MSPಗೆ ಆಗ್ರಹಿಸಿ ದೆಹಲಿಗೆ ನುಗ್ಗಲು ಯತ್ನಿಸಿದ ರೈತರ ಮೇಲೆ ಅಶ್ರುವಾಯು ಪ್ರಯೋಗ

Public TV
1 Min Read

– ಅಂಬಾಲದಲ್ಲಿ ಡಿ.9 ರವರೆಗೆ ಇಂಟರ್‌ನೆಟ್ ಸೇವೆ ಸ್ಥಗಿತ
– 8 ಮಂದಿ ರೈತರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ

ನವದೆಹಲಿ: ಅನ್ನದಾತರು ಮತ್ತೆ ಸಿಡಿದೆದ್ದಿದ್ದಾರೆ. ಎಂಎಸ್‌ಪಿಗೆ (ಕನಿಷ್ಠ ಬೆಂಬಲ ಬೆಲೆ) ಕಾನೂನು ಸಿಂಧುತ್ವ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಂಜಾಬ್-ಹರಿಯಾಣ ಗಡಿಯ ಶಂಭು ಬಾರ್ಡರ್‌ನಿಂದ ಡೆಲ್ಲಿ ಚಲೋ ಹಮ್ಮಿಕೊಂಡಿದೆ. ಆದರೆ, ಅನ್ನದಾತರ ದೆಹಲಿ ಚಲೋ ಅನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ನೂಕಾಟ ತಳ್ಳಾಟಗಳೂ ನಡೆದಿವೆ.

ಕೆಲ ಹೊತ್ತು ಉದ್ವಿಗ್ನ ಪರಿಸ್ಥಿತಿ ಸಹ ನಿರ್ಮಾಣ ಆಗಿತ್ತು. ಪೊಲೀಸರು ಅಶ್ರುವಾಯು ಪ್ರಯೋಗಿಸಿ, ಹಲವು ರೈತರನ್ನು ವಶಕ್ಕೆ ಪಡೆದ್ರು. ಮುಂಜಾಗ್ರತಾ ಕ್ರಮವಾಗಿ ಗಡಿಯಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಮೂರು ಹಂತದ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದು, ನಿಷೇಧಾಜ್ಞೆ ವಿಧಿಸಲಾಗಿದೆ. ಹರಿಯಾಣದ ಅಂಬಾಲ ಸೇರಿ ವಿವಿಧೆಡೆ ಡಿಸೆಂಬರ್‌ 9ರ ವರೆಗೆ ಇಂಟರ್ನೆಟ್ ಸೇವೆ ಬಂದ್ ಮಾಡಲಾಗಿದೆ.

ಈ ಮಧ್ಯೆ, ರೈತರು ಬೆಳೆದ ಎಲ್ಲಾ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯ ಅನ್ವಯವೇ ಖರೀದಿ ಮಾಡಲಾಗುವುದು. ಇದು ಮೋದಿ ಗ್ಯಾರಂಟಿ ಎಂದು ರಾಜ್ಯಸಭೆಯಲ್ಲಿ ಕೃಷಿ ಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ ಸ್ಪಷ್ಟನೆ ನೀಡಿದ್ದಾರೆ.

8 ಮಂದಿ ರೈತರಿಗೆ ಗಾಯ:
ಇನ್ನೂ ದೆಹಲಿ ಪ್ರವೇಶಿಸಲು ಮುಂದಾದಾಗ ಶಂಭು ಗಡಿಯ ರಾಷ್ಟ್ರೀಯ ಹೆದ್ದಾರಿ-44 ರಲ್ಲಿ ರೈತರು ಹಾಗೂ ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ 8 ಮಂದಿ ರೈತರು ಗಾಯಗೊಂಡಿದ್ದಾರೆ, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ. ಇದರ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ.

ಪೊಲೀಸರು ನಮ್ಮ ವಿರುದ್ಧ ಸಂಪೂರ್ಣ ಬಲ ಪ್ರಯೋಗ ಮಾಡಿದ್ದರೆ. ಶಾಂತಿಯುತವಾಗಿ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂಸಾ ರೂಪವಾಗಿ ಪರಿವರ್ತಿಸಿದ್ದಾರೆ ಎಂದು ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಕಿಡಿ ಕಾರಿದ್ದಾರೆ.

Share This Article