80 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದ ರೈತರಿಗೆ ಕಣ್ಣೀರು ತರಿಸಿದ ಈರುಳ್ಳಿ

Public TV
2 Min Read

ತುಮಕೂರು: ಈ ಬಾರಿ ರಾಜ್ಯ ದಲ್ಲಿ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಕಳೆದ ಎರಡ್ಮೂರು ದಿನಗಳಿಂದ ವರುಣನ ಆರ್ಭಟ ಜೋರಾಗಿದೆ. ಶಿರಾ ತಾಲೂಕಿನಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಒಳ್ಳೆಯ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಬಾರಿ ಈರುಳ್ಳಿ ಕಣ್ಣೀರು ತರಿಸಿದೆ.

ಬರಪೀಡಿತ ತಾಲೂಕುಗಳಲ್ಲಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ರೈತರು ಕೃಷಿ ನಂಬಿ ಜೀವನ ಮಾಡುವವರ ಸಂಖ್ಯೆ ತುಂಬಾ ವಿರಳ. ಸಿಗುವ ಅಲ್ಪ-ಸ್ವಲ್ಪ ಅಂತರ್ಜಲ ನೀರು ಬಳಸಿಕೊಂಡು ಸಮೃದ್ಧ ಬೆಳೆ ತೆಗೆದ ರೈತರ ಸಂಖ್ಯೆ ಅಗಾಧವಾಗಿದೆ. ಕಡ್ಲೆಕಾಯಿ, ಕಲ್ಲಂಗಡಿ ಬೆಳೆದ ರೈತರು ಕೈ ತುಂಬಾ ಹಣವನ್ನು ಗಳಿಸಿದ್ದಾರೆ. ಅದೇ ರೀತಿ ಶಿರಾ ತಾಲ್ಲೂಕಿನ ಹುಲಿಕುಂಟೆ ಹೋಬಳಿಯ ಕರೆಕಲ್ಲು ಹಟ್ಟಿ, ಕ್ಯಾಸಮುದ್ರ, ಮುಸುದಲೋಟಿ, ಎಂಜಲಗೆರೆಯ ರೈತರು ಈರುಳ್ಳಿ ಬೆಳೆದಿದ್ದರು. ನಾಲ್ಕು ತಿಂಗಳ ನಿರಂತರ ಪರಿಶ್ರಮದಿಂದ ಈರುಳ್ಳಿ ಬೆಳೆ ಕೈಗೆ ಬಂದಿತ್ತು. ಇನು ಹದಿನೈದು ದಿನ ಕಳೆದಿದ್ದರೆ ರೈತರು ಜೇಬು ತುಂಬ ಹಣ ಎಣಿಸುತ್ತಿದ್ದರು. ಆದರೆ ಜಿಟಿಜಿಟಿ ಮಳೆ ಪರಿಣಾಮ ಎಲ್ಲಾ ಈರುಳ್ಳಿ ಬೆಳೆ ನೀರಿನಲ್ಲಿ ಕೊಳೆತು ಹೋಗಿದೆ.

ಐದು ಹಳ್ಳಿಯ ಸುಮಾರು 30ಕ್ಕೂ ಹೆಚ್ಚು ರೈತರು ಸುಮಾರು 80 ರಿಂದ 100 ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದರು. ಅಂದಾಜು ಎಕರೆಗೆ 30 ರಿಂದ 40 ಸಾವಿರ ಖರ್ಚು ಮಾಡಿ ಈರುಳ್ಳಿ ಬೆಳೆ ಬೆಳೆಯಲಾಗಿತ್ತು. ಸರಿಸುಮಾರು 80 ಲಕ್ಷ ಆದಾಯದವನ್ನು ಈರುಳ್ಳಿ ಬೆಳೆಯಿಂದ ನಿರೀಕ್ಷೆ ಮಾಡಲಾಗಿತ್ತು. ಆದರೆ ಇದೀಗ ನಿರಂತರ ಮಳೆಯಿಂದ ಎಲ್ಲಾ ಬೆಳೆ ಕೊಳೆತು ಹೋಗಿದೆ. ಧಾರಾಕಾರ ಮಳೆ ಅಲ್ಲದಿದ್ದರೂ ಕಳೆದ ವಾರದಿಂದ ಜಿಟಿಜಿಟಿ ಮಳೆ ನಿರಂತರವಾಗಿ ಸುರಿದಿದೆ. ಪರಿಣಾಮ ಕೊಯ್ಲಿಗೆ ಬಂದಿದ್ದ ಈರುಳ್ಳಿ ಕೊಳೆತು ಹೋಗಿದೆ. ಜಿಟಿಜಿಟಿ ಮಳೆ ರೈತರ ಕಣ್ಣಲ್ಲಿ ನೀರು ತರಿಸಿದೆ.

ಇನ್ನೊಂದೆಡೆ ಶಿರಾದಲ್ಲಿ ಉಪಚುನಾವಣೆಯ ಕಾವು ಜೋರಾಗಿದೆ. ಮಂತ್ರಿಗಳು, ಸಚಿವರು ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಈರುಳ್ಳಿ ಬೆಳೆದ ಈ ರೈತರಿಗೆ ಯಾವ ಅಧಿಕಾರಿಯೂ, ರಾಜಕೀಯ ಮುಖಂಡರು ಸಹಾಯ ಹಸ್ತ ಚಾಚಿಲ್ಲ. ನಾಮಕಾವಸ್ಥೆಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸುವ ಬಗ್ಗೆ ಮಾತನಾಡಿದ್ದಾರೆ. ಆದರೆ ರೈತರಿಗೆ ಈವರೆಗೂ ಯಾವುದೇ ಖಚಿತ ಭರವಸೆ ಸಿಕ್ಕಿಲ್ಲ, ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಸ್ಪಂದಿಸಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *