ಶುಕ್ರವಾರದ್ದು ಚುನಾವಣಾ ಪ್ರಣಾಳಿಕೆ ಬಜೆಟ್ ಎಂದು ನಮಗೆ ಗೊತ್ತಿದೆ: ಡಿ.ಕೆ ಶಿವಕುಮಾರ್

Public TV
3 Min Read

ಮೈಸೂರು: ನಾಳೆಯದು ಚುನಾವಣಾ ಪ್ರಣಾಳಿಕೆ (Election Manifesto) ಬಜೆಟ್ ಎಂದು ನಮಗೆ ಗೊತ್ತಿದೆ. ಕಳೆದ ವರ್ಷದ ಬಜೆಟ್ (Budget) ನಲ್ಲಿ ಬರೀ ಘೋಷಣೆ, ಭರವಸೆ, ಭಾಷಣ ಇತ್ತು. ಡಬಲ್ ಎಂಜಿನ್ ಸರ್ಕಾರದಲ್ಲಿ ಹೊಗೆ ಬಂತೇ ಹೊರತು ಎಂಜಿನ್ ಮುಂದಕ್ಕೆ ಹೋಗಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ವ್ಯಂಗ್ಯವಾಡಿದ್ದಾರೆ.

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಎಂಜಿನ್ ಸ್ಟಾರ್ಟ್ ಆಯಿತೇ ಹೊರತು ಮುಂದಕ್ಕೆ ಹೋಗಲೇ ಇಲ್ಲ. ಕಳೆದ ವರ್ಷ ಬಜೆಟ್‍ನಲ್ಲಿ ಘೋಷಣೆ ಆಗಿದ್ದರಲ್ಲಿ ಏನೇನಾಗಿದೆ ಎಂದು ಸಿಎಂ ಒಂದು ರಿಪೋರ್ಟ್ ಕೊಡಬೇಕು ಅಲ್ಲವಾ? ಸಂಜೆ ಒಳಗೆ ಅವರು ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಲಿ. ಬಸವಣ್ಣನ ಹೆಸರಿಟ್ಟುಕೊಂಡು ನುಡಿದಂತೆ ನಡೆದಿದ್ದೇನೆ ಎಂಬುದನ್ನು ಸಿಎಂ ಜನರಿಗೆ ಹೇಳಲಿ ಎಂದರು.

ಬಿಜೆಪಿ ಪ್ರಣಾಳಿಕೆಯ ಶೇ.90ರಷ್ಟನ್ನು ಈಡೇರಿಸಲಿಲ್ಲ. ಯಡಿಯೂರಪ್ಪ (B.S Yediyurappa) ಅವರು ಹಸಿರು ಟವಲ್ ಅನ್ನು ಹಾಕಿಕೊಂಡು ಬಜೆಟ್ ಮಂಡಿಸಿದ್ದರು. ಆದರೆ ಏನುಪ್ರಯೋಜನ? ಬಿಜೆಪಿ (BJP) ಯದ್ದು ಬರೀ ಸುಳ್ಳಿನ ಸರಮಾಲೆ. ಮೂರೂವರೆ ವರ್ಷದಲ್ಲಿ ಬಿಜೆಪಿ ಸಾಧನೆ ಏನು ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಗೆ 170 ಪ್ರಶ್ನೆಗಳನ್ನು ಕೇಳಿದ್ದೇವೆ. ಒಂದೇ ಒಂದು ಪ್ರಶ್ನೆಗೂ ಉತ್ತರ ಬರಲಿಲ್ಲ. ಸುಳ್ಳಿಗೂ ಒಂದು ಲೆಕ್ಕ ಇರಬೇಕು ಆದರೆ ನಿಮಗೆ ಆ ಲೆಕ್ಕವೂ ಇಲ್ಲ. ಬಿಜೆಪಿಯದ್ದು ಬರೀ ವಂಚನೆ. ಬಿಜೆಪಿಗೆ ಅಧಿಕಾರದಲ್ಲಿರುವ ಅರ್ಹತೆಯಿಲ್ಲ. ಮಾರ್ಚ್ 7 ಅಥವಾ 8ನೇ ತಾರೀಕು ಚುನಾವಣಾ ನೀತಿ ಸಂಹಿತೆ ಘೋಷಣೆ ಆಗುತ್ತದೆ. ನಾಳೆ ಆಗುವ ಬಜೆಟ್ ಕೇವಲ ಪೇಪರ್‍ನಲ್ಲಿ ಉಳಿಯುತ್ತದೆ ಎಂದು ಹೇಳಿದರು.

ಸಿದ್ದರಾಮಯ್ಯ (Siddaramaiah) ಸರ್ಕಾರದಲ್ಲಿ ಕೊಟ್ಟ ಮನೆಗಳಿಗೆ ಬಿಲ್ ಕೊಡಲು ಕೂಡ ಈ ಸರ್ಕಾರದ ಕೈಯಲ್ಲಿ ಆಗಲಿಲ್ಲ. ಬಿಜೆಪಿಯದ್ದು ಬರೀ ಬೊಗಳೆ, ಖಾಲಿ ಮಾತು. ಹೈದರಾಬಾದ್ ಕರ್ನಾಟಕದವರು ನಿಮಗೆ ಮತ ಹಾಕಲ್ಲ ಎಂದು ಅವರ ಅಭಿವೃದ್ಧಿಗೆ ಏಕೆ ಹಣ ಖರ್ಚು ಮಾಡಲಿಲ್ಲ. ಬಿಜೆಪಿ ಸರ್ಕಾರ ಜನರ ನೆತ್ತಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಇದು ದೋಖಾ ಸರ್ಕಾರ. ಎಲ್ಲಾ ವರ್ಗದವರಿಗೂ ಈ ಸರ್ಕಾರ ದೋಖಾ ಮಾಡಿದೆ. ಈ ರಾಜ್ಯದ ಎಲ್ಲಾ ದಾರ್ಶನಿಕರ ಇತಿಹಾಸ ಕೂಡ ತಿರುಚಿದ್ದೀರಿ. ಕರ್ನಾಟಕವನ್ನು ಭ್ರಷ್ಟತನದ ರಾಜಧಾನಿಯನ್ನಾಗಿ ಮಾಡಿಬಿಟ್ಟರು ಎಂದರು.

ಮೈಸೂರು- ಬೆಂಗಳೂರು ಹೈವೆಗೆ 250ರೂ ಟೋಲ್ ನಿಗದಿ ಮಾಡಲಾಗುತ್ತಿದೆ. ಸರ್ವಿಸ್ ರಸ್ತೆಯಿಲ್ಲದೆ ಟೋಲ್ ವಸೂಲಿ ಮಾಡುವುದು ತಪ್ಪು. ದುಡ್ಡಿಲ್ಲದವರು ಏನು ಮಾಡಬೇಕು? ಸರ್ವಿಸ್ ರಸ್ತೆ ಆಗುವವರೆಗೂ ಟೋಲ್ ವಸೂಲಿ ಮಾಡಬಾರದು. ಇದು ಕಾಂಗ್ರೆಸ್ ಸರ್ಕಾರದ ಅಚಲ ನಿರ್ಧಾರ ಎಂದು ಹೇಳಿದರು. ಇದನ್ನೂ ಓದಿ: ಅಶ್ವಥ್ ನಾರಾಯಣ್ ವಿವಾದಾತ್ಮಕ ಹೇಳಿಕೆ- ಸಾಕು ಬಿಟ್ಬಿಡಿ ಅಂತ ಮಾಧುಸ್ವಾಮಿ ಮನವಿ

ಸರ್ವಿಸ್ ರಸ್ತೆಯಿಲ್ಲದೆ ಟೋಲ್ ವಸೂಲಿ ಶುರು ಮಾಡಿದರೆ ಕಾಂಗ್ರೆಸ್ (Congress) ಈ ಭಾಗದಲ್ಲಿ ದೊಡ್ಡ ಹೋರಾಟ ಶುರು ಮಾಡುತ್ತದೆ. ಇದರ ಉದ್ಘಾಟನೆಗೆ ನೀವು ಪ್ರಧಾನಿಯನ್ನು ಕರೆಸುತ್ತೀರೋ ಅಥವಾ ಇನ್ಯಾರನ್ನಾದರೂ ಕರೆಸುತ್ತೀರೋ ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಕಾರಾದರೂ ಓಡಿಸಲಿ, ಏನಾದರೂ ಮಾಡಲಿ. ಅಲ್ಲೇ ಬಿದ್ದು ಒದ್ದಾಡಲಿ ನಮಗೆ ಸಮಸ್ಯೆ ಇಲ್ಲ. ಆದರೆ ನಮಗೆ ಮೊದಲು ಸರ್ವಿಸ್ ರಸ್ತೆ ಆಗಬೇಕು. ಈಗಾಗಲೇ ಈ ರಸ್ತೆಯಿಂದ 10 ಸಾವಿರ ಜನ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದರು.

ಸಿದ್ದರಾಮಯ್ಯ ವಿರುದ್ಧ ಅಶ್ವಥ್ ನಾರಾಯಣ್ (Ashwath Narayan) ಅವಹೇಳನಾಕಾರಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಟಗರಾ? ತಲೆ ತೆಗೆಯಲು? ಯಾವ ಇತಿಹಾಸದಲ್ಲಿ ಅದು ಇದೆ? ನಾಟಕ ಓದಿಕೊಂಡು ಬಂದಿದ್ದಾರಾ? ಎಂದು ಪ್ರಶ್ನಿಸಿದರು.

ಅಶ್ವಥ್ ನಾರಾಯಣ್ ಮಾತಿಗೆ ನಾನು ಉತ್ತರ ನೀಡುವುದಿಲ್ಲ. ಅವರ ಈ ಮಾತಿಗೆ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಉತ್ತರ ಕೊಡಬೇಕು. ಆ ಬಚ್ಚಲು ವಿಚಾರ ನಾನು ಹೇಳಿ ನನ್ನ ಬಾಯಿ ಬಚ್ಚಲು ಮಾಡಿಸಿಕೊಳ್ಳಲು ಇಷ್ಟಪಡುವುದಿಲ್ಲ. ಟಿಪ್ಪು (Tippu) ವಿಚಾರವಾಗಿ ರಾಷ್ಟ್ರಪತಿಗಳು ಸದನದಲ್ಲಿ ಏನು ಮಾತನಾಡಿದ್ದಾರೆ ಎನ್ನುವುದು ದಾಖಲೆ ಇದೆ. ಅಶ್ವಥ್ ನಾರಾಯಣ್ ಮಾತನಾಡಿದ ಬಗ್ಗೆ ಜನ ನಿರ್ಧಾರ ಮಾಡಲಿ. ನಾನೇಕೆ ಅವರಿಗೆ ಸರ್ಟಿಫಿಕೇಟ್ ಕೊಡಲಿ? ಎಂದು ಹೇಳಿಕೆಯನ್ನು ನೀಡಿದ್ದಾರೆ.

ಕಿಚ್ಚ ಸುದೀಪ್ ಮತ್ತು ಡಿ.ಕೆ.ಶಿವಕುಮಾರ್ ಭೇಟಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸುದೀಪ್ ನನ್ನ ಸ್ನೇಹಿತ. ಅವರ ಜೊತೆ ಲೋಕಾಚಾರವಾಗಿ ಚರ್ಚೆ ನಡೆಸಿದ್ದೇನೆ. ಅವರು ಹಲವಾರು ಸಾಮಾಜಿಕ ಸೇವೆಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಚರ್ಚೆಗಳನ್ನು ಮಾಡಿದ್ದೇವೆ. ರಾಜಕೀಯದಲ್ಲಿ ನನ್ನ ಅನುಭವದ ಬಗ್ಗೆ ಅವರಿಗೆ ಕೆಲವು ವಿಚಾರಗಳನ್ನು ಹೇಳಿದ್ದೇನೆ ಅಷ್ಟೆ. ನಾನೇನು ಪಕ್ಷಕ್ಕೆ ಆಹ್ವಾನ ಮಾಡಿಲ್ಲ. ಅವರಿಗೆ ಬಲವಂತ ಮಾಡುವ ಪ್ರಶ್ನೆ ಇಲ್ಲ ಎಂದು ಹೇಳಿದರು.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *