ಎಂಎ ಅರ್ಥಶಾಸ್ತ್ರ ಪರೀಕ್ಷೆ ಪಾಸ್ ಮಾಡಿದ್ರು 98ರ ಹಿರಿಯ ವ್ಯಕ್ತಿ!

Public TV
1 Min Read

ಪಾಟ್ನಾ: 98 ವರ್ಷದ ಹಿರಿಯ ವ್ಯಕ್ತಿಯೊಬ್ಬರು ಮುಕ್ತ ವಿಶ್ವವಿದ್ಯಾಲಯದ ಮೂಲಕ ಅರ್ಥಶಾಸ್ತ್ರ ಸ್ನಾತಕೋತ್ತರ ಪರೀಕ್ಷೆಯನ್ನು ತೇರ್ಗಡೆಯಾಗಿ ಸುದ್ದಿಯಾಗಿದ್ದಾರೆ.

1938ರಲ್ಲಿ ಪದವಿ ಪಡೆದಿದ್ದ ರಾಜ್ ಕುಮಾರ್ ವೈಶ್ಯ ಈಗ ಪಾಟ್ನಾದ ನಳಂದಾ ಮುಕ್ತ ವಿಯಲ್ಲಿ ಅರ್ಥಶಾಸ್ತ್ರ ಪರೀಕ್ಷೆಯನ್ನು ಬರೆದು ತೇರ್ಗಡೆಯಾಗಿದ್ದಾರೆ.

ತನ್ನ ಸಾಧನೆಯ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿ ಸಂತಸ ವ್ಯಕ್ತಪಡಿಸಿದ ಅವರು, ಕೊನೆಗೂ ನನ್ನ ಜೀವನದ ದೊಡ್ಡ ಕನಸನ್ನು ನನಸು ಮಾಡಿದ್ದೇನೆ. ಸ್ನಾತಕೋತ್ತರ ಪದವಿ ಪಡೆದಿದ್ದಕ್ಕೆ ಸಂತೋಷ ಆಗುತ್ತಿದೆ. ಯಾರು ಯಾವ ವರ್ಷದಲ್ಲಿ ಬೇಕಾದರೂ ಕನಸು ನನಸು ಮಾಡಬಹುದು ಎನ್ನುವುದಕ್ಕೆ ನಾನು ಉತ್ತಮ ಉದಾಹರಣೆ ಎಂದು ಅವರು ಹೇಳಿದರು.

ಯಾರು ಅವರ ಸ್ವ ಸಾಮಾರ್ಥ್ಯದ ಬಗ್ಗೆ ನಂಬಿಕೆ ಇಡುತ್ತಾರೋ ಅವರಿಗೆ ಯಾವಾಗಲೂ ಅವಕಾಶಗಳು ತೆರೆದಿರುತ್ತದೆ. ಯಾವತ್ತೂ ನಿರಾಶೆ ಭಾವನೆಯನ್ನು ಇಟ್ಟುಕೊಳ್ಳಬೇಡಿ ಎಂದು ಅವರು ಕಿರಿಯರಿಗೆ ಸಲಹೆ ನೀಡಿದರು.

ಈ ಪ್ರಾಯದಲ್ಲಿ ಬೆಳಗ್ಗೆ ಬೇಗ ಎದ್ದು ಪರೀಕ್ಷೆಗೆ ತಯಾರಾಗುವುದು ಬಹಳ ಕಷ್ಟದ ಕೆಲಸವಾಗಿತ್ತು . 2015ಕ್ಕೆ ಸ್ನಾತಕೋತ್ತರ ಪದವಿಗೆ ದಾಖಲಾದ ವೈಶ್ಯ ಅವರು ಮುಂದೆ ಪಿಎಚ್‍ಡಿ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ನಲಂದಾ ಮುಕ್ತ ವಿವಿಯ ಅಧಿಕಾರಿ ಪ್ರತಿಕ್ರಿಯಿಸಿ, ಮೂರು ಗಂಟೆ ಬರೆದು ರಾಜ್ ಕುಮಾರ್ ವೈಶ್ಯ ಪರೀಕ್ಷೆ ಪೂರ್ಣಗೊಳಿಸಿದ್ದಾರೆ. ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ಬರೆದ ಅವರು ಎರಡು ಡಜನ್‍ಗಿಂತ ಹೆಚ್ಚು ಉತ್ತರ ಪತ್ರಿಕೆ ತೆಗೆದುಕೊಂಡು ಉತ್ತರ ಬರೆದಿದ್ದಾರೆ ಎಂದು ತಿಳಿಸಿದರು.

1920 ಏಪ್ರಿಲ್ 1ರಂದು ಉತ್ತರಪ್ರದೇಶದ ಬರೇಲಿಯಲ್ಲಿ ಜನಿಸಿದ ಇವರು 1938ರಲ್ಲಿ ಅಗ್ರಾ ವಿವಿಯಿಂದ ಪದವಿ ಪಡೆದ ಬಳಿಕ 1940ರಲ್ಲಿ ಕಾನೂನು ಡಿಗ್ರಿ ಪಡೆದಿದ್ದರು. ಕುಟುಂಬ ಸಮಸ್ಯೆಯಿಂದಾಗಿ ವೈಶ್ಯ ಅವರಿಗೆ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ಜಾರ್ಖಂಡ್ ನಲ್ಲಿ 1980ರವರೆಗೆ ಉದ್ಯೋಗದಲ್ಲಿದ್ದ ಇವರು ಜನರ ಮತ್ತು ದೇಶದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸ್ನಾತಕೋತ್ತರ ಅರ್ಥಶಾಸ್ತ್ರ ಪದವಿ ಓದಿದ್ದೇನೆ ಎಂದು ಹೇಳಿದ್ದಾರೆ.

10 ವರ್ಷದ ಹಿಂದೆ ಪತ್ನಿಯನ್ನು ಕಳೆದುಕೊಂಡ ಇವರು ಮಗನ ಜೊತೆ ವಾಸವಾಗಿದ್ದಾರೆ. ಶುದ್ಧ ಸಸ್ಯಾಹಾರಿಯಾಗಿರುವ ವೈಶ್ಯ ಇದೂವರೆಗೆ ಆಧುನಿಕ ಜಗತ್ತಿನ ತಿಂಡಿಗಳನ್ನು ತಿನ್ನಿಲ್ಲವಂತೆ.

 

Share This Article
Leave a Comment

Leave a Reply

Your email address will not be published. Required fields are marked *