ಶಾಲಾ-ಕಾಲೇಜುಗಳ ಅಭಿವೃದ್ಧಿಗೆ 850 ಕೋಟಿ ರೂ. ಅನುದಾನ; ಸಿಎಂಗೆ ಮಧು ಬಂಗಾರಪ್ಪ ಅಭಿನಂದನೆ

Public TV
1 Min Read

ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಮ್ಮ 15ನೇ ಬಜೆಟ್ (Budget) ಮಂಡಿಸಿದ್ದು, ಶಾಲಾ-ಕಾಲೇಜುಗಳ ಕೊಠಡಿ ನಿರ್ಮಾಣ, ದುರಸ್ತಿ, ಶೌಚಾಲಯ ನಿರ್ಮಾಣದಂತಹ ಕಾಮಗಾರಿಗಳಿಗೆ 850 ಕೋಟಿ ರೂ. ಅನುದಾನ ನೀಡಿರುವುದಕ್ಕೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪ (S Madhu Bangarappa) ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಈ ಬಾರಿ ಬಜೆಟ್‌ನಲ್ಲಿ ಶಿಕ್ಷಣ (Education) ಕ್ಷೇತ್ರಕ್ಕೆ 44,422 ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಶಾಲಾ-ಕಾಲೇಜುಗಳ ಕೊಠಡಿ ನಿರ್ಮಾಣ, ದುರಸ್ತಿ, ಶೌಚಾಲಯ ನಿರ್ಮಾಣದಂತಹ ಕಾಮಗಾರಿಗಳಿಗೆ 850 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಮತ್ತು ಅಗತ್ಯ ಮೂಲಸೌಕರ್ಯ ಒದಗಿಸಲು ಸಿ.ಎಸ್.ಆರ್. ಅನುದಾನದಡಿ, ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಆಯ್ದ ಶಾಲೆಗಳ ಉನ್ನತೀಕರಣ, 3 ರಿಂದ 5 ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ-ಗಣಕ ಕಾರ್ಯಕ್ರಮ, 10 ಕೋಟಿ ರೂ. ವೆಚ್ಚದಲ್ಲಿ ಮರು ಸಿಂಚನ ಕಾರ್ಯಕ್ರಮ, ಆಯ್ದ ಪ್ರೌಢ ಶಾಲೆಗಳಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ವಿಜ್ಞಾನ ಹಾಗೂ ಕಂಪ್ಯೂಟರ್ ಪ್ರಯೋಗಾಲಯ, ಇಂಟರ್‌ನೆಟ್ ಸೌಲಭ್ಯ ಒದಗಿಸಿರುವುದು ಖುಷಿ ತಂದಿದೆ ಎಂದಿದ್ದಾರೆ. ಇದನ್ನೂ ಓದಿ: ಬಜೆಟ್ ಮೊತ್ತ ನೋಡಿ ಬಿಜೆಪಿಗರಿಗೆ ಕುಳಿತುಕೊಳ್ಳಲು ಆಗದೆ ಕೈ ಹಿಸುಕಿಕೊಂಡಿದ್ದಾರೆ: ಡಿಕೆಶಿ

ಅಲ್ಲದೆ, ದ್ವಿಭಾಷಾ ಮಾಧ್ಯಮ ಶಾಲೆಗಳಾಗಿ 2,000 ಸರ್ಕಾರಿ ಪ್ರಾಥಮಿಕ ಶಾಲೆಗಳ ಪರಿವರ್ತನೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹೊಸ ಸರ್ಕಾರಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಾರಂಭ, ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ ಪದವಿ ಪೂರ್ವ ಕಾಲೇಜುಗಳನ್ನಾಗಿ ರಾಜ್ಯದ 74 ಆದರ್ಶ ವಿದ್ಯಾಲಯಗಳ ಉನ್ನತೀಕರಣ ಮಾಡಿರುವುದು ಶಿಕ್ಷಣ ಇಲಾಖೆಗೆ ಹೆಚ್ಚಿನ ಬಲ ನೀಡಲಿದೆ. ಈ ಬಾರಿಯ ಬಜೆಟ್ ಉತ್ತಮವಾಗಿದೆ ಎಂದು ಮಧು ಬಂಗಾರಪ್ಪ ಅಭಿನಂದನೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ಕ್ಯಾನ್ಸರ್ ರೋಗಿಗಳಿಗೆ ಸಿಹಿ ಸುದ್ದಿ – ಜಿಲ್ಲೆಗೊಂದು ಡೇ ಕೇರ್ ಕಿಮೋಥೆರಪಿ ಕೇಂದ್ರ

Share This Article