94 ಕೋಟಿ ಹಗರಣ – ಸಿಬಿಐಗೆ ದೂರು ನೀಡಿ ಮೂವರನ್ನು ಅಮಾನತುಗೊಳಿಸಿದ ಯೂನಿಯನ್‌ ಬ್ಯಾಂಕ್‌

Public TV
1 Min Read

ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಖಾತೆಯಲ್ಲಿ ಅವ್ಯವಹಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂನಿಯನ್‌ ಬ್ಯಾಂಕ್‌ ತನ್ನ ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿದೆ.

ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಬ್ಯಾಂಕ್‌, ಖಾತೆಗಳಲ್ಲಿನ ವಂಚನೆಯ ವಹಿವಾಟಿನ ಬಗ್ಗೆ ಬ್ಯಾಂಕ್ ಅರಿವು ಹೊಂದಿದೆ. ಅಕ್ರಮಗಳು ಬೆಳಕಿಗೆ ಬಂದಾಗ ಬ್ಯಾಂಕ್ ತಕ್ಷಣವೇ ಪ್ರಶ್ನಾರ್ಹ ವಹಿವಾಟುಗಳನ್ನು ವಂಚನೆ ಎಂದು ಘೋಷಿಸಿದೆ. ಸಂಪೂರ್ಣ ತನಿಖೆ ಮತ್ತು ಅಪರಾಧಿಗಳ ಪತ್ತೆಗಾಗಿ ಮೇ 30 ರಂದು ಕೇಂದ್ರೀಯ ತನಿಖಾ ದಳಕ್ಕೆ (CBI) ದೂರು ನೀಡಿದ್ದೇವೆ. ಮುಂದಿನ ವಿಚಾರಣೆಗಾಗಿ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ 94 ಕೋಟಿ ಗೋಲ್ಮಾಲ್‌ – ಯೂನಿಯನ್‌ ಬ್ಯಾಂಕ್‌ನಿಂದಲೇ ವಂಚನೆ, ಕೇಸ್‌ ದಾಖಲು

ಈ ಸಮಸ್ಯೆಯನ್ನು ನ್ಯಾಯಯುತವಾಗಿ ಮತ್ತು ತ್ವರಿತವಾಗಿ ಪರಿಹರಿಸಲು ನಾವು ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಮತ್ತು ಅಂತಹ ಘಟನೆಗಳನ್ನು ತಡೆಯಲು ನಾವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದೆ.  ಇದನ್ನೂ ಓದಿ: ಡೆತ್‌ನೋಟ್‌ನಲ್ಲಿರುವ ನಾಗರಾಜ್‌ ಜೊತೆ ನಾಗೇಂದ್ರಗೆ ವ್ಯವಹಾರ ಇದೆ: ಸಿಟಿ ರವಿಯಿಂದ ಫೋಟೋ ರಿಲೀಸ್

ಏನಿದು ಪ್ರಕರಣ?
ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್‌ (Chandrashekaran) ಮೂವರ ಹೆಸರನ್ನು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಯಾಂಕ್‌ನಿಂದ 94 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿದೆ. ಹಣ ವರ್ಗಾವಣೆಯಾದ ಬಗ್ಗೆ ಯಾವುದೇ ಮೇಲ್‌, ಮೆಸೇಜ್‌ ಬಂದಿಲ್ಲ. ಬ್ಯಾಂಕ್‌ ಸಿಬ್ಬಂದಿಯಿಂದಲೇ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿ ನಿಗಮದ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಅವರು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬ್ಯಾಕ್‌ನ 6 ಮಂದಿ ಸಿಬ್ಬಂದಿ ವಿರುದ್ಧ ಹೈಗ್ರೌಂಡ್ಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

 

Share This Article