ಮದ್ವೆಯಾಗಲು ಹೋಗಿ ಕೊಲೆಯಾದ 70ರ ಅಜ್ಜ- ಹಣ ಕೊಟ್ಟು ಹೆಣವಾದ

Public TV
2 Min Read

-ಮಹಿಳೆ ಆಸರೆಯ ಬಯಸಿದ್ದ

ಚಿತ್ರದುರ್ಗ: ಈ ಕಾಲದಲ್ಲಿ ಉದ್ಯೋಗದಲ್ಲಿರುವ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗೋದೇ ಕಷ್ಟ. ಆದರೆ ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಗ್ರಾಮದ ತಿಮ್ಮಣ್ಣ ಎಂಬ 70 ವರ್ಷದ ವಯೋವೃದ್ಧ ಹೆಣ್ಣು ಹುಡುಕಿಕೊಡಿ ಅಂತ ಬ್ರೋಕರ್ ಗಳಿಗೆ ಹಣ ಕೊಟ್ಟು ಅವರಿಂದಲೇ ಹೆಣವಾಗಿದ್ದಾನೆ.

ತಿಮ್ಮಣ್ಣನ ಪತ್ನಿ ಸಾವನ್ನಪ್ಪಿದ್ದೂ, ಇಬ್ಬರು ಮಕ್ಕಳು ಸಹ ಮದುವೆಯಾಗಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಹೀಗಾಗಿ ತನ್ನ ಬದುಕಿಗೆ ಮಹಿಳೆಯ ಆಸರೆ ಬೇಕೆಂಬ ಹಂಬಲ ಹೊಂದಿದ್ದ, ಈ ಆಸಾಮಿ ತಿಮ್ಮಣ್ಣ ಚಿತ್ರದುರ್ಗದ ಅಜಯ್ ಹಾಗೂ ನಾಗರಾಜ್ ಎಂಬವರಿಗೆ ಎರಡು ಲಕ್ಷ ಹಣ ಕೊಟ್ಟು ಹೆಣ್ಣು ಹುಡುಕಿಕೊಡುವಂತೆ ಕೋರಿದ್ದನು.

ಈ ವಯೋವೃದ್ಧನಿಗೆ ಎಷ್ಟೇ ಹುಡುಕಿದರೂ ಸೂಕ್ತ ಹೆಣ್ಣು ಸಿಕ್ಕಿರಲಿಲ್ಲ. ಹೀಗಾಗಿ ದಿನದಿನಕ್ಕೂ ತಿಮ್ಮಣ್ಣನ ಕಿರುಕುಳ ಹೆಚ್ಚಾಗಿತ್ತು. ಆದಷ್ಟು ಬೇಗ ಹುಡುಗಿ ಹುಡುಕಿಕೊಡಿ ಇಲ್ಲವಾದ್ರೆ ಹಣ ವಾಪಸ್ ಕೊಡಿ ಅಂತ ದಬಾಯಿಸಿದ್ದನು. ಹೀಗಾಗಿ ಆಕ್ರೋಶಗೊಂಡ ನಾಗರಾಜ್ ಹಾಗೂ ಅಜಯ್ ತಮ್ಮೊಂದಿಗೆ ಇನ್ನಿಬ್ಬರನ್ನು ಸೇರಿಸಿಕೊಂಡು ತಿಮ್ಮಣ್ಣನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು. ಹಣ ವಾಪಸ್ ಕೊಡಿ ಎಂದು ಕೇಳಿದ ದಿನವೇ ಹೊಸದುರ್ಗದಲ್ಲಿ ಹೆಣ್ಣು ಸಿಕ್ಕಿದ್ದು, ರೆಡಿಯಾಗಿ ಬರುವಂತೆ ಹೇಳಿದ್ದರು. ಹೆಣ್ಣು ನೋಡಲು ಹೋದ ವೃದ್ಧ ಆ ದಿನದಿಂದಲೇ ನಾಪತ್ತೆಯಾಗಿದ್ದನು.

ಇದೇ ವೇಳೆ ಹೊಸದುರ್ಗದ ಹೊರವಲಯದಲ್ಲಿರುವ ಕಣಿವೆ ಕಾಗಿನೆಲೆ ಮೀಸಲು ಅರಣ್ಯಪ್ರದೇಶದಲ್ಲಿ ಜುಲೈ 31ರಂದು ಕೊಳೆತ ರೂಪದಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಅನಾಮಧೇಯ ಶವ ಎಂದು ದಾಖಲು ಮಾಡಿಕೊಂಡು ಪೊಲೀಸರು ಪ್ರಕರಣ ಕ್ಲೋಸ್ ಮಾಡಲು ನಿರ್ಧರಿಸಿದ್ದರು.

ಶವದ ಶರ್ಟ್ ಕಾಲರ್ ನಲ್ಲಿದ್ದ ಟೈಲರ್ ನ ವಿಳಾಸ ಹುಡುಕುತ್ತಾ ಹೊರಟ ಪೊಲೀಸರಿಗೆ ಇದು ಕೊಲೆಯೆಂಬ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ತಲೆಗೆ ಬಲವಾಗಿ ಹೊಡೆದಿದ್ದರಿಂದ ಆತ ಸಾವನ್ನಪ್ಪಿದ್ದಾನೆ ಎಂಬುವುದು ಮರಣೋತ್ತರ ಶವ ಪರೀಕ್ಷೆಯಲ್ಲಿ ತಿಳಿದಿತ್ತು. ಎಚ್ಚೆತ್ತ ಪೊಲೀಸರು ಮೃತನ ಮೊಬೈಲ್ ಕಾಲ್ ಡಿಟೈಲ್ಸ್ ಬೆನ್ನತ್ತಿದ್ದಾಗ ಆರೋಪಿಗಳನ್ನು ಬಲೆಗೆ ಸಿಲುಕಿದ್ದಾರೆ. ಪ್ರಕರಣ ಸಂಬಂಧ ಅಜಯ್, ನಾಗರಾಜ್, ಕಿರಣ್ ಹಾಗೂ ನಾಗರಾಜ್ ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

 

ಹೆಣ್ಣು ಸಿಕ್ಕಿರುವುದಾಗಿ ನಂಬಿಸಿ ತಿಮ್ಮಣ್ಣನನ್ನು ಹೊಸದುರ್ಗಕ್ಕೆ ಕರೆಸಿಕೊಂಡು ಆತನ ತಲೆಗೆ ಬಲವಾಗಿ ಹೊಡೆದು ಬ್ರೋಕರ್ ನಾಗರಾಜ್ ಹಾಗು ಬೆಂಬಲಿಗರು ಕೊಲೆಗೈದಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಹೀಗಾಗಿ ಹಣವಿದೆ ಅಂತ ಹೆಣ್ಣಿನ ಮೇಲೆ ವ್ಯಾಮೋಹ ಹೆಚ್ಚಾಗಿ ವೃದ್ದಾಪ್ಯದಲ್ಲಿ ಮದುವೆಯಾಗಲು ಹೊರಟಿದ್ದ ವೃದ್ಧ ತಿಮ್ಮಣ್ಣ ಹಣ ಹಾಗು ಹೆಣ್ಣು ಎರಡನ್ನು ಕಳೆದುಕೊಂಡು ಕೊಲೆಯಾಗಿದ್ದಾನೆ. ಕೊಲೆಗೈದ ಆರೋಪಿಗಳು ಮಾತ್ರ ಅಂದರ್ ಆಗಿ ಕತ್ತಲ ಕೋಣೆಯಲ್ಲಿ ಕಂಬಿ ಎಣಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *