– ಇದೇ ವರ್ಷದಿಂದ ಡ್ಯಾಂ ಗೇಟ್ ಅಳವಡಿಕೆಗೆ ಚಿಂತನೆ
ಕೊಪ್ಪಳ: ಕಳೆದ ವರ್ಷ ಕಿತ್ತು ಹೋಗಿದ್ದ ತುಂಗಭದ್ರಾ ಜಲಾಶಯದ (Tungabhadra Dam) 19ನೇ ಗೇಟ್ ಸೇರಿ ಒಟ್ಟು 8 ಕ್ರಸ್ಟ್ ಗೇಟ್ (Crest Gate) ನಿಷ್ಕ್ರಿಯಗೊಂಡಿದ್ದು, ಮೇಲೆ ಎತ್ತಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಸಂಗ್ರಹ ಸಾಮರ್ಥ್ಯವನ್ನು ಕೇವಲ 80 ಟಿಎಂಸಿಗೆ ಇಳಿಕೆ ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಹೇಳಿದರು.
ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ತುಂಗಭದ್ರಾ ಜಲಾಶಯದ 11, 18, 20, 24, 27 ಮತ್ತು 28 ಕ್ರಸ್ಟ್ ಗೇಟ್ ಸಂಪೂರ್ಣವಾಗಿ ಜಾಮ್ ಆಗಿದ್ದು, ಮೇಲಕ್ಕೆ ಎತ್ತಲು ಆಗುತ್ತಿಲ್ಲ. ಈ ಎಲ್ಲಾ ಗೇಟ್‌ಗಳು ಅಲ್ಲಿ ಬೆಂಡ್ ಆಗಿದ್ದರಿಂದ ಚೈನ್ ಮೂಲಕ ಗೇಟ್ ಮೇಲೆ ಎತ್ತಲು ಸಾಧ್ಯವಾಗುತ್ತಿಲ್ಲ. ಜೊತೆಗೆ 4ನೇ ಕ್ರಸ್ಟ್ ಗೇಟ್ ಕೇವಲ 2 ಫೀಟ್ ಮಾತ್ರ ಮೇಲೆ ಎತ್ತಲು ಸಾಧ್ಯವಾಗುತ್ತಿದೆ. ಇದರಿಂದ ಜಲಾಶಯದ ಒಟ್ಟು 8 ಕ್ರಸ್ಟ್ ಗೇಟ್ ಗೆ ಚಲನೆ ಇಲ್ಲದಂತಾಗಿದೆ. ಈ ಕಾರಣಕ್ಕೆ ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಸಂಗ್ರಹ ಸಾಮರ್ಥ್ಯವನ್ನು ಕೇವಲ 80 ಟಿಎಂಸಿಗೆ ಇಳಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಲಾಶಯ ಒಟ್ಟು 105 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಡ್ಯಾಂ ಭರ್ತಿ ಮಾಡಿದರೆ ಮುಂದೆ ಸಾಕಷ್ಟು ಸವಾಲು ಎದುರಾಗುವ ಸಾಧ್ಯತೆ ಇದೆ. ಒಂದೊಮ್ಮೆ ಏಕಾಏಕಿ 1.50 ಲಕ್ಷ ಕ್ಯೂಸೆಕ್ ಒಳಹರಿವು ಹರಿದು ಬಂದರೆ, ಅದೇ ಪ್ರಮಾಣದ ನೀರನ್ನು ಎಲ್ಲ ಗೇಟ್ ಎತ್ತರಿಸುವ ಮೂಲಕ ನದಿಗೆ ಬಿಡ ಬೇಕಾಗುತ್ತದೆ. ಆದರೆ, ಸುಮಾರು 8 ಕ್ರಸ್ಟ್ ಗೇಟ್ ಗಳು ಸದ್ಯಕ್ಕೆ ಎತ್ತಲು ಸಾಧ್ಯವಿಲ್ಲದ ಸ್ಥಿತಿ ತಲುಪಿವೆ. ಹೀಗಾದಾಗ ಡ್ಯಾಂ ಭರ್ತಿ ಮಾಡುವುದು ಸರಿಯಲ್ಲ ಎಂಬ ತಜ್ಞರ ಸಲಹೆಯಂತೆ ಸಂಗ್ರಹ ಸಾಮರ್ಥ್ಯ ಕೇವಲ 80 ಟಿಎಂಸಿಗೆ ಇಳಿಕೆ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬನ್ನೇರುಘಟ್ಟ ಸಫಾರಿ ವೇಳೆ ಬೊಲೆರೋ ಹಿಂಬಾಲಿಸಿ ಬಾಲಕನ ಮೇಲೆ ಚಿರತೆ ದಾಳಿ
ಮೊದಲಿಗೆ ಎಲ್ಲಾ 33 ಕ್ರಸ್ಟ್ ಗೇಟ್ ನಿರ್ಮಾಣಕ್ಕೆ ಒಂದೇ ಟೆಂಡರ್ ಕರೆಯಲಾಗಿತ್ತು. ಆದರೆ ಯಾವುದೇ ಕಂಪನಿ ಟೆಂಡರ್‌ನಲ್ಲಿ ಭಾಗವಹಿಸಲಿಲ್ಲ. ಇದೀಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಎಲ್ಲ ಗೇಟ್ ಅಳವಡಿಕೆಗೆ ಕನಿಷ್ಠ 8 ತಿಂಗಳು ಸಮಯವನ್ನು ಕಂಪನಿ ಕೇಳಿದೆ. ರೈತರೊಂದಿಗೆ ಚರ್ಚೆ ಮಾಡಿ, ಈ ಬಾರಿ ಒಂದು ಬೆಳೆಯ ನಂತರ ಎಲ್ಲ ನೀರು ಹೊರಗೆ ಬಿಟ್ಟು ಗೇಟ್ ಅಳವಡಿಕೆ ಕೆಲಸ ಶುರು ಮಾಡಬೇಕು ಎಂಬ ಚಿಂತನೆ ಇದೆ. ಈ ಬಗ್ಗೆ ರೈತರೊಂದಿಗೆ ಚರ್ಚೆ ಮಾಡಿ ಕ್ರಮ ವಹಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಯೂರಿಯಾ ಕೊರತೆ ಸಂಪೂರ್ಣವಾಗಿ ನೀಗಿಸಲಾಗಿದೆ. ಸದ್ಯ ಯೂರಿಯಾ ಎಲ್ಲರಿಗೂ ಸಿಗುವಂತೆ ಮಾಡಿದ್ದೇವೆ. ಜೊತೆಗೆ ಸುಮಾರು 2,365 ಟನ್ ದಾಸ್ತಾನು ಉಳಿಸಿಕೊಂಡಿದ್ದೇವೆ. ಜಿಲ್ಲೆಯಲ್ಲಿ ಯಾವುದೇ ತೊಂದರೆ ಆಗದಂತೆ ಯೂರಿಯಾ ಪೂರೈಕೆ ಮಾಡುತ್ತಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಕೊಪ್ಪಳದಲ್ಲಿ ಕೊಲೆಯಾದ ಗವಿಸಿದ್ಧಪ್ಪ ನಾಯಕ ಕೊಲೆ ಪ್ರಕರಣದಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ಕೊಪ್ಪಳ ಪೊಲೀಸರು ಎಲ್ಲ ಆರೋಪಿ ಗಳನ್ನು ಬಂಧಿಸಿದ್ದಾರೆ. ಮೃತನ ತಾಯಿ ದೂರಿನ ಹಿನ್ನೆಲೆ ಘಟನೆಗೆ ಕಾರಣರಾದ ಬಾಲಕಿಯನ್ನು ವಿಚಾರಣೆ ಮಾಡಲಾಗಿದೆ. ಸತ್ತ ಮನೆಯಲ್ಲಿ ರಾಜಕಾರಣ ಮಾಡುವುದು ಬಿಜೆಪಿಗೆ ಹೊಸದಲ್ಲ. ಸತ್ತ ಮನೆಯಲ್ಲಿ ರಾಜಕೀಯ ಮಾಡುವುದಕ್ಕಿಂತ ಸಾತ್ವನ ಹೇಳಬೇಕು. ಇದನ್ನು ಬಿಜೆಪಿ ಮುಖಂಡರು ಕಲಿಯಲಿ ಎಂದು ತಿರುಗೇಟು ನೀಡಿದರು.