ಮುಂಬೈ | 232 ಕೆಜಿ ಮಾದಕ ವಸ್ತು ಕಳ್ಳಸಾಗಾಣಿಕೆ ಕೇಸ್‌ – 8 ಪಾಕ್‌ ಪ್ರಜೆಗಳಿಗೆ 20 ವರ್ಷ ಜೈಲು

Public TV
1 Min Read

ಮುಂಬೈ: ಗುಜರಾತ್‌ ಕರಾವಳಿಯಲ್ಲಿ 7 ಕೋಟಿ ರೂ. ಮೌಲ್ಯದ 232 ಕೆಜಿ ತೂಕದ ಮಾದಕ ವಸ್ತು ಸಾಗಾಣಿಕೆ ವೇಳೆ ಸಿಕ್ಕಿಬಿದ್ದಿದ್ದ 8 ಪಾಕಿಸ್ತಾನಿ (Pakistan) ಪ್ರಜೆಗಳಿಗೆ ಮುಂಬೈನ ವಿಶೇಷ ನ್ಯಾಯಾಲಯ (Mumbai Court) ಬುಧವಾರ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೇ ನ್ಯಾಯಾಲಯವು ಅಪರಾಧಿಗಳಿಗೆ ತಲಾ 2 ಲಕ್ಷ ರೂ. ದಂಡ ವಿಧಿಸಿದೆ.

ಮಾದಕ ವಸ್ತು ವಿರೋಧಿ ಕಾನೂನಿನಡಿಯಲ್ಲಿ 8 ವ್ಯಕ್ತಿಗಳನ್ನು ದೋಷಿ ಎಂದು ಎನ್‌ಡಿಪಿಎಸ್ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಧೀಶ ಶಶಿಕಾಂತ್ ಬಂಗಾರ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.

2015ರಲ್ಲಿ ಗುಜರಾತ್ ಕರಾವಳಿಯಲ್ಲಿ 6.96 ಕೋಟಿ ರೂ. ಮೌಲ್ಯದ 232 ಕೆ.ಜಿ ಹೆರಾಯಿನ್ ಸಾಗಿಸುತ್ತಿದ್ದ ಬೋಟ್‌ನಿಂದ ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ 8 ಮಂದಿಯನ್ನು ಬಂಧಿಸಿದ್ದರು. ಅಲ್ಲದೇ ದೋಣಿಯಲ್ಲಿದ್ದ 11 ಬ್ಯಾರಲ್‌ಗಳು, 20 ಪ್ಲಾಸ್ಟಿಕ್ ಪೌಚ್‌ಗಳಲ್ಲಿದ್ದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿತ್ತು. ಪರೀಕ್ಷೆ ವೇಳೆ ಹೆರಾಯಿನ್ ಎಂದು ತಿಳಿದು ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪರಾಧಿಗಳು ಮೂರು ಸ್ಯಾಟ್‌ಲೈಟ್ ಫೋನ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳ ಜೊತೆಗೆ ಜಿಪಿಎಸ್ ನ್ಯಾವಿಗೇಷನ್ ಚಾರ್ಟ್‌ಗಳನ್ನು ಹೊಂದಿದ್ದರು. ಅವರನ್ನು ಬಂಧಿಸಿದ ಬಳಿಕ ದಕ್ಷಿಣ ಮುಂಬೈನ ಯೆಲ್ಲೋ ಗೇಟ್ ಪೊಲೀಸರಿಗೆ ಹಸ್ತಾಂತರಿಸಲಾಗಿತ್ತು.

Share This Article