ವಾಷಿಂಗ್ಟನ್: ಕೋವಿಡ್ -19 ಸೋಂಕು ಹಿನ್ನೆಲೆಯಲ್ಲಿ 62 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ರೋಗಿಯೊಬ್ಬರು ತಮ್ಮ ಆಸ್ಪತ್ರೆಯ ಬಿಲ್ ನೋಡಿ ಶಾಕ್ ಆಗಿದ್ದಾರೆ.
70 ವರ್ಷದ ಸೆಟಲ್ ನಿವಾಸಿ ಮೈಕಲ್ ಫ್ಲೋರ್ ಈಗ ಸೋಂಕಿನಿಂದ ಗುಣಮುಖರಾಗಿದ್ದಾರೆ. ಗುಣಮುಖರಾದ ಬಳಿಕ ಆಸ್ಪತ್ರೆ 1.1 ದಶಲಕ್ಷ ಡಾಲರ್(8.14 ಕೋಟಿ ರೂ.) ಬಿಲ್ ನೀಡಿದೆ. ಒಟ್ಟು 181 ಪುಟಗಳ ಬಿಲ್‍ನಲ್ಲಿ ಔಷಧಿ, ವೆಂಟಿಲೇಟರ್, ಐಸಿಯು ಸೇರಿದಂತೆ ಎಲ್ಲ ಖರ್ಚುಗಳ ವಿವರವನ್ನು ಉಲ್ಲೇಖಿಸಲಾಗಿದೆ.
ಬಿಲ್ ಇಷ್ಟು ದೊಡ್ಡ ಮೊತ್ತವಾದರೂ ಮೈಕಲ್ ಇಷ್ಟು ಪ್ರಮಾಣದ ಬಿಲ್ ಪಾವತಿ ಮಾಡುವ ಅಗತ್ಯವಿಲ್ಲ. ಇದರಲ್ಲಿ ಬಹುತೇಕ ಹಣವನ್ನು ವಿಮಾ ಕಂಪನಿಯೇ ಪಾವತಿಸಲಿದೆ.
ಇಸಾಕ್ವಾದಲ್ಲಿರುವ ಸ್ವಿಡೀಶ್ ಮೆಡಿಕಲ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಐಸಿಯುನಲ್ಲಿ ಮತ್ತು ವೆಂಟಿಲೇಟರ್ ನಲ್ಲಿದ್ದರು. ಐಸಿಯುನಲ್ಲಿ ಪ್ರತಿ ದಿನಕ್ಕೆ 9,736 ಡಾಲರ್( 7.39 ಲಕ್ಷ ರೂ.) ಆಗಿದೆ.
ಐಸೋಲೇಶನ್ ವಾರ್ಡ್‍ಗೆ ಪ್ರತಿ ದಿನ 9,736 ಡಾಲರ್(7.39 ಲಕ್ಷ ರೂ) ದರವಿದ್ದು, 42 ದಿನಗಳ ಕಾಲ ಐಸೋಲೇಶನ್ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆದಿದ್ದಕ್ಕೆ 4,08,912 ಡಾಲರ್(3.10 ಕೋಟಿ ರೂ.) ಬಿಲ್ ಆಗಿದೆ.
ಮೆಕ್ಯಾನಿಕಲ್ ವೆಂಟಿಲೇಟರ್ ನಲ್ಲಿ ಮೈಕಲ್ ಚಿಕಿತ್ಸೆ ಪಡೆದಿದ್ದರು. ಒಂದು ದಿನಕ್ಕೆ ವೆಂಟಿಲಟರ್ ಶುಲ್ಕ 2,833 ಡಾಲರ್(2.15 ಲಕ್ಷ ರೂ.) ಇದ್ದರೂ ಒಟ್ಟು29 ದಿನ ಇದ್ದಿದ್ದಕ್ಕೆ 82,215 ಡಾಲರ್( 58.43 ಲಕ್ಷ ರೂ.) ಬಿಲ್ ನೀಡಲಾಗಿದೆ. ಉಳಿದ ಬಿಲ್‍ಗಳು ಔಷಧಿ ಬಳಸಿದ್ದಕ್ಕೆ ನೀಡಲಾಗಿದೆ.
ಕೋವಿಡ್ ಸೋಂಕು ತಗಲಿದೆ ಎಂದು ಮೊದಲು ತಿಳಿದಾಗ ಶಾಕ್ ಆಗಿತ್ತು. ಈಗ ಈ ಬಿಲ್ ನೋಡಿ ನಾನು ಎರಡನೇ ಬಾರಿ ಶಾಕ್ ಆಗಿದ್ದೇನೆ ಎಂದು ಮೈಕಲ್ ತಿಳಿಸಿದ್ದಾರೆ.