ನಾನೂ ಸೈನಿಕನಂತೆ ಹೋರಾಡಿದ್ದೆ – ಮನ್ ಕಿ ಬಾತ್‌ನಲ್ಲಿ 1975ರ ತುರ್ತು ಪರಿಸ್ಥಿತಿ ನೆನಪಿಸಿಕೊಂಡ ಮೋದಿ

Public TV
2 Min Read

ನವದೆಹಲಿ: ಆಕಾಶವಾಣಿಯಲ್ಲಿಂದು ಪ್ರಸಾರವಾದ `ಮನ್ ಕಿ ಬಾತ್’ 90ನೇ ಸಂಚಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು 1975ರ ತುರ್ತು ಪರಿಸ್ಥಿತಿಯ ದಿನಗಳನ್ನು ನೆನಪಿಸಿಕೊಂಡರು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವಕ್ಕಾಗಿ ಸೈನಿಕನಂತೆ ಹೋರಾಡಿದ್ದೇನೆ. ಅಂದು ದೇಶವಾಸಿಗಳ ಹೋರಾಟಕ್ಕೆ ಸಾಕ್ಷಿಯಾಗುವ, ಪಾಲುದಾರನಾಗುವ ಸೌಭಾಗ್ಯ ನನಗೆ ಸಿಕ್ಕಿತ್ತು ಎಂದು ಸ್ಮರಿಸಿದ್ದಾರೆ. ಅಲ್ಲದೆ ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವ ಇಂತಹ ಸಾಮೂಹಿಕ ಆಂದೋಲನದ ಬಗ್ಗೆ ನಾನು ನಿಮ್ಮೊಂದಿಗೆ ಚರ್ಚಿಸಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದ್ರೌಪದಿ ಮುರ್ಮು ಹುಟ್ಟೂರಿಗೆ ಮೊಟ್ಟ ಮೊದಲ ಬಾರಿಗೆ ವಿದ್ಯುತ್ ಸಂಪರ್ಕ

ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದಾಗ ದೇಶದಲ್ಲಿ ನಾಗರಿಕರ ಹಕ್ಕುಗಳು ದಮನಗೊಂಡಿದ್ದವು. ಸಂವಿಧಾನದ 21ನೇ ಪರಿಚ್ಛೇದ ನೀಡಿರುವ ಜೀವಿಸುವ ಹಕ್ಕು, ವೈಯಕ್ತಿಕ ಸ್ವಾತಂತ್ರ‍್ಯದ ಹಕ್ಕುಗಳನ್ನೂ ಕಿತ್ತುಕೊಳ್ಳಲಾಗಿತ್ತು. ಆದರೆ ತುರ್ತು ಪರಿಸ್ಥಿತಿಯ ನಂತರವೂ ದೇಶದ ಜನರು ಪ್ರಜಾಪ್ರಭುತ್ವದ ಮೇಲಿನ ನಂಬಿಕೆ ಕಳೆದುಕೊಳ್ಳಲಿಲ್ಲ. ದೇಶವು ಸ್ವಾತಂತ್ರ‍್ಯಗಳಿಸಿದ ಅಮೃತ ಮಹೋತ್ಸವ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯ ಸಂಕಷ್ಟಗಳನ್ನು ನಾವು ಮರೆಯಬಾರದು ಎಂದು ಅವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಅರಬ್ಬೀ ಸಮುದ್ರದಲ್ಲಿ ಹಡಗು ಮುಳುಗಡೆ – ತೈಲ ಸೋರಿಕೆ ಆತಂಕದಲ್ಲಿ ದ.ಕ ಜಿಲ್ಲಾಡಳಿತ ಅಲರ್ಟ್

200 ಕೋಟಿ ಲಸಿಕೆ ಗುರಿ: ದೇಶಾದ್ಯಂತ ಬಹುತೇಕ ಜನರು ಕೊರೊನಾ ಲಸಿಕೆ ಪಡೆದಿರೋದು ತೃಪ್ತಿ ತಂದಿದೆ. ಕೊರೊನಾ ವಿರುದ್ಧ ಜನತೆ ಇನ್ನಷ್ಟು ಸುರಕ್ಷತೆ ವಹಿಸಬೇಕು. ನಾವು ಶೀಘ್ರದಲ್ಲೇ 200 ಕೋಟಿ ಡೋಸ್ ಲಸಿಕೆ ಗುರಿ ತಲುಪಲಿದ್ದೇವೆ. ಈಗಾಗಲೇ 2ನೇ ಡೋಸ್ ಲಸಿಕೆ ಪಡೆದವರು ಬೂಸ್ಟರ್ ಡೋಸ್ ಪಡೆಯಬೇಕಾದ ಅಗತ್ಯತೆ ಇದೆ. ಮುಖ್ಯವಾಗಿ ವೃದ್ಧರು ಬೂಸ್ಟರ್ ಡೋಸ್ ಪಡೆಯಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದ್ದಾರೆ.

ಜಲ ಸಂರಕ್ಷಣೆಗೆ ಮೋದಿ ಕರೆ: ಜಲ ಸಂರಕ್ಷಣೆಯೇ ನಿಜವಾಗಿಯೂ ಜೀವ ಸಂರಕ್ಷಣೆ. ಇಂದಿನ ದಿನಗಳಲ್ಲಿ ಎಷ್ಟು ‘ನದಿ ಉತ್ಸವ’ಗಳು ನಡೆಯಲಾರಂಭಿಸಿವೆ ಎಂಬುದನ್ನು ನೀವು ನೋಡಿರಬೇಕು. ನಿಮ್ಮ ನಗರಗಳಲ್ಲಿ ಅಂತಹ ನೀರಿನ ಮೂಲಗಳು ಏನೇ ಇರಲಿ, ನೀವು ಏನನ್ನಾದರೂ ಆಯೋಜಿಸಿ ನೀರಿನ ಮೂಲಗಳನ್ನು ಸಂರಕ್ಷಣೆ ಮಾಡಬೇಕು ಎಂದು ಕರೆ ನೀಡಿದ್ದಾರೆ.

ಕ್ರೀಡಾ ತಾರೆಗಳಿಗೆ ಶುಭ ಹಾರೈಕೆ: 90ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಹಾಗೂ ಫಿನ್‌ಲ್ಯಾಂಡ್‌ನ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೆ ಶುಭ ಹಾರೈಸಿದರು.

ಸ್ಟಾರ್ಟ್-ಅಪ್‌ಗಳ ಬಗ್ಗೆ ಯಾರೂ ಯೋಚಿಸಲಿಲ್ಲ: ಕೆಲವು ವರ್ಷಗಳ ಹಿಂದೆ ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟ್ಅಪ್‌ಗಳ ಬಗ್ಗೆ ಯಾರೂ ಯೋಚಿಸಿರಲಿಲ್ಲ. ಇಂದು ಅವುಗಳ ಸಂಖ್ಯೆ ನೂರಕ್ಕೂ ಹೆಚ್ಚಾಗಿದೆ. ಈ ಎಲ್ಲ ಸ್ಟಾರ್ಟ್ಅಪ್‌ಗಳು ಅಂತಹ ಆಲೋಚನೆಗಳ ಮೇಲೆ ಕಾರ್ಯನಿರ್ವಹಿಸುತ್ತಿವೆ. ಇದನ್ನು ಮೊದಲು ಖಾಸಗಿ ವಲಯಕ್ಕೆ ಅಸಾಧ್ಯವೆಂದು ಪರಿಗಣಿಸಲಾಗಿತ್ತು ಎಂದು ಹೇಳಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *