– ಹಿರಿಯ ಸನ್ಯಾಸಿಯಿಂದ ಮಗು ಹುಟ್ಟಿದೆ ಅಂತ ಹೇಳಿದ ಮಹಿಳೆ
ಬ್ಯಾಂಕಾಕ್: ಲೈಂಗಿಕ ಸಂಪರ್ಕ ಸಾಧಿಸುವ ಮೂಲಕ ಬೌದ್ಧ ಬುಕ್ಕುಗಳಿಗೆ (Buddhist Monks) ಹನಿಟ್ರ್ಯಾಪ್ ಮಾಡಿ, ಅವರಿಂದ ಮಹಿಳೆಯೊಬ್ಬಳು ದೇಗುಲಗಳಿಗೆ ಸೇರಿದ ಸುಮಾರು 100 ಕೋಟಿ ರೂ. ಹಣ ಪೀಕಿರುವ ಘಟನೆ ಉತ್ತರ ಬ್ಯಾಂಕಾಕ್‌ನಲ್ಲಿ (North Bangkok) ನಡೆದಿದೆ.
ಈ ಹಿನ್ನೆಲೆ ವಿಲಾವನ್ ಎಮ್ಹಾವತ್ (30) ಎಂಬಾಕೆಯನ್ನು ಬಂಧಿಸಲಾಗಿದೆ. ಅಲ್ಲದೇ ಈ ಪ್ರಕರಣದಲ್ಲಿ ಬೌದ್ಧ ಸನ್ಯಾಸಿಗಳು ತಮ್ಮ ಬ್ರಹ್ಮಚರ್ಯ ಪ್ರತಿಜ್ಞೆ ಮುರಿದಿರೋದು ಗಮನ ಸೆಳೆದಿದೆ. ಇದು ಬೆಳಕಿಗೆ ಬಂದ ನಂತರ ಹಗರಣದಲ್ಲಿ ಸಿಲುಕಿದ್ದ ಕನಿಷ್ಠ 9 ಹಿರಿಯ ಸನ್ಯಾಸಿಗಳನ್ನ ಸನ್ಯಾಸಿತ್ವದಿಂದ ಹೊರಹಾಕಲಾಗಿದೆ ಎಂದು ರಾಯಲ್ ಥಾಯ್ ಪೊಲೀಸ್ (Thailand Police) ಕೇಂದ್ರ ತನಿಖಾ ಬ್ಯೂರೋ ತಿಳಿಸಿದೆ.
ʻಹನಿʼ ಲೇಡಿ ಯಾರು?
30ರ ಹರೆಯದ ವಿಲಾವನ್ ಎಮ್ಸಾವತ್ (Wilawan Emsawat) ಎಂಬಾಕೆಯನ್ನ ಉತ್ತರ ಬ್ಯಾಂಕಾಕ್‌ನಲ್ಲಿರುವ ನೋಂಥಬುರಿಯಲ್ಲಿ ಬಂಧಿಸಲಾಗಿದೆ. ʻಮಿಸ್ಡ್ ಗಾಲ್ಫ್ʼ ಫೇಮಸ್ ಆಗಿದ್ದ ವಿಲಾವತ್ 9 ಸನ್ಯಾಸಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಳು. ಆಕೆಯ ಫೋನ್ ಪರಿಶೀಲನೆ ನಡೆಸಿದ ಬಳಿಕ ಬೌದ್ಧ ಬಿಕ್ಕುಗಳೊಂದಿಗೆ ಸಂಪರ್ಕ ಹೊಂದಿದ್ದ ವಿಡಿಯೋಗಳು ಲಭ್ಯವಾಗಿದೆ. ಅವರಿಂದ ಬ್ಲ್ಯಾಕ್ ಮೇಲ್ ಮಾಡಿ ಪಡೆದ ಹಣವನ್ನ ಗ್ಯಾಮ್ಲಿಂಗ್‌ಗೆ ಬಳಸಿದ್ದಾಳೆ ಎಂಬುದೂ ತಿಳಿದುಬಂದಿದೆ.
ಲೈಂಗಿಕ ಸಂಪರ್ಕ ಸಾಧಿಸಿ ಬ್ಲ್ಯಾಕ್‌ಮೇಲ್
ಮೊದಲು ಹಿರಿಯ ಬೌದ್ಧಬಿಕ್ಕುಗಳನ್ನು ತನ್ನ ಬಲೆಗೆ ಬೀಳಿಸಿಕೊಳ್ತಿದ್ದ ವಿಲಾವನ್ ಲೈಂಗಿಕ ಸಂಪರ್ಕ ಸಾಧಿಸುತ್ತಿದ್ದಳು. ನಂತರ ವಿಷಯ ಬಹಿರಂಗಗೊಳಿಸುವುದಾಗಿ ಬ್ಲ್ಯಾಕ್‌ಮೇಲ್ (Blackmail) ಮಾಡಿ ಹಣಕ್ಕೆ ಬೇಡಿಕೆಯಿತ್ತಿದ್ದಳು. ಬೆದರಿಕೆಗೆ ಅಂಜಿ ಬಿಕ್ಕುಗಳು ದೇಗುಲಗಳ ಬ್ಯಾಂಕ್ ಖಾತೆಯಿಂದ ಕೋಟ್ಯಂತರ ರೂಪಾಯಿ ಹಣವನ್ನು ಈಕೆಯ ಖಾತೆಗೆ ವರ್ಗಾಯಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
80,000 ನಗ್ನ ಫೋಟೋ, 102 ಕೋಟಿ ಸುಲಿಗೆ
ಮೂಲಗಳ ಪ್ರಕಾರ, ವಿಲಾವನ್ ಕಳೆದ ಮೂರು ವರ್ಷಗಳಲ್ಲಿ ಸುಮಾರು 385 ಮಿಲಿಯನ್ ಬಹ್ತ್ ಅಂದ್ರೆ 102 ಕೋಟಿ ರೂ.ಗಳಷ್ಟು ಸುಲಿಗೆ ಮಾಡಿದ್ದಾಳೆ. ಈ ಹಣವನ್ನ ಆನ್‌ಲೈನ್ ಜೂಜಿನಲ್ಲಿ ಕಳೆದುಕೊಂಡಿದ್ದಾಳೆ ಎಂಬ ಮಾಹಿತಿಯೂ ಸಿಕ್ಕಿದೆ. ಜೊತೆಗೆ ಆಕೆಯ ಫೋನ್‌ನಲ್ಲಿ ಸನ್ಯಾಸಿಗಳೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ 80,000ಕ್ಕೂ ಅಧಿಕ ಫೋಟೋಗಳು ಮತ್ತು ವಿಡಿಯೋಗಳನ್ನ ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗು ಕೊಟ್ಟ ಸನ್ಯಾಸಿ
ಮತ್ತೊಂದು ವರದಿಯ ಪ್ರಕಾರ, ವಿಲಾವನ್ ಎಮ್ಸಾವತ್ ಲೈಂಗಿಕ ಕ್ರಿಯೆ ನಡೆಸಿದ ಸನ್ಯಾಸಿಗಳಲ್ಲಿ ಒಬ್ಬರಿಂದ ತನಗೆ ಮಗು ಜನಿಸಿದೆ ಎಂಬುದಾಗಿಯೂ ಹೇಳಿಕೊಂಡಿದ್ದಾಳೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಕಳೆದ ಜೂನ್ ತಿಂಗಳ ಮಧ್ಯದಲ್ಲಿ ಹಿರಿಯ ಸನ್ಯಾಸಿಯೊಬ್ಬರು ಮಹಿಳೆಯಿಂದ ಬ್ಲ್ಯಾಕ್ ಮೇಲ್‌ಗೆ ಒಳಗಾಗಿ ಇದ್ದಕ್ಕಿದ್ದಂತೆ ಸನ್ಯಾಸತ್ವ ತೊರೆದಿದ್ದರು. ಇದಾದ ಕೆಲವೇ ದಿನಗಳಲ್ಲಿ ಅವರು ನಾಪತ್ತೆಯಾಗಿದ್ದರು. ಈ ಬೆಳವಣಿಗೆ ನಂತರ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಥೈಲ್ಯಾಂಡ್‌ನಲ್ಲಿ ಶೇ.90ಕ್ಕಿಂತ ಹೆಚ್ಚು ಬೌದ್ಧ ಸಮುದಾಯದ ಜನರಿದ್ದಾರೆ. ಸುಮಾರು 2,00,000 ಸನ್ಯಾಸಿಗಳಿದ್ದು, 85 ಸಾವಿರ ಬೌದ್ಧ ಬಿಕ್ಕುಗಳ ಶಿಷ್ಯರಿದ್ದಾರೆ. ಸದ್ಯ ಸನ್ಯಾಸಿಗಳನ್ನೇ ಗುರಿಯಾಗಿಸಿದ್ದ ಈ ಪ್ರಕರಣ ಬೌದ್ಧ ಸಮುದಾಯದವನ್ನ ಬೆಚ್ಚಿ ಬೀಳಿಸಿದೆ.