– ಥಾಯ್ಲೆಂಡ್‍ನ 8 ವರ್ಷದ ಬಾಲಕನ ಹೃದಯ ವಿದ್ರಾವಕ ಕತೆ
ಬ್ಯಾಂಕಾಕ್: ಥಾಯ್ಲೆಂಡ್‍ನಲ್ಲಿ (Thailand) ಮನುಷ್ಯ ಪ್ರಪಂಚದ ಅರಿವೇ ಇಲ್ಲದೇ, ನಾಯಿಗಳ (Dog) ಜೊತೆಯೇ ಬೆಳೆದು ಮಾತನಾಡಲು ಬಾರದೇ ಸಂವಹನಕ್ಕಾಗಿ ನಾಯಿಯಂತೆಯೇ ಬೊಗಳುತ್ತಿದ್ದ ಬಾಲಕನೊಬ್ಬನನ್ನು (Boy) ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಬಾಲಕನ ತಾಯಿ (Mother ) ಹಾಗೂ ಆತನ ಸಹೋದರ ಡ್ರಗ್ಸ್ ಚಟಕ್ಕೆ ಬಿದ್ದಿದ್ದರು. ಇದರಿಂದ ಬಾಲಕನನ್ನು ನಿರ್ಲಕ್ಷಿಸಿ, ಸಮಾಜದಲ್ಲಿ ಬೆರೆಯಲು ಬಿಡದೇ, ಮನೆಯಲ್ಲಿದ್ದ 6 ನಾಯಿಗಳ ಜೊತೆ ಬಿಟ್ಟಿದ್ದರು. ಇದರ ಪರಿಣಾಮ ಬಾಲಕ ಮಾತನಾಡಲು ಕಲಿತಿಲ್ಲ. ಆತ ನಾಯಿಯಂತೆಯೇ ಬೊಗಳಿ ಸಂವಹನ ನಡೆಸುತ್ತಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಶಾಲಾ ವಾಹನ ಏರಲು ರಸ್ತೆಗೆ ಓಡಿದ ಬಾಲಕನಿಗೆ ಬಿಎಂಟಿಸಿ ಬಸ್ ಡಿಕ್ಕಿ – ವಿದ್ಯಾರ್ಥಿ ಸ್ಥಿತಿ ಗಂಭೀರ
ಶಾಲೆಯ ಪ್ರಾಂಶುಪಾಲರು ಮತ್ತು ಸ್ಥಳೀಯ ಕಾರ್ಯಕರ್ತರು ಬಾಲಕನ ಸ್ಥಿತಿಯ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಅಧಿಕಾರಿಗಳು, ಜೂ.30 ರಂದು ಥಾಯ್ಲೆಂಡ್‍ನ ಉತ್ತರಾದಿತ್ ಪ್ರಾಂತ್ಯದ ಲ್ಯಾಪ್ಲೇ ಜಿಲ್ಲೆಯಲ್ಲಿ ಬಾಲಕನನ್ನು ರಕ್ಷಿಸಿದ್ದಾರೆ. ರಕ್ಷಣೆ ವೇಳೆ, ಆತ ಮಾತನಾಡದೇ ನಾಯಿಯಂತೆಯೇ ಬೊಗಳುತ್ತಿದ್ದ ಎಂದು ಪವಿನಾ ಹಾಂಗ್‌ಸಕುಲ್ ಫೌಂಡೇಶನ್ ಫಾರ್ ಚಿಲ್ಡ್ರನ್ & ವುಮೆನ್‌ನ ಅಧ್ಯಕ್ಷೆ ಪವಿನಾ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯರು, ಬಾಲಕನ ತಾಯಿ ಆರು ನಾಯಿಗಳ ಜೊತೆ ಅವನನ್ನು ಬಿಟ್ಟು, ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದಳು. ತಾಯಿಯ ವರ್ತನೆಯಿಂದ ಬೇಸತ್ತ ನೆರೆಹೊರೆಯವರು ತಮ್ಮ ಮಕ್ಕಳು ಅವನೊಂದಿಗೆ ಆಟವಾಡುವುದನ್ನು ತಡೆದರು. ಇದರಿಂದ ಆತ ಸಾಮಾಜಿಕವಾಗಿ ಬೆರೆಯಲಿಲ್ಲ ಮತ್ತು ಮಾತನಾಡಲು ಕಲಿಯಲಿಲ್ಲ. ನಾಯಿಗಳ ಜೊತೆಗೆ ಇದ್ದು ಅವುಗಳಂತೆ ವರ್ತಿಸಲು ಶುರುಮಾಡಿದ್ದ ಎಂದು ತಿಳಿಸಿದ್ದಾರೆ.
ಬಾಲಕನಿಗೆ ಅಧಿಕಾರಿಗಳು ʻಬಾಯ್ ಎʼ ಎಂದು ಹೆಸರಿಟ್ಟಿದ್ದಾರೆ. ಅವನ ತಾಯಿ ಮತ್ತು ಅವನ 23 ವರ್ಷದ ಸಹೋದರ ಇಬ್ಬರೂ ಮಾದಕ ದ್ರವ್ಯ ಸೇವನೆ ಮಾಡುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇನ್ನೂ ಬಾಲಕನ ತಾಯಿ ಅವನ ಶಿಕ್ಷಣಕ್ಕಾಗಿ ಸರ್ಕಾರದಿಂದ 400 ಬಹ್ತ್ ನೆರವು ಪಡೆದಿದ್ದಳು. ಆದರೆ ಅವನನ್ನು ಶಾಲೆಗೆ ಸೇರಿಸಿರಲಿಲ್ಲ. ಒಂದು ದಿನ ಮಾತ್ರ ಶಾಲೆಗೆ ಹೋಗಿದ್ದ, ಆದರೆ ಮತ್ತೆ ಎಂದೂ ಶಾಲೆ ಕಡೆ ಮುಖಮಾಡಿರಲಿಲ್ಲ ಎಂದು ವರದಿಯಾಗಿದೆ.
ಬಾಲಕನನ್ನು ಮಕ್ಕಳ ಆಶ್ರಯ ಶಿಬಿರದಲ್ಲಿ ನೋಡಿಕೊಳ್ಳಲಾಗುತ್ತಿದೆ. ಆತನಿಗೆ ಉತ್ತಮ ಜೀವನ ನಡೆಸಲು ಅವಕಾಶ ನಿರ್ಮಾಣ ಮಾಡಿಕೊಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸ್ಲೋ ಪಾಯ್ಸನ್ ನೀಡಿ ಪತಿಯ ಹತ್ಯೆ ಆರೋಪ – ವಿಡಿಯೋ ಸಾಕ್ಷಿ ಇದ್ರೂ ಪತ್ನಿಯನ್ನು ಬಂಧಿಸದ ಪೊಲೀಸರು