– ಮಧ್ಯಪ್ರದೇಶದಲ್ಲಿ 3 ಸಾವಿರ ಮನೆಗಳಿಗೆ ನುಗ್ಗಿದ ನೀರು
ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ (Himachal Pradesh) ಕಳೆದ 17 ದಿನಗಳಲ್ಲಿ 19 ಬಾರಿ ಮೇಘಸ್ಫೋಟ ಸಂಭವಿಸಿದ್ದು, ಒಟ್ಟು 82 ಮಂದಿ ಸಾವನ್ನಪ್ಪಿದ್ದಾರೆ.
ಜೂನ್ 20 ರಿಂದ ಜುಲೈ 6 ರವರೆಗೆ ಹಿಮಾಚಲ ಪ್ರದೇಶದಲ್ಲಿ 19 ಮೇಘಸ್ಫೋಟಗಳು, 23 ಪ್ರವಾಹ ಅವಘಡಗಳು, 19 ಭೂಕುಸಿತಗಳು ಸಂಭವಿಸಿವೆ. ಒಟ್ಟು 269 ರಸ್ತೆಗಳ ಸಂಪರ್ಕ ಕಡಿತಗೊಂಡಿವೆ. ಇದನ್ನೂ ಓದಿ: ಬಿಹಾರ ಮತದಾರರ ಪಟ್ಟಿ ನವೀಕರಣ: ಜುಲೈ 10 ರಂದು ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ
ದೇಶದ ಹಲವೆಡೆ ಮುಂಗಾರು ಅಬ್ಬರ ಜೋರಾಗಿದೆ. ಪರಿಣಾಮವಾಗಿ ನಾನಾ ಅವಾಂತರಗಳು ಸೃಷ್ಟಿಯಾಗಿವೆ. ಮಧ್ಯಪ್ರದೇಶದ ಶಹದೋಲ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 4 ಇಂಚು ಮಳೆಯಾಗಿದೆ. ರಾತ್ರಿಯಿಡೀ 3,000 ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡವು. ಆಸ್ಪತ್ರೆಗೆ ನೀರು ನುಗ್ಗಿದ ನಂತರ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಯಿತು. ಹಳಿಗಳು ಮುಳುಗಿದ್ದರಿಂದ ನಾಲ್ಕು ಗಂಟೆಗಳ ಕಾಲ ರೈಲು ಸೇವೆಗಳು ಸ್ಥಗಿತಗೊಂಡವು.
ಉತ್ತರಾಖಂಡದಲ್ಲಿ ಭಾರೀ ಮಳೆ ಮುಂದುವರೆದಿದೆ. ಉತ್ತರಕಾಶಿಯ ಯಮುನೋತ್ರಿ ಹೆದ್ದಾರಿಯಲ್ಲಿ ಓಜ್ರಿ ಬಳಿ ಸೇತುವೆ ಕುಸಿದು ಹತ್ತಿರದ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಶ್ರೀನಗರದಲ್ಲಿ ತೀವ್ರ ಮಳೆಯಿಂದ ಭೂಕುಸಿತ ಉಂಟಾಗಿದ್ದು, ಬದರಿನಾಥ್ ಹೆದ್ದಾರಿ ಬಂದ್ ಆಗಿದೆ. ಇದನ್ನೂ ಓದಿ: ನಾನು ಪಾಕಿಸ್ತಾನಿ ಸೇನೆಯ ವಿಶ್ವಾಸಾರ್ಹ ಏಜೆಂಟ್ – ಮುಂಬೈ ದಾಳಿಯ ಸಂಚುಕೋರ ರಾಣಾ ತಪ್ಪೊಪ್ಪಿಗೆ
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸರಯು ನದಿಯು 91.35 ಮೀಟರ್ ತಲುಪಿದೆ. ಎಚ್ಚರಿಕೆ ಮಟ್ಟಕ್ಕಿಂತ ಕೇವಲ 20 ಸೆಂ.ಮೀ. ಕೆಳಗಿದೆ. ಕಳೆದ 24 ಗಂಟೆಗಳಲ್ಲಿ 24 ಸೆಂ.ಮೀ. ಏರಿಕೆ ದಾಖಲಾಗಿದೆ. ಕಾನ್ಪುರದಲ್ಲಿ ಗಂಗಾ ನದಿಯ ತಗ್ಗು ಪ್ರದೇಶಗಳು ಪ್ರವಾಹದ ಅಪಾಯದಲ್ಲಿವೆ.