– ರಕ್ಷಣಾ ಕಾರ್ಯಕ್ಕೆ ಬಿಲ್ ಲಾಡೆನ್ ಹತ್ಯೆಗೈದಿದ್ದ ವಿಶೇಷ ಸೀಲ್ ಪಡೆಯ ನೆರವು
ವಾಟಿಂಗ್ಟನ್/ಟೆಹ್ರಾನ್: ಇರಾನ್ ನೆಲದಲ್ಲಿ ಧ್ವಂಸಗೊಂಡಿದ್ದ ಎಫ್-15 ಈಗಲ್ ಸ್ಟ್ರೈಕ್ ಯುದ್ಧ (F15 Fighter Jet) ವಿಮಾನದ ಪೈಲಟ್ ಅನ್ನು ಸಾಹಸಮಯ ಕಾರ್ಯಾಚರಣೆಯಲ್ಲಿ ಅಮೆರಿಕ ರಕ್ಷಣೆ ಮಾಡಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದರು. ಇರಾನ್ ನೈರುತ್ಯ ಪ್ರಾಂತ್ಯದಲ್ಲಿ ‘ಸಾವು-ಬದುಕು’ ಮಿಷನ್ ಹೆಸರಿನಡಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಕಾರ್ಯಾಚರಣೆಗೆ ಇಳಿದ ಅಮೆರಿಕದ (America) ಹತ್ತಾರು ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು, ಸರಕು ಸಾಗಣೆ ವಿಮಾನಗಳು, ನೂರಾರು ಯೋಧರ ಮೂಲಕ ಪೈಲಟ್ ಅನ್ನು ರಕ್ಷಿಸಲಾಗಿದೆ. ಈ ಕಾರ್ಯಾಚರಣೆ ಹೇಗಿತ್ತು ಅನ್ನೋ ಮಾಹಿತಿ ಬಹಿರಂಗಗೊಂಡಿದೆ.
ಟ್ರಂಪ್ ಫಸ್ಟ್ ರಿಯಾಕ್ಷನ್ ಏನು?
ನಮ್ಮ ಸಿಬ್ಬಂದಿಯಲ್ಲಿ ಒಬ್ಬರಾದ ಕರ್ನಲ್ ಅವರನ್ನು ರಕ್ಷಿಸಲು ಅಮೆರಿಕ ಮಿಲಿಟರಿ ಇತಿಹಾಸದಲ್ಲೇ ಅತ್ಯಂತ ಸಾಹಸಮಯ ಕಾರ್ಯಾಚರಣೆಯನ್ನು ನಡೆಸಿದೆ. ಅವರು ಈಗ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ ಎಂದು ಟ್ರಂಪ್ ತಿಳಿಸಿದ್ದರು. ಧೈರ್ಯಶಾಲಿ ಯೋಧ ಶತ್ರುರಾಷ್ಟ್ರ ಇರಾನ್ ನ ಅಪಾಯಕಾರಿ ಪರ್ವತಗಳಲ್ಲಿ ಸಿಲುಕಿದ್ದರು. ಶತ್ರುಗಳಿಗೆ ತೀರಾ ಸಮೀಪದಲ್ಲಿ ಇದ್ದರು. ಆದರೂ ಬದುಕಿಗಾಗಿ ಹೋರಾಟ ಬಿಡಲಿಲ್ಲ. ಯೋಧ ಗಾಯಗೊಂಡಿದ್ದರೂ, ಸುರಕ್ಷಿತವಾಗಿದ್ದಾರೆ. ಯಾವುದೇ ನಷ್ಟವಿಲ್ಲದೆ ಅಮೆರಿಕ ಈ ‘ಪವಾಡ ಸದೃಶ ಕಾರ್ಯಾಚರಣೆ’ ನಡೆಸಿದೆ ಎಂದು ಟ್ರಂಪ್ (Donald Trump) ಬರೆದುಕೊಂಡಿದ್ದರು.
ಪೈಲಟ್ ನಾಪತ್ತೆಯಾದದ್ದು ಖಾತರಿಯಾಗುತ್ತಿದ್ದಂತೆಯೇ. ಅವರನ್ನು ರಕ್ಷಿಸುವುದು ಅಮೆರಿಕ ರಕ್ಷಣಾ ಪಡೆಗೂ ಪ್ರತಿಷ್ಠೆಯಾಗಿತ್ತು. ಇರಾನ್‌ನ ವಾಯುಪ್ರದೇಶದ ಒಳಗೆ ನುಗ್ಗಿ, ತೀವ್ರ ಕ್ಷಿಪಣಿ ದಾಳಿಯ ನಡುವೆಯೂ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿರುವುದು ‘ಪವಾಡ’ ಎಂದು ಟ್ರಂಪ್ ಬಣ್ಣಿಸಿದ್ದರು.
ಮಾರಕ ಆಯುಧಗಳು, ಡಜನ್‌ಗಟ್ಟಲೆ ವಿಮಾನಗಳು
ಅಮೆರಿಕದ ಯುದ್ಧ ವಿಮಾನವನ್ನು ಶುಕ್ರವಾರ ಇರಾನ್ ಹೊಡೆದುರುಳಿಸಿತ್ತು. ವಿಮಾನದಲ್ಲಿದ್ದ ಇಬ್ಬರು ಪೈಲಟ್‌ಗಳು ಕೆಳಕ್ಕೆ ಜಿಗಿದಿದ್ದರು. ಒಬ್ಬರನ್ನು ರಕ್ಷಿಸಿದ್ದರೆ, ಮತ್ತೊಬ್ಬರು ನಾಪತ್ತೆಯಾಗಿದ್ದರು. ಶತ್ರುದೇಶದ ಪೈಲಟ್ ಅನ್ನು ಹಿಡಿದರೆ, ದೊಡ್ಡ ಮೊತ್ತದ ಬಹುಮಾನ ನೀಡಲಾಗುವುದು ಎಂದು ಇರಾನ್ ಘೋಷಿಸಿತ್ತು. ಪೈಲಟ್ ಪತ್ತೆಗಾಗಿ ಅಮೆರಿಕ ಮತ್ತು ಇರಾನ್ ತೀವ್ರ ಹುಡುಕಾಟ ನಡೆಸಿದ್ದವು. ಇರಾನ್ ಇಸ್ಸಾಹಾನ್ ಪ್ರಾಂತ್ಯದಲ್ಲಿ ಅಮೆರಿಕದ ಸಿ-130 ವಿಮಾನ ಮತ್ತು ಎರಡು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳನ್ನು ಹೊಡೆದು ಉರುಳಿಸಿರುವುದಾಗಿ ಇರಾನ್ ಮಿಲಿಟರಿ ಪ್ರತಿಪಾದಿಸಿತು. ಆದರೆ, ಅಮೆರಿಕ ಮಾತ್ರ ತನ್ನ ಕಾರ್ಯಾಚರಣೆ ಸಂಪೂರ್ಣ ಯಶಸ್ವಿಯಾಗಿದೆ. ಈ ಮಧ್ಯೆ ಇರಾನ್ ದಿಕ್ಕು ತಪ್ಪಿಸಲು 900 ಕೆಜಿಯಷ್ಟು ಬಂಕರ್ ಬಷ್ಟರ್ ಬಾಂಬ್‌ಗಳಿಂದ ಇಸ್ಪಹಾನ್ ಮಿಲಿಟರಿ ಕೇಂದ್ರದ ಮೇಲೆ ದಾಳಿ ಮಾಡಲಾಯಿತು ಎಂದು ಅಮೆರಿಕ ಹೇಳಿಕೊಂಡಿದೆ.
ಶೋಧ ನಡೆದಿದ್ದು ಹೇಗೆ?
ವಿಮಾನದಿಂದ ಹಾರಿದ 24 ಗಂಟೆಗಳಲ್ಲಿಯೇ ಪೈಲಟ್ ಇರುವ ಸ್ಥಳವನ್ನ ಅಮೆರಿಕ ಸೇನೆ ಪತ್ತೆಹಚ್ಚಿತ್ತು. ಅವರ ಹತ್ತಿರ ಸುಳಿಯದಂತೆ, ಇರಾನ್ ಪಡೆಗಳನ್ನು ಗುರಿಯಾಗಿರಿಸಿ ಎಫ್-35 ಯುದ್ಧ ವಿಮಾನ, ಡೋನ್‌ಗಳ ಮೂಲಕ ದೊಡ್ಡ ಪ್ರಮಾಣದ ಬಾಂಬ್ ದಾಳಿ ನಡೆಸಿತ್ತು. ವಿಶೇಷ ರಕ್ಷಣಾ ಕಾರ್ಯಾಚರಣೆಯ ಯೋಧರು ‘ಎಚ್‌ಎಚ್-60 ಜಾಲಿ ಗ್ರೀನ್’ ಸರಣಿಯ ಹೆಲಿಕಾಪ್ಟರ್ ಬಳಸಿಕೊಂಡು ಪೈಲಟ್ ಇದ್ದ ಜಾಗಕ್ಕೆ ತೆರಳಿ ರಕ್ಷಣೆ ಮಾಡಿದ್ದಾರೆ. ‘ಎ-10 ವಾರ್ತ್ಹಾಗ್’ ಜೆಟ್‌ಗಳು ರಕ್ಷಣಾ ತಂಡಗಳಿಗೆ ಅಗತ್ಯ ಭದ್ರತೆ ಒದಗಿಸಿವೆ’ ಎಂದು ವರದಿಗಳು ತಿಳಿಸಿವೆ.
7,000 ಅಡಿ ಪರ್ವತ ಏರಿದ್ದ ಪೈಲಟ್
ವಿಮಾನದಿಂದ ಹಾರಿದ್ದ ಪೈಲಟ್, ಶತ್ರುಗಳಿಂದ ತಪ್ಪಿಸಿಕೊಳ್ಳಲು ಗಾಯದ ನಡುವೆಯೇ ಹ್ಯಾಂಡ್‌ಗನ್ ಹಿಡಿದುಕೊಂಡು 7 ಸಾವಿರ ಅಡಿ ಎತ್ತರದ ಬೆಟ್ಟ ಏರಿ, ಪರ್ವತಗಳ ಬಿರುಕಿನಲ್ಲಿ ಅವಿತುಕೊಂಡಿದ್ದರು. ಶಸ್ತ್ರಸಜ್ಜಿರಾಗಿದ್ದ ಪೈಲಟ್, ಕೈ ಬಂದೂಕು ಹಿಡಿದು ಪರ್ವತ ಬಿರುಕಿನ ಮಧ್ಯೆ ಅವಿತಿದ್ದರು. ಸುಮಾರು 24 ಗಂಟೆಗಳ ಕಾಲ ಅಲ್ಲಿಯೇ ಇದ್ದರು. ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ನೇತೃತ್ವದಲ್ಲಿ ಪೆಂಟಗಾನ್‌ನೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಯುದ್ಧಭೂಮಿಯಲ್ಲಿ ಇತ್ತೀಚೆಗಿನ ದಶಕಗಳಲ್ಲಿ ನಡೆದ ಅತ್ಯಂತ ಯಶಸ್ವಿ ರಕ್ಷಣಾ ಕಾರ್ಯಾಚರಣೆ ಇದಾಗಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬಿಲ್ ಲಾಡೆನ್ ಹತ್ಯೆಗೈದ ಸೀಲ್ ಪಡೆಯ ನೆರವು
ಇರಾನ್ ನೆಲದಲ್ಲಿದ್ದ ಅಮೆರಿಕ ವಾಯುಪಡೆ ವಿಮಾನಗಳು ಇರಾನ್‌ನ ಯೋಧರು, ಜನ ಪರ್ವತದತ್ತ ಬಾರದಂತೆ ಬಾಂಬ್ ದಾಳಿ ನಡೆಸಿದವು. ಮತ್ತೊಂದೆಡೆ ನೌಕಾಪಡೆಯ ‘ಸೀಲ್’ ಪಡೆ ಕಮಾಂಡೊಗಳು ಪರ್ವತ ಪ್ರದೇಶದ ಮೇಲೇರಿ, ಸಂಕೀರ್ಣ ಪ್ರದೇಶದಲ್ಲಿದ್ದ ಪೈಲಟ್ ಪತ್ತೆ ಮಾಡಿದವು. ಇದೇ ಸೀಲ್ ಪಡೆಯ ಕಮಾಂಡೊ ಘಟಕ 2011ರ ಮೇ 2 ರಂದು ಪಾಕಿಸ್ತಾನದ ಅಬೋಟಾಬಾದ್‌ನಲ್ಲಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ, ಅಲ್-ಖೈದಾ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ನನ್ನು ಹತ್ಯೆ ಮಾಡಿತ್ತು.
ಒಂದು ಕಡೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದರೆ ಮತ್ತೊಂದೆಡೆ ಇರಾನಿ ಪಡೆಗಳ ಜತೆ ಅಮೆರಿಕ ಕಮಾಂಡೊ ಪಡೆ ಗುಂಡಿನ ಚಕಮಕಿ ನಡೆಸುವ ಮೂಲಕ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗದಂತೆ ಎಚ್ಚರ ವಹಿಸಿತು. ಅಂತಿಮವಾಗಿ ಪೈಲಟ್ ಅನ್ನು ಹೊತ್ತ ಕಾಪ್ಟರ್ ಪರ್ವತ ಪ್ರದೇಶದಿಂದ ನಿರ್ಗಮಿಸುವ ವೇಳೆಗೆ ಅಮೆರಿಕ-ಇರಾನ್ ಪಡೆಗಳ ಗುಂಡಿನ ಕದನದಲ್ಲಿ ಐವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ.




