹತ್ ಮೊತ್ತ ಕಲೆಹಾಕಿತು. ನ್ಯಾಟ್ ಸಿವರ್ ಬ್ರಂಟ್ ಭರ್ಜರಿ ಅರ್ಧಶತಕ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಆರಂಭಿಕರಾಗಿ ಕಣಕ್ಕಿಳಿದ ಯಸ್ತಿಕಾ ಭಾಟಿಯಾ 18 ಎಸೆತಗಳಲ್ಲಿ 21 ರನ್ ಗಳಿಸಿದರೆ, ಹೇಳಿ ಮ್ಯಾಥ್ಯೂಸ್ 26 ಎಸೆತಗಳಲ್ಲಿ 26 ರನ್ ಗಳಿಸಿ ಪೆವಿಲಿಯನ್‌ ಸೇರಿಕೊಂಡರು.

ನಂತರ ಬಂದ ಆಲ್‌ರೌಂಡರ್ ನಾಟ್‌ ಸ್ಕಿವರ್‌ ಬ್ರಂಟ್ ಭರ್ಜರಿ ಬ್ಯಾಟಿಂಗ್‌ ಮಾಡಿದರು. ಸಿಕ್ಸರ್‌, ಬೌಂಡರಿ ಅಬ್ಬರಿಸುತ್ತಾ ವಾರಿಯರ್ಸ್‌ ಬೌಲರ್‌ಗಳನ್ನು ಬೆಂಡೆತ್ತಿದರು. ಬ್ರಂಟ್‌ 38 ಎಸೆತಗಳಲ್ಲಿ ಸಹಿತ ಅಜೇಯ 72 ರನ್ (9 ಬೌಂಡರಿ 2 ಸಿಕ್ಸರ್) ಗಳಿಸಿದರು. ಆದ್ರೆ ನಾಯಕಿ ಹರ್ಮನ್‌ಪ್ರೀತ್ ಕೌರ್ (Harmanpreet Kaur) 14 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಕೊನೆಯಲ್ಲಿ ಅಮೆಲಿ ಕೆರ್ 29 ರನ್ ಗಳಿಸಿದರೆ, ಪೂಜಾ ವಸ್ತ್ರಾಕರ್ 4 ಎಸೆತಗಳಲ್ಲಿ ಅಜೇಯ 11 ರನ್ ಬಾರಿಸಿದರು.

ಯುಪಿ ವಾರಿಯರ್ಸ್ ಪರವಾಗಿ ಸೋಫಿ ಎಕ್ಲಿಸ್ಟೋನ್‌ 2 ವಿಕೆಟ್ ಪಡೆದರೆ, ಪಾರ್ಶವಿ ಚೋಪ್ರಾ ಮತ್ತು ಅಂಜಲಿ ಸರ್ವಾಣಿ ತಲಾ 1 ವಿಕೆಟ್ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *