ದೆಹಲಿಯ ಬ್ರಿಟಿಷ್‌ ಹೈಕಮೀಷನ್‌ಗೆ ನೀಡಿದ ಭದ್ರತೆ ತೆಗೆದು ಯುಕೆಗೆ ಬಿಸಿ ಮುಟ್ಟಿಸಿದ ಭಾರತ

Public TV
1 Min Read

ನವದೆಹಲಿ: ಲಂಡನ್‌ನಲ್ಲಿರುವ ಭಾರತೀಯ ಹೈಕಮೀಷನ್‌ಗೆ ಭದ್ರತೆ ನೀಡದ್ದಕ್ಕೆ ಪ್ರತಿಯಾಗಿ ದೆಹಲಿಯಲ್ಲಿರುವ ಯುಕೆ ಮಿಷನ್ (UK Mission) ಮತ್ತು ರಾಯಭಾರಿ (British High Commissioner) ನಿವಾಸದ ಹೊರಗೆ ಭದ್ರತೆಯನ್ನು ಕಡಿಮೆ ಮಾಡಿದೆ.

ಭಾನುವಾರ ಲಂಡನ್‌ನಲ್ಲಿರುವ (London) ಭಾರತೀಯ ಹೈಕಮೀಷನ್‌ (Indian High Commission) ಹೊರಗೆ ಖಲಿಸ್ತಾನಿಗಳು (Pro-Khalistan Activist) ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದರು. ಅಷ್ಟೇ ಅಲ್ಲದೇ ಭಾರತದ ಧ್ವಜವನ್ನು ಇಳಿಸಿ ಖಲಿಸ್ತಾನ್‌ ಧ್ವಜವನ್ನು ಹಾರಿಸಿದ್ದರು.

ಈ ಘಟನೆಯ ಬಳಿಕ ಭಾರತ ಸರ್ಕಾರ ಭಾರತದ ಹೈಕಮೀಷನ್‌ ಕಚೇರಿಗೆ ಭದ್ರತೆ ನೀಡುವಂತೆ ಯುಕೆ ಸರ್ಕಾರಕ್ಕೆ ಮನವಿ ಮಾಡಿತ್ತು. ಈ ಮನವಿಗೆ ಸರಿಯಾದ ಸ್ಪಂದನೆ ಸಿಕ್ಕಿರಲಿಲ್ಲ. ಈ ಬೆನ್ನಲ್ಲೇ ದೆಹಲಿಯಲ್ಲಿರುವ ಯುಕೆ ಮಿಷನ್‌ ಮತ್ತು ರಾಯಭಾರಿ ನಿವಾಸದ ಹೊರಗೆ ಭದ್ರತೆಯನ್ನು ಕಡಿಮೆ ಮಾಡಲಾಗಿದೆ.

ದೆಹಲಿಯ ಚಾಣಕ್ಯಪುರಿ ರಾಜತಾಂತ್ರಿಕ ಎನ್‌ಕ್ಲೇವ್‌ನಲ್ಲಿರುವ ಶಾಂತಿಪಥ್‌ನಲ್ಲಿರುವ ಯುಕೆ ಮಿಷನ್‌ನ ಹೊರಗೆ ಇರಿಸಲಾಗಿದ್ದ ಮತ್ತು ರಾಜಾಜಿ ಮಾರ್ಗದಲ್ಲಿರುವ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರ ನಿವಾಸದಲ್ಲಿದ್ದ ಸಿಮೆಂಟ್‌ ಬ್ಲಾಕ್‌ ಬ್ಯಾರಿಕೇಡ್‌ಗಳನ್ನು ಬುಧವಾರ ಮಧ್ಯಾಹ್ನದ ಬಳಿಕ ತೆಗೆದುಹಾಕಲಾಗಿದೆ. ಬ್ಯಾರಿಕೇಡ್‌ಗಳು ಮಾತ್ರವಲ್ಲದೇ ಶಾಶ್ವತ ಭದ್ರತೆ, ಬಂಕರ್‌ಗಳು, ಪಿಸಿಆರ್ ವ್ಯಾನ್‌ಗಳನ್ನು ತೆಗೆದುಹಾಕಲಾಗಿದೆ.

ಖಲಿಸ್ತಾನ್ ಪರ ಕಾರ್ಯಕರ್ತರ ಪ್ರತಿಭಟನೆಗಳು ಹಿಂಸಾತ್ಮಕವಾಗಿ ತಿರುಗುವ ಸಾಧ್ಯತೆಯಿದೆ ಎಂದು ಗುಪ್ತಚರ ಮಾಹಿತಿಯನ್ನು ಆಧರಿಸಿ ಭಾರತ ಮೊದಲೇ ಬ್ರಿಟಿಷ್ ಅಧಿಕಾರಿಳ ಜೊತೆ ಮಾಹಿತಿಯನ್ನು ಹಂಚಿಕೊಂಡಿತ್ತು. ಆದರೂ ಪ್ರತಿಭಟನೆ ಪ್ರಾರಂಭವಾದ ಬಹಳ ಸಮಯದ ನಂತರ ಲಂಡನ್ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ಇದು ಭಾರತದ ಕೋಪಕ್ಕೆ ಕಾರಣವಾಗಿದೆ.

ಭದ್ರತೆ ನೀಡಿದ ಯುಕೆ:
ಭಾರತದ ಬಿಸಿ ಮುಟ್ಟಿಸಿದ ಬೆನ್ನಲ್ಲೇ ಯುಕೆ ಸರ್ಕಾರ ಭಾರತದ ಹೈಕಮೀಷನ್‌ ಕಚೇರಿಗೆ ಭದ್ರತೆ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಸ್ಥಳದಲ್ಲಿ ನಿಯೋಜಿಸಲಾಗಿದ್ದು ಬ್ಯಾರಿಕೇಡ್‌ ಹಾಕಲಾಗಿದೆ. ಪೊಲೀಸ್ ಅಧಿಕಾರಿಗಳು, ಸಂಪರ್ಕ ಅಧಿಕಾರಿಗಳು ಮತ್ತು ಗಸ್ತು ಅಧಿಕಾರಿಗಳು ನಿಯೋಜನೆಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *