608 ದಿನ, 3 ಮಿಷನ್‌, 9 ಬಾಹ್ಯಾಕಾಶ ನಡಿಗೆ – 27 ವರ್ಷಗಳ ನಾಸಾ ಜರ್ನಿಗೆ ಸುನಿತಾ ವಿಲಿಯಮ್ಸ್‌ ಗುಡ್‌ಬೈ

2 Min Read

– ಭಾರತ ಮೂಲದ ಸುನಿತಾ ವಿಲಿಯಮ್ಸ್‌

ವಾಷಿಂಗ್ಟನ್‌: ಸುದೀರ್ಘ ಬಾಹ್ಯಾಕಾಶ ನಡಿಗೆ ಪೂರೈಸಿದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಭಾರತ ಮೂಲದ ಸುನಿತಾ ವಿಲಿಯಮ್ಸ್‌ ನಾಸಾದಿಂದ ನಿವೃತ್ತಿಯಾಗಿದ್ದಾರೆ. 2025ರ ಡಿ.27ರಂದು ಸುನಿತಾ ನಿವೃತ್ತಿಯಾಗಿದ್ದಾರೆ ಎಂದು ನಾಸಾ ಮಂಗಳವಾರ ಘೋಷಿಸಿದೆ. ಇದರೊಂದಿಗೆ 27 ವರ್ಷಗಳ ಸುದೀರ್ಘ ಜರ್ನಿಗೆ ಗುಡ್‌ಬೈ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್‌ಮನ್, ಸುನಿತಾ ವಿಲಿಯಮ್ಸ್‌ ಅವರನ್ನ ಮಾನವ ಬಾಹ್ಯಾಕಾಶ ಹಾರಾಟದ ಪ್ರವರ್ತಕಿ ಎಂದು ಬಣ್ಣಿಸಿದರು. ವಿಜ್ಞಾನ ಮತ್ತು ತಂತ್ರಜ್ಞನಕ್ಕೆ ಸುನಿತಾ ಅವರು ನೀಡಿದ ಕೊಡುಗೆಗಳು ಅಪಾರ. ಅವರ ಯೋಜನೆಗಳು ಚಂದ್ರ ಮತ್ತು ಮಂಗಳ ಗ್ರಹದತ್ತ ತೆರಳುವ ನಮ್ಮ ಪ್ರಯತ್ನಗಳಿಗೆ ಭದ್ರ ಅಡಿಪಾಯವಾಗಿದೆ. ಅವರ ಸಾಧನೆಗಳು ಮುಂದಿನ ಪೀಳಿಗೆಗೆ ಪ್ರೇರಣೆ. ನಾಸಾ ಮತ್ತು ನಮ್ಮ ರಾಷ್ಟ್ರಕ್ಕೆ ಸುನಿತಾ ಅವರು ನೀಡಿದ ಗಣನೀಯ ಸೇವೆಗೆ ಧನ್ಯವಾದಗಳು ಎಂದು ಶ್ಲಾಘಿಸಿದರು.

Sunita Williams comes home after 286 days and 4577 laps around Earth

27 ವರ್ಷಗಳ ಸುದೀರ್ಘ ಜರ್ನಿ
1998ರಲ್ಲಿ ನಾಸಾಗೆ ಆಯ್ಕೆಯಾದ ಸುನಿತಾ ವಿಲಿಯಮ್ಸ್‌ ಅವರು 3 ಮಿಷನ್‌ಗಳಲ್ಲಿ ಒಟ್ಟು 608 ದಿನಗಳ ಕಾರ್ಯಾಚರಣೆ ನಡೆಸಿದ್ದಾರೆ. ಗಗನಯಾತ್ರಿ ಬುಚ್‌ ವಿಲ್ಮೋರ್‌ ಜೊತೆಗೆ 286 ದಿನಗಳ ಪ್ರಯಾಣ ಅತಿ ಉದ್ಧದ ಬಾಹ್ಯಾಕಾಶ ಯಾನವಾಗಿದೆ. 8 ದಿನಗಳ ಮಿಷನ್‌ಗಾಗಿ ತೆರಳಿದ್ದ ಸುನಿತಾ ಅವರು 286 ದಿನ ಬಾಹ್ಯಾಕಾಶದಲ್ಲಿ ಕಳೆದಿದ್ದರು. ಬೋಯಿಂಗ್ ಸ್ಟಾರ್ ಲೈನರ್ ಕ್ಯಾಪ್ಸುಲ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದ ಸುನಿತಾ ಅವರು 62 ಗಂಟೆ 6 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ ಪೂರೈಸಿದ್ದರು. ಈ ಮೂಲಕ ಸುದೀರ್ಘ ಬಾಹ್ಯಾಕಾಶ ನಡಿಗೆ ಪೂರೈಸಿದ ಮೊದಲ ಮಹಿಳಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೂ ಪಾತ್ರವಾದರು. ವಿಲಿಯಮ್ಸ್ ಮತ್ತು ವಿಲ್ಮೋರ್ ತಮ್ಮ ಕಾರ್ಯಾಚರಣೆಯ ಸಮಯದಲ್ಲಿ 12,13,47,491 ಮೈಲುಗಳು ಪ್ರಯಾಣಿಸಿದ್ದರು.

SpaceX Crew 9 Return Sunita Williams Butch Wilmore to undergo 45 day rehabilitation program Know all about it

ಸುನೀತಾ ವಿಲಿಯಮ್ಸ್ ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ, ಅವರು ಬಾಹ್ಯಾಕಾಶ ಪ್ರಯಾಣದಲ್ಲಿ ತಮ್ಮ ಹೊಸ ಸಾಧನೆಗಳಿಗೆ ಹೆಸರುವಾಸಿಯಾಗಿದ್ದಾರೆ. 1965 ರ ಸೆಪ್ಟೆಂಬರ್ 19, 1965 ರಂದು ಓಹಿಯೋದ ಯೂಕ್ಲಿಡ್‌ನಲ್ಲಿ ಭಾರತದ ಗುಜರಾತ್‌ನ ನರಶಸ್ತ್ರಚಿಕಿತ್ಸಕ ದೀಪಕ್ ಪಾಂಡ್ಯ ಮತ್ತು ಉರ್ಸುಲಿನ್ ಬೋನಿ ಪಾಂಡ್ಯ ದಂಪತಿಗಳಿಗೆ ಜನಿಸಿದರು. ಅವರು 2006 ರಲ್ಲಿ ತಮ್ಮ ಮೊದಲ ಬಾಹ್ಯಾಕಾಶ ನಡಿಗೆ ಮಾಡಿದರು. 2012ರ ಜುಲೈನಲ್ಲಿ 2ನೇ ಮಿಷನ್‌ನಲ್ಲಿ ಕಝಾಕಿಸ್ತಾನ್‌ನಿಂದ ಎಕ್ಸ್‌ಪೆಡಿಶನ್ 32/33ರ ಭಾಗವಾಗಿದ್ದರು. ಬಳಿಕ ಬಾಹ್ಯಾಕಾಶ ನಿಲ್ದಾಣದ ಕಮಾಂಡರ್‌ ಆಗಿ ಸೇವೆ ಸಲ್ಲಿಸಿದ್ದರು. 2024ರ ಜೂನ್‌ ನಲ್ಲಿ ಬೋಯಿಂಗ್‌ನ ಸ್ಟಾರ್‌ಲೈನರ್‌ ಅವರ ಕೊನೆಯ ಮಿಷನ್‌ ಆಗಿತ್ತು. 8 ದಿನಗಳ ಕಾರ್ಯಾಚರಣೆಗೆ ತೆರಳಿದ ಅವರು 2025ರ ಮಾರ್ಚ್‌ನಲ್ಲಿ ಹಿಂದಿರುಗಿದರು.

Share This Article