ಮದುವೆ ಮಂಟಪದಿಂದ ಫೋಟೊಗ್ರಾಫರ್ ಕಿಡ್ನ್ಯಾಪ್ ಮಾಡಿ ಮಾರಣಾಂತಿಕ ಹಲ್ಲೆ – 8 ಮಂದಿ ಬಂಧನ

Public TV
1 Min Read

ಬೆಳಗಾವಿ: ಮದುವೆ ಮಂಟಪದಿಂದ ಫೋಟೊಗ್ರಾಫರ್ ಕಿಡ್ನ್ಯಾಪ್ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿಯ ಕೆಪಿಟಿಸಿಎಲ್ ಕಲ್ಯಾಣ ಮಂಟಪದಲ್ಲಿ ಘಟನೆ ನಡೆದಿದ್ದು, ಕಲ್ಯಾಣ ಮಂಟಪದಿಂದ ಫೋಟೊಗ್ರಾಫರ್ ಕಿಡ್ನ್ಯಾಪ್ ಮಾಡಿಕೊಂಡು ಹೋಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಫೋಟೋಗ್ರಾಫರ್ ಉಮೇಶ್ ಹೊಸೂರು ಅಪಹರಣವಾಗಿ ಹಲ್ಲೆಗೊಳಗಾಗಿ ವ್ಯಕ್ತಿ. ಇವರು ಬೈಲಹೊಂಗಲ ಪಟ್ಟಣದಲ್ಲಿ ನೆಲೆಸಿದ್ದಾರೆ. ನಾಲ್ಕು ದಿನಗಳ ಹಿಂದೆ ಮದುವೆ ಆರ್ಡರ್ ಅಂತಾ ಬೆಳಗಾವಿ ನಗರಕ್ಕೆ ಬಂದಿದ್ದರು. ಈ ವೇಳೆ ಆತನನ್ನ ಹಿಂಬಾಲಿಸಿಕೊಂಡು ನಾಲ್ವರು ಬಂದಿದ್ದರು. ಕಲ್ಯಾಣ ಮಂಟಪಕ್ಕೆ ಬಂದು ಹೊರಗೆ ಕರೆದುಕೊಂಡು ಹೋಗಿ ಅಲ್ಲಿಂದ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದ್ದಾರೆ.

ಬೈಲಹೊಂಗಲ ತಾಲೂಕಿನ ಚಿವಟಗುಂಡಿ ಕ್ರಾಸ್ ಬಳಿ ಕಾರು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ. ರಾಡ್‌ನಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿ ಬಿಟ್ಟು ಹೋಗಿದ್ದಾರೆ. ಉಮೇಶ್ ಆರೋಪಿಗಳ ಮನೆಯ ಹೆಣ್ಣುಮಕ್ಕಳಿಗೆ ಕಾಡಿಸುತ್ತಿರುವುದಾಗಿ ಸುಳ್ಳು ಹೇಳಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಎಂಟು ಜನರ ವಿರುದ್ಧ ಮಾಳಮಾರುತಿ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಕೇಸ್ ದಾಖಲಾಗ್ತಿದ್ದಂತೆ ಇಬ್ಬರು ಮಹಿಳೆಯರು ಸೇರಿ ಎಂಟು ಜನರನ್ನು ಬಂಧಿಸಲಾಗಿದೆ. ಫೋಟೊಗ್ರಾಫರ್ ಉಮೇಶ್, ಬೈಲಹೊಂಗಲ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫೋಟೋಗ್ರಫಿ ವೃತ್ತಿ ವೈಷಮ್ಯದಿಂದ ಹಲ್ಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳಾದ ವಿಕ್ಕಿ, ಪ್ರವೀಣ್ ಉಮರಾಣಿ, ಬಸವರಾಜ ನರಟ್ಟಿ ಸೇರಿ ಎಂಟು ಜನರ ಬಂಧಿಸಲಾಗಿದೆ.

Share This Article