9 ಬಾರಿ ನೆಗೆಟಿವ್, 10ನೇ  ಟೆಸ್ಟ್ ನಲ್ಲಿ ಪಾಸಿಟಿವ್ ಬಂತು: ರೇಣುಕಾಚಾರ್ಯ

Public TV
3 Min Read

– ತಟ್ಟೆ, ಲೋಟ ಹಿಡ್ಕೊಂಡು ಜೀವನ ಮಾಡ್ತಿದ್ದೆ
– ದಯವಿಟ್ಟು ನಿರ್ಲಕ್ಷ್ಯ ಮಾಡ್ಬೇಡಿ

ಬೆಂಗಳೂರು: ದೇಶದಲ್ಲಿ, ರಾಜ್ಯದಲ್ಲಿ ಕೊರೊನಾ ದಿನೇ ದಿನೇ ಹೆಚ್ಚಳ ಆಗ್ತಿದೆ. ನಾನು 9 ಬಾರಿ ಪರೀಕ್ಷೆ ಮಾಡಿಸಿಕೊಂಡಾಗ ನೆಗೆಟಿವ್ ಬಂದಿತ್ತು. ಆದರೆ 10ನೇ ಬಾರಿಯ ಟೆಸ್ಟ್ ನಲ್ಲಿ ಕೊರೊನಾ ಪಾಸಿಟಿವ್ ಬಂತು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿಗಳು, ಸಿಎಂ ಯಡಿಯೂರಪ್ಪರವರು ಜನರಿಗೆ ಮಾರ್ಗಸೂಚಿ ಫಾಲೋ ಮಾಡಿ ಅಂತ ಹೇಳಿದರೂ ಕೇಳ್ತಿಲ್ಲ. ಜನರ ನಿರ್ಲಕ್ಷ್ಯದಿಂದ ಪಾಸಿಟಿವ್ ಕೇಸ್ ಹೆಚ್ಚಳ ಆಗ್ತಿದೆ. ಇದಕ್ಕೆ ಸರ್ಕಾರ ಕಾರಣ ಅಲ್ಲ. ಜನ ದಂಡ ಹಾಕ್ತಾರೆ ಬಿಡಿ ಅಂತ ಸುಮ್ಮನೆ ಆಗ್ತಾರೆ. ನಾವು ಆತ್ಮಾವಲೋಕ ಮಾಡಿಕೊಳ್ಳಬೇಕು ಎಂದರು.

ನನ್ನ ಕ್ಷೇತ್ರದಲ್ಲಿ ಸಂಪೂರ್ಣ ಪ್ರವಾಸ ಮಾಡಿ ಜಾಗೃತಿ, ಔಷಧಿ, ಮಾಸ್ಕ್, ದಿನಸಿ ನೀಡಿದ್ದೇವೆ. ಮಾಸ್ಕ್ ಕೊಟ್ಟ ಎರಡು ನಿಮಿಷ ಹಾಕ್ತಾರೆ ಅಮೇಲೆ ಬಿಸಾಕ್ತಾರೆ. ಪಿಯುಸಿ, ಎಸ್‍ಎಸ್‍ಎಸ್‍ಸಿ ಪರೀಕ್ಷಾ ಸಮಯದಲ್ಲಿ ಮಾಸ್ಕ್ ಕೊಟ್ವಿ. ಆದರೆ ಮಕ್ಕಳು ಸರಿಯಾಗಿ ಮಾಸ್ಕ್ ಹಾಕಿಲ್ಲ. ಬದುಕಿದ್ರೆ ಏನು ಬೇಕಾದ್ರು ಮಾಡಬಹುದು. ಎಲ್ಲರೂ ಮಾಸ್ಕ್ ಹಾಕಿ ಸರ್ಕಾರದ ನಿಯಮ ಫಾಲೋ ಮಾಡಿ ಎಂದು ಜನರಲ್ಲಿ ರೇಣುಕಾಚಾರ್ಯ ಮನವಿ ಮಾಡಿಕೊಂಡಿದ್ದಾರೆ.

ಅಧಿವೇಶನದಲ್ಲಿ ಪಾಲ್ಗೊಂಡಾಗ ನನಗೆ ಪಾಸಿಟೀವ್ ಬಂದಿದೆ ಅನ್ನಿಸುತ್ತಿದೆ. ನನ್ನ ಕ್ಷೇತ್ರದಲ್ಲಿ ಇದ್ದಾಗ ನನಗೆ ಕೊರೊನಾ ಬಂದಿರಲಿಲ್ಲ. ಕೊರೊನಾ ನನಗೆ ಪಾಠ ಕಲಿಸಿತು. ಸರಿಯಾಗಿ ಊಟ, ನಿದ್ರೆ ಮಾಡ್ತಿರಲಿಲ್ಲ. ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದೆ. ನಾನು ಮನೆಯವರಿಂದ ದೂರ ಇದ್ದೆ. ಸಂಪೂರ್ಣವಾಗಿ ಪ್ರತ್ಯೇಕವಾಗಿ ಇದ್ದೆ. ನನ್ನ ರೂಂ ನಾನೇ ಕ್ಲೀನ್ ಮಾಡಿಕೊಳ್ಳುತ್ತಿದ್ದೆ. ಬಟ್ಟೆ ನಾನೇ ತೊಳೆದುಕೊಳ್ಳುತ್ತಿದ್ದೆ. ತಟ್ಟೆ, ಲೋಟ ಇಟ್ಟುಕೊಂಡು ಜೀವನ ಮಾಡಿದ್ದೇನೆ. ಇನ್ನೂ ಆಯಾಸ ಇದೆ. ಆದರೂ ಜನರು ಜಾಗೃತವಾಗಿ ಇರಲಿ ಅಂತ ನಾನು ಸುದ್ದಿಗೋಷ್ಟಿ ಮಾಡ್ತಿದ್ದೇನೆ ಎಂದು ತಿಳಿಸಿದರು.

ಪಾಸಿಟಿವ್ ಬರದೇ ಇದ್ದರೂ ಪಾಸಿಟಿವ್ ಇದೆ ಎಂದು ಹೇಳಿ ಹಣ ಮಾಡ್ತಾರೆ ಅಂತ ಕೆಲವರು ಹೇಳ್ತಾರೆ. ಇದು ಅಪಪ್ರಚಾರ. ಯಾರು ಇದಕ್ಕೆ ಕಿವಿಗೊಡಬೇಡಿ. ಪ್ರತಿಯೊಬ್ಬರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ನನ್ನ ಹೆಂಡತಿ, ಸಹೋದರಿ, ಅತ್ತಿಗೆಗೆ ಬಂದಿದೆ. ಇದನ್ನ ಅವಮಾನ ಅಂತ ಯಾರೂ ಭಾವಿಸಬಾರದು. ಸ್ವಯಂ ಪ್ರೇರಿತರಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಜನರು ಕೊರೊನಾ ನಿಯನ ಪಾಲನೆ ಮಾಡಬೇಕು. ಎಲ್ಲರಿಗೂ ಕೈ ಮುಗಿದು ಕೇಳಿಕೊಳ್ತೀನಿ. ಮಾಸ್ಕ್, ಸಾಮಾಜಿಕ ಅಂತ ಕಾಯ್ದುಕೊಳ್ಳಿ. ನನಗೆ ಸಿಎಂ, ಡಿಸಿಎಂ, ಸಚಿವರು, ಶಾಸಕರು, ಮಠಾಧೀಶರು ಹಾಗೂ ಅಭಿಮಾನಿಗಳು ಸೇರಿದಂತೆ ಎಲ್ಲರೂ ಹಾರೈಸಿದ್ರು. ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ವೈದ್ಯರು ಇನ್ನೊಂದು ವಾರ ರೆಸ್ಟ್ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಇನ್ನೊಂದು ವಾರ ನಾನು ರೆಸ್ಟ್ ಮಾಡ್ತೀನಿ. ನಾನು ನಿಮ್ಮ ಸೇವಕ. ದಯವಿಟ್ಟು ಎಲ್ಲರೂ ಎಚ್ಚರಿಕೆಯಿಂದ ಇರಿ ಎಂದರು.

ಇದೇ ಸಂದರ್ಭದಲ್ಲಿ ಉಪ ಚುನಾವಣೆ ವೇಳೆ ಬಿಜೆಪಿ ಸಚಿವರು ಸೇರಿದಂತೆ ಎಲ್ಲರೂ ಗುಂಪು ಗುಂಪಾಗಿ ಇದ್ದ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ನಾವು ಎಲ್ಲರಿಗೂ ಮಾದರಿಯಾಗಿ ಇರಬೇಕು. ಚುನಾವಣೆ ಸಮಯದಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಕಿ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಚುನಾವಣೆ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಹೀಗಾಗಿ ಚುನಾವಣೆ ಮಾಡಬೇಕಾಗುತ್ತೆ. ಉಪ ಚುನಾವಣೆ ಕೆಲ ಕ್ಷೇತ್ರದಲ್ಲಿ ನಡೆಯುತ್ತೆ. ಆದ್ರೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜನ ಜಿದ್ದಿಗೆ ಬೀಳ್ತಾರೆ. ಹೀಗಾಗಿ ಗ್ರಾಮ ಪಂಚಾಯತ್ ಚುನಾವಣೆ ಬಗ್ಗೆ ಯೋಚನೆ ಮಾಡಲೇಬೇಕು. ಸರ್ಕಾರ, ವಿಪಕ್ಷದ ನಾಯಕರು ಈ ಬಗ್ಗೆ ನಿರ್ಧಾರ ಮಾಡಲಿ. ಈ ಬಗ್ಗೆ ನಾನು ಮಾತಾಡೋದು ಸರಿಯಲ್ಲ ಎಂದು ಎಚ್ಚರಿಸಿದರು.

Share This Article
Leave a Comment

Leave a Reply

Your email address will not be published. Required fields are marked *