ರಾಜಕೀಯ ಅನುಭವ ಇಲ್ಲದೇ ಇದ್ರೂ ಶಿರಾದಲ್ಲಿ ತಾವರೆ ಅರಳಿಸಿದ ರಾಜೇಶ್‌ ಗೌಡ!

Public TV
2 Min Read

ತುಮಕೂರು: ಕರ್ನಾಟಕದ ಚುನಾವಣಾ ಇತಿಹಾಸದಲ್ಲಿಯೇ 2018ರವರೆಗೆ ಶಿರಾ (Sira) ಕ್ಷೇತ್ರದಲ್ಲಿ ಕಮಲ ಪಕ್ಷದ ಖಾತೆಯೇ ತೆರೆದಿರಲಿಲ್ಲ. ಆದರೆ 2020 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ (BJP) ಅಭ್ಯರ್ಥಿ ಸಿ.ಎಂ.ರಾಜೇಶ್ ಗೌಡ ಗೆದ್ದು ಶಿರಾ ಕೋಟೆಯ ಮೇಲೆ ಬಿಜೆಪಿ ಬಾವುಟ ಹಾರಿಸಿ ಇತಿಹಾಸ ಸೃಷ್ಟಿಸಿದ್ದರು.

ಮಾಜಿ ಸಚಿವ ಟಿ.ಬಿ.ಜಯಚಂದ್ರರ (TB Jayachandra) ವಿರುದ್ದ ಬರೋಬ್ಬರಿ 13,800 ಮತಗಳ ಅಂತರದಿಂದ ಗೆದ್ದು ಬೀಗಿದ ಸಿ.ಎಂ.ರಾಜೇಶ್ ಗೌಡ (Dr. Rajesh Gowda) ವೃತ್ತಿಯಲ್ಲಿ ವೈದ್ಯರು. ಬೆಂಗಳೂರಿನಲ್ಲಿ ವೈದ್ಯ ವೃತ್ತಿ ಮಾಡಿಕೊಂಡಿದ್ದ ಇವರ ತಂದೆ ಮೂಡಲಗಿರಿಯಪ್ಪ ಮೂರುಬಾರಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದರು. ಒಂದು ಬಾರಿ ಶಿರಾ ಕ್ಷೇತ್ರದಿಂದ ಶಾಸಕರಾಗಿದ್ದರು. ಆದರೂ ಪುತ್ರ ರಾಜೇಶ್ ಗೌಡ ಮಾತ್ರ ರಾಜಕೀಯದತ್ತ ಸುಳಿಯದೇ ವೈದ್ಯ ವೃತ್ತಿಯಲ್ಲಿ ತೊಡಗಿದ್ದರು. ತಂದೆಯ ಯಾವುದೇ ರಾಜಕೀಯ ಸಭೆ ಸಮಾರಂಭಗಳಲ್ಲಿ ಇವರು ಭಾಗಿಯಾಗುತ್ತಿರಲಿಲ್ಲ. ಇದನ್ನೂ ಓದಿ: ಚುನಾವಣೆ ಬಂದ್ರೆ ಕುರುಡುಮಲೆ ವಿನಾಯಕನಿಗೆ ಎಲ್ಲಿಲ್ಲದ ಬೇಡಿಕೆ 

ತಂದೆ ಮೂಡಲ ಗಿರಿಯಪ್ಪ ರಾಜಕೀಯದಿಂದ ನೇಪಥ್ಯಕ್ಕೆ ಸರಿದು ದಶಕಗಳೇ ಕಳೆದಿತ್ತು. ಆದರೆ ಇದ್ದಕಿದ್ದ ಹಾಗೇ ರಾಜೇಶ್ ಗೌಡರಲ್ಲಿ ತಾನೂ ಜನಪ್ರತಿನಿಧಿ ಆಗಬೇಕು ಎಂಬ ಹಂಬಲ ಮೂಡಿತ್ತು. 2018 ರಲ್ಲಿ ಶಿರಾ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿದ್ದ ಜೆಡಿಎಸ್‌ನ ಸತ್ಯನಾರಾಯಣ ಅವರು 2020 ರಲ್ಲಿ ಅಕಾಲಿಕ ಮರಣ ಹೊಂದಿದ್ದರು. ಹಾಗಾಗಿ ಶಿರಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ಡಾ.ಸಿ.ಎಂ ರಾಜೇಶ್ ಗೌಡರು ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಕಾಂಗ್ರೆಸ್‌ನಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ ಎದುರಾಳಿಯಾಗಿದ್ದರು. ಆದರೂ ರಾಜೇಶ್ ಗೌಡರು ಜಯಚಂದ್ರರ ವಿರುದ್ದ ಗೆದ್ದು ಜಯಭೇರಿ ಬಾರಿಸಿ ಇತಿಹಾಸ ಸೃಷ್ಟಿಸಿದರು.

ಶಾಸಕ ಡಾ.ಸಿ.ಎಂ. ರಾಜೇಶ್ ಗೌಡರದ್ದು ಸೌಮ್ಯ ಸ್ವಭಾವ. ಶಿರಾ ತಾಲೂಕಿನ ಚಿರತೆಹಳ್ಳಿಯವರು. ತಾವು ಬೆಂಗಳೂರಲ್ಲಿ ವೈದ್ಯ ವೃತ್ತಿಯಲ್ಲಿ ತೊಡಗಿದ್ದರೂ ತಮ್ಮ ತಾಲೂಕಿನ ಜನರನ್ನು ಮರೆತಿರಲಿಲ್ಲ. ಆಗಾಗ ಬಂದು ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ಊರ ಜನರ ವೈದ್ಯಕೀಯ ಸೇವೆ ಮಾಡುತಿದ್ದರು. ಜನರ ಕಷ್ಟಕ್ಕೆ ಸ್ಪಂದಿಸುತಿದ್ದರು. ಆ ಮೂಲಕ ಜನ ಮಾನಸದಲ್ಲಿ ಒಳ್ಳೆ ಡಾಕ್ಟ್ರು ಎಂದೇ ಜನಜನಿತರಾಗಿದ್ದರು. ಹಾಗಾಗಿ ಶಿರಾ ಕ್ಷೇತ್ರದ ಜನತೆ 2020 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ರಾಜೇಶ್ ಗೌಡರ ಕೈ ಹಿಡಿದರು. ಇದನ್ನೂ ಓದಿ: 2 ದಶಕಗಳಿಂದ ಹಾಲಿ ಶಾಸಕರಿಗೆ ಸೋಲು – ಇದು ಆಳಂದ ವಿಶೇಷತೆ 

ಕೋವಿಡ್ ಕಾಲದಲ್ಲಿ ಕಣ್ಣೀರು ಒರೆಸಿದ ರಾಜೇಶ್ ಗೌಡರು- ಕೋವಿಡ್ ಎರಡನೇ ಅಲೆಯಲ್ಲಿ ಶಿರಾ ಕ್ಷೇತ್ರದ ಜನ ಅಕ್ಷರಶಃ ತತ್ತರಿಸಿದ್ದರು. ತುಮಕೂರು ಜಿಲ್ಲೆಯಲ್ಲಿ ಕೋವಿಡ್ ಮೊದಲ ಕೇಸ್ ಪತ್ತೆಯಾಗಿದ್ದೇ ಶಿರಾದಲ್ಲಿ. ಈ ವೇಳೆ ಕಾಲಿಗೆ ಚಕ್ರಕಟ್ಟಿಕೊಂಡು ಕೋವಿಡ್ ಪೀಡಿತರ ಸೇವೆ ಮಾಡಿದ ರಾಜೇಶ್ ಗೌಡರು ಜನ ಸಾಮಾನ್ಯರ ನೆರವಿಗೆ ಬಂದರು. ಫುಡ್ ಕಿಟ್, ವ್ಯಾಕ್ಸಿನೇಷನ್‌, ಮೆಡಿಷಿನ್ ಹೀಗೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡಿದ್ದರು.

ಮದಲೂರು ಕೆರೆಗೆ ನೀರು ಹರಿಸಿದ್ದು, ಭದ್ರಾ ಮೇಲ್ದಂಡೆ ಕಾಮಗಾರಿ ಅನುಷ್ಠಾನ, ಶಿರಾ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಿದ್ದು, ಆಕ್ಸಿಜನ್ ತಯಾರಿಕಾ ಘಟಕ, ಆರ್‌ಟಿಪಿಸಿಆರ್‌ ಘಟಕ ‌ಶಿರಾಗೆ ತಂದಿದ್ದು, ಸ್ವಾತಂತ್ರ್ಯ ಬಂದು 75 ವರ್ಷ ಆದರೂ ರಸ್ತೆ ಕಾಣದ ಊರಿಗೆ ರಸ್ತೆ ಮಾಡಿಕೊಟ್ಟಿದ್ದಾರೆ. ಇದೇ ರೀತಿಯ ಹಲವು ಅಭಿವೃದ್ಧಿಯ ಕಾರ್ಡ್ ಇಟ್ಟುಕೊಂಡು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *