ಪಾಕ್ ಹೆಸರನ್ನು ಪ್ರಸ್ತಾಪಿಸದೆ ಭಾರತದ ಅಭಿವೃದ್ಧಿ ಜಪಿಸಿದ ಮೋದಿ

Public TV
3 Min Read

– ನೀರಿನ ವಿಚಾರವಾಗಿ 24 ಬಾರಿ ಪ್ರಸ್ತಾಪ
– 11 ಬಾರಿ ಭಾರತದ ಹೆಸರನ್ನು ಪ್ರಸ್ತಾಪಿಸಿದ್ದ ಇಮ್ರಾನ್

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ದೆಹಲಿಯ ಕೆಂಪುಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು 92 ನಿಮಿಷಗಳ ಕಾಲ ಸುದೀರ್ಘ ಭಾಷಣ ಮಾಡಿದರು. ತಮ್ಮ ಭಾಷಣದಲ್ಲಿ ಒಂದೇ ಒಂದು ಬಾರಿಯೂ ಪಾಕಿಸ್ತಾನದ ಹೆಸರನ್ನು ಪ್ರಸ್ತಾಪಿಸಲಿಲ್ಲ.

ಹೌದು. ಬುಧವಾರ ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಾಬಾದ್ ವಿಧಾನ ಸಭೆಯಲ್ಲಿ ಮಾತನಾಡಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಡಾಯಿ ಕೊಚ್ಚಿದ್ದರು. ಹೀಗಾಗಿ ಮೋದಿ ಇಂದು ಈ ಭಾಷಣಕ್ಕೆ ತಿರುಗೇಟು ಎನ್ನುವಂತೆ ನೇರವಾಗಿ ಪಾಕಿಸ್ತಾನದ ಹೆಸರನ್ನು ಪ್ರಸ್ತಾಪ ಮಾಡಬಹುದು ಎನ್ನುವ ವಿಶ್ಲೇಷಣೆ ಕೇಳಿ ಬಂದಿತ್ತು. ಆದರೆ ಮೋದಿ ತಮ್ಮ ಭಾಷಣದಲ್ಲಿ ಎಲ್ಲಿಯೂ ಪಾಕಿಸ್ತಾನದ ಹೆಸರನ್ನು ಹೇಳದೇ ಪರೋಕ್ಷವಾಗಿ ಉಗ್ರರಿಗೆ ಸಹಕಾರ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಇದುವರಗೂ ಕೆಂಪುಕೋಟೆ ಮೇಲೆ 6 ಬಾರಿ ಧ್ವಜಾರೋಹಣ ನೆರವೇರಿಸಿ, ಭಾಷಣ ಮಾಡಿದ್ದಾರೆ. ಈ ಪೈಕಿ ಇಂದು ಮಾಡಿದ ಭಾಷಣವು ಎರಡನೇ ಸುದೀರ್ಘ ಭಾಷಣವಾಗಿದೆ. 2016ರಲ್ಲಿ ಮೋದಿ ಅವರು 96 ನಿಮಿಷ ಭಾಷಣ ಮಾಡಿದ್ದರು. ಇದು ಅತ್ಯಂತ ಸುದೀರ್ಘ ಭಾಷಣವಾಗಿದೆ. 2014ರಲ್ಲಿ 65 ನಿಮಿಷ, 2015ರಲ್ಲಿ 86 ನಿಮಿಷ, 2017ರಲ್ಲಿ 57 ನಿಮಿಷ, 2018ರಲ್ಲಿ 82 ನಿಮಿಷಗಳ ಕಾಲ ಭಾಷಣ ಮಾಡಿದ್ದಾರೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಸ್ವತಂತ್ರ ಭಾರತದ ಮೊದಲ ಭಾಷಣವನ್ನು 72 ನಿಮಿಷ ಮಾಡಿದ್ದರು. 2015ರ ವರೆಗೂ ಯಾವುದೇ ಪ್ರಧಾನಿಗಳು ಕೂಡ 72 ನಿಮಿಷಕ್ಕಿಂತ ಹೆಚ್ಚು ಕಾಲ ಭಾಷಣ ಮಾಡಿರಲಿಲ್ಲ.

ನೀರು:
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಮಾಡಿದ ಭಾಷಣದಲ್ಲಿ ಒಟ್ಟು 24 ಬಾರಿ ನೀರಿನ ಬಗ್ಗೆ ಪ್ರಸ್ತಾಪಿಸಿದ್ದಾರೆ. ಜಲ ಜೀವನ್ ಮಿಷನ್ ಯೋಜನೆಯಿಂದಾಗಿ ದೇಶದ ಪ್ರತಿ ಮನೆ ಮನೆಗೂ ನಲ್ಲಿಯ ಮೂಲಕ ನೀರು ಪೂರೈಕೆ ಆಗಲಿದೆ. 100 ಲಕ್ಷ ಕೋಟಿ ರೂ.ವನ್ನು ಮೂಲ ಸೌಕರ್ಯಕ್ಕೆ ಹಾಗೂ ಜಲ ಜೀವನ್ ಮೀಷನ್ ಯೋಜನೆಗೆ 3.5 ಲಕ್ಷ ಕೋಟಿ ರೂ. ಮೀಸಲು ಇಡಲಾಗಿದೆ. ಜಲ ಸಮಸ್ಯೆ ನಿವಾರಣೆಗಾಗಿ ಜಲಶಕ್ತಿ ಮಂತ್ರಾಲಯ ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.

ಬಡ ಜನರು:
ದೇಶದಲ್ಲಿರುವ ಬಡತನವನ್ನು ಹಾಗೂ ಬಡವರ ಸಂಖ್ಯೆಯನ್ನು ಕಡಿಮೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 2022ರ ವೇಳೆಗೆ ಪ್ರತಿ ಬಡವರಿಗೂ ಶಾಶ್ವತ ಮನೆ ನೀಡಲಾಗುತ್ತದೆ. 100 ಲಕ್ಷ ಕೋಟಿ ರೂ.ವನ್ನು ಮೂಲ ಸೌಕರ್ಯಕ್ಕೆ ಹಾಗೂ ಜಲ ಜೀವನ್ ಮೀಷನ್ ಯೋಜನೆಗೆ 3.5 ಲಕ್ಷ ಕೋಟಿ ರೂ. ಮೀಸಲು ಇಡಲಾಗಿದೆ. ಪ್ರತಿಯೊಂದು ಗ್ರಾಮಕ್ಕೂ 24 ಗಂಟೆಗಳ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ನನಗೆ ಏನನ್ನು ಮಾಡಿಕೊಳ್ಳಲು ಅಧಿಕಾರಕ್ಕೆ ಬಂದಿಲ್ಲ. ನಾವು ಸಮಸ್ಯೆಗಳನ್ನು ಸಾಕುವುದೂ ಇಲ್ಲ, ದೂರ ತಳ್ಳುವುದಿಲ್ಲ. ಬದಲಾಗಿ ಅವುಗಳನ್ನು ಬಗೆಹರಿಸುತ್ತೇವೆ ಎಂದು ಮೋದಿ ಅವರು ಹೇಳುವ ಮೂಲಕ ಭಾಷಣದಲ್ಲಿ 17 ಬಾರಿ ಬಡ ಜನರ ಬಗ್ಗೆ ಮಾತನಾಡಿದ್ದಾರೆ.

ಭಯೋತ್ಪಾದನೆ:
ನರೇಂದ್ರ ಮೋದಿ ಅವರು ತಮ್ಮ ಸುದೀರ್ಘ ಭಾಷಣದಲ್ಲಿ ಭಯೋತ್ಪಾದನೆ ವಿಚಾರವನ್ನು 13 ಬಾರಿ ಪ್ರಸ್ತಾಪಿಸಿದರು. ಭಯೋತ್ಪಾದನೆಯು ಗೆದ್ದಲಿನಂತೆ ವರ್ತಿಸುತ್ತಿದ್ದು, ದೇಶವನ್ನು ಒಳಗಿನಿಂದಲೇ ಹಾಳು ಮಾಡುತ್ತಿದೆ. ಭಯೋತ್ಪಾದನೆ ಹೊಡೆದು ಹಾಕಲು ಎನ್‍ಡಿಎ ಸರ್ಕಾರರ ಶ್ರಮಿಸುತ್ತಿದೆ ಎಂದು ಹೇಳಿದರು. ಆದರೆ ಎಲ್ಲಿಯೂ ಪಾಕಿಸ್ತಾನ ಬಗ್ಗೆ ಮಾತನಾಡಲಿಲ್ಲ.

ಪ್ರವಾಸೋದ್ಯಮ:
ತಮ್ಮ ಸುದೀರ್ಘ ಭಾಷಣದಲ್ಲಿ ಪ್ರಧಾನಿ ಮೋದಿ ಅವರು, ಪ್ರವಾಸೋದ್ಯಮದ ಕುರಿತು 13 ಬಾರಿ ಮಾತನಾಡಿದ್ದಾರೆ. ಪ್ರವಾಸೋದ್ಯಮದಿಂದ ಸರ್ಕಾರಕ್ಕೆ ಹೆಚ್ಚಿನ ಹಣ ಹರಿದು ಬರುತ್ತಿದೆ. ಆದರೆ ದೇಶದ ಜನರು ರಜಾ ದಿನಗಳಲ್ಲಿ ಹೆಚ್ಚಾಗಿ ವಿದೇಶಿ ಪ್ರವಾಸ ಕೈಗೊಳ್ಳುತ್ತಾರೆ. ನಮ್ಮ ದೇಶದ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವುದು ತುಂಬಾ ಅಪರೂಪ ಎಂಬಂತಾಗಿದೆ. ದೇಶದ ಜನರು 2022ರ ಒಳಗೆ ಭಾರತದ 15 ಪ್ರವಾಸಿ ಸ್ಥಳಗಳಿಗೆ ಭೇಟಿ ಕೊಡುವ ಸಂಕಲ್ಪ ಮಾಡಬೇಕಿದೆ. ಎಲ್ಲಿ ನೀವು ಪ್ರವಾಸಕ್ಕೆ ಹೋಗುತ್ತಿರೋ ಅಲ್ಲಿ ಹೊಸ ಜಗತ್ತು ನಿರ್ಮಿಸಬಹುದು. ಭಾರತೀಯರು ಹೋಗುವ ಸ್ಥಳಗಳಿಗೆ ವಿದೇಶಿಯರು ಕೂಡ ಬರುತ್ತಾರೆ. ಈ ಮೂಲಕ ನಮ್ಮ ದೇಶದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ ಎಂದು ಮನವಿ ಮಾಡಿಕೊಂಡರು.

ಇಮ್ರಾನ್ ಖಾನ್ ತಮ್ಮ ಭಾಷಣದಲ್ಲಿ ಪಾಕಿಸ್ತಾನಕ್ಕಿಂತಲೂ ಕಾಶ್ಮೀರ ಪದವನ್ನೇ ಹೆಚ್ಚು ಬಳಸಿದ್ದರು. ಪಾಕಿಸ್ತಾನ 12 ಬಾರಿ ಬಳಸಿದ್ದರೆ ಕಾಶ್ಮೀರ ಪದವನ್ನು 20 ಬಾರಿ ಬಳಸಿದ್ದರು. ಉಳಿದಂತೆ ಮೋದಿ 7, ಭಾರತ 11, ಆರ್‌ಎಸ್ಎಸ್‌ 10, ಯುದ್ಧ 6, ಮುಸ್ಲಿಂ 14, ವಿಶ್ವ 12, ನಾಜಿ ಪದವನ್ನು 6 ಬಾರಿ ಬಳಕೆ ಮಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *