8ನೇ ಪರೀಕ್ಷೆಯಲ್ಲಿ ಪಾಸ್‌ – ಲೆಫ್ಟಿನೆಂಟ್‌ ಹುದ್ದೆಗೆ ಆಯ್ಕೆಯಾದ ಎಂಜಿನಿಯರ್‌

Public TV
1 Min Read

ಕಾರವಾರ: ಇಂದಿನ ಯುವ ಪೀಳಿಗೆಯವರು ನಾನು ಡಾಕ್ಟರ್, ಎಂಜಿನಿಯರ್, ಲಾಯರ್, ಟೀಚರ್ ಹೀಗೆ ಏನೇನೋ ಆಗಬೇಕು ಎಂಬ ಕನಸು ಕಟ್ಟಿಕೊಳ್ಳುವುದು ಸಾಮಾನ್ಯ. ತಾನೊಬ್ಬ ಯೋಧನಾಗಬೇಕು ಎಂದು ಆಸೆ ಪಡುವವರ ಸಂಖ್ಯೆ ಕಡಿಮೆ. ಆದರೆ ಮುಂಡಗೋಡು ನಗರದ ಹಳೂರಿನ ನಿವಾಸಿ ಅಭಯ್ ಪಂಡಿತ್ ತಾನು ಯೋಧನಾಗಬೇಕು ಎಂದು ಸತತ ಎಂಟು ಬಾರಿ ಲೆಫ್ಟಿನೆಂಟ್‌ ಹುದ್ದೆಯ ಪರೀಕ್ಷೆ ಬರೆದು ಕೊನೆಗೂ ತನ್ನ ಗುರಿ ಸಾಧಿಸಿದ್ದಾರೆ.

ಅಭಯ್ ಓದಿದ್ದು ಎಂಜಿಜಿನಿಯರಿಂಗ್. ಮನಸ್ಸು ಮಾಡಿದ್ರೆ ಕೈತುಂಬ ಸಂಬಳದ ಜೊತೆ ಐಷಾರಾಮಿ ಜೀವನ ತನ್ನದಾಗಿಸಿಕೊಳ್ಳಬಹುದಿತ್ತು. ಆದರೆ ಸೈನ್ಯ ಸೇರಿ ದೇಶಸೇವೆ ಮಾಡಬೇಕು ಎಂಬ ತುಡಿತವಿತ್ತು. ಈ ಕಾರಣಕ್ಕೆ ಎಂಜಿನಿಯರಿಂಗ್ ಓದಿ ಕೆಲಸ ಸಿಕ್ಕರೂ ಬಿಡುವಿನ ಸಮಯ ಸೈನ್ಯ ಸೇರಲು ದೇಹ ಹುರಿಗೊಳಿಸಿ ಸತತ ಅಭ್ಯಾಸದಲ್ಲಿ ನಿರತರಾಗಿದ್ದರು. ಪ್ರತಿ ಭಾರಿ ಸೈನಿಕ ಪರೀಕ್ಷೆ ಬರೆದಾಗಲೂ ಸೋಲು ಕಾಣುತಿದ್ದರು. ಆದರೆ ಛಲ ಬಿಡದ ಇವರು ಎಂಟನೇ  ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ಕರ್ನಾಟಕದಿಂದ ಆಯ್ಕೆಯಾದ ಆರು ಜನರಲ್ಲಿ ಲೆಫ್ಟಿನೆಂಟ್‌ ಹುದ್ದೆ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.

ಚೆನ್ನೈನಲ್ಲಿರುವ ಭಾರತೀಯ ಸೈನಿಕ ಅಕಾಡಮಿಯಲ್ಲಿ ತರಬೇತಿ ಮುಗಿಸಿರುವ ಇವರು ನ.21 ರಂದು ಲೆಫ್ಟಿನೆಂಟ್‌ ಆಗಿ ನಿಯುಕ್ತಿಗೊಂಡಿದ್ದು, ರಾಜಸ್ಥಾನದ ವೆಸ್ಟರ್ನ್‌ ಸೆಕ್ಟರ್ ನಲ್ಲಿ ಸೇವೆ ಸಲ್ಲಿಸಲು ಡಿ.10 ರಂದು ತೆರಳಲಿದ್ದಾರೆ.

ಸಾಧನೆ ಇಲ್ಲದೇ ಜೀವನದಲ್ಲಿ ಏನೂ ಸಿಗುವುದಿಲ್ಲ. ನನಗೆ ಕೆಲಸ ಸಿಗಲಿಲ್ಲ ಎಂದುಕೊಳ್ಳುವ ಬದಲು ಆ ಕೆಲಸಕ್ಕೆ ನಾನು ಎಷ್ಟು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂಬ ಆತ್ಮಾವಲೋಕನ ಅಗತ್ಯ. ಸಾಧಿಸುವ ಛಲವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುತ್ತಾರೆ ಲೆಫ್ಟಿನೆಂಟ್‌ ಅಭಯ್‌.

Share This Article
Leave a Comment

Leave a Reply

Your email address will not be published. Required fields are marked *