ಭೀಕರ ಪ್ರವಾಹಕ್ಕೆ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಜಲಾವೃತ – ಜೀವ ರಕ್ಷಣೆಗೆ ಪ್ರಾಣಿಗಳ ಪರದಾಟ

Public TV
1 Min Read

ಬಿಸ್ಪುರ್: ಭೀಕರ ಪ್ರವಾಹದಿಂದಾಗಿ ಅಸ್ಸಾಂ ತತ್ತರಿಸಿ ಹೋಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ. ಈ ಮಧ್ಯೆ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಮತ್ತು ಅದರ 95 ಶಿಬಿರಗಳು ಶೇ.70 ರಷ್ಟು ಜಲಾವೃತಗೊಂಡಿದೆ.

ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಪ್ರಾಣಿಗಳು ಜೀವ ರಕ್ಷಣೆಗಾಗಿ ಪರದಾಟ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಅರಣ್ಯ ಅಧಿಕಾರಿಗಳ ರಜೆಯನ್ನು ರದ್ದುಗೊಳಿಸಲಾಗಿದ್ದು, ಕರ್ತವ್ಯದಲ್ಲಿ ಹಾಜರಿರುವಂತೆ ಇಲಾಖೆ ಸೂಚನೆ ರವಾನಿಸಿದೆ ಎನ್ನಲಾಗಿದೆ.

ರಾಷ್ಟ್ರೀಯ ಉದ್ಯಾನವನದ ಮುಕ್ಕಾಲು ಭಾಗದಷ್ಟು ಪ್ರದೇಶ ಜಲಾವೃತಗೊಂಡಿದ್ದು, ಇಲ್ಲಿದ್ದ ಪ್ರಾಣಿಗಳನ್ನು ಎತ್ತರದ, ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಕಾರ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತೊಡಗಿದ್ದಾರೆ. ಈ ಮಧ್ಯೆ ಬೇಟೆಗಾರರು ಪ್ರಾಣಿಗಳ ಬೇಟೆಯಾಡುವ ಸಂಭವ ಹೆಚ್ಚಾಗಿದ್ದು, ಇದನ್ನು ತಪ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ 37ರಲ್ಲಿ ಅರಣ್ಯ ಇಲಾಖೆ ಸಂಪೂರ್ಣ ಎಚ್ಚರಿಕೆ ವಹಿಸಿದೆ. ಉದ್ಯಾನವನದ ಪ್ರದೇಶದ ಸುತ್ತಾಮುತ್ತ ರಾತ್ರಿ ವೇಳೆಯೂ ಸಹ ಭದ್ರತಾ ದೃಷ್ಟಿಯಿಂದ ಅರಣ್ಯ ಕಾವಲುಗಾರರನ್ನು ನಿಯೋಜಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಗೆ ಅಸ್ಸಾಂನ ಬಹುತೇಕ ನದಿಗಳು ತುಂಬಿ ಹರಿಯುತ್ತಿದೆ. ಬಾಲಿಪುರ್ ಚಾರ್ ಪ್ರದೇಶದಲ್ಲಿ ಇರುವ ಬೇಕಿ ನದಿಯೂ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿಯ ಸುತ್ತಮುತ್ತ ಪ್ರದೇಶದ ಜನರು ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಹೀಗಾಗಿ ಭಾರತೀಯ ಸೇನೆ, ಎನ್‍ಡಿಆರ್‍ಎಫ್ ಮತ್ತು ಸಿವಿಲ್ ಅಡ್ಮಿನಿಸ್ಟ್ರೇಷನ್ ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಬಾಲಿಪುರ್ ಚಾರ್ ನಲ್ಲಿ ಪ್ರವಾಹಕ್ಕೆ ಸಿಲುಕಿದ್ದ 55 ಮಹಿಳೆಯರು, 40 ಪುರುಷರು, 25 ಹಿರಿಯ ನಾಗರಿಕರು ಮತ್ತು 30 ಮಕ್ಕಳು ಸೇರಿದಂತೆ ಸುಮಾರು 150 ಗ್ರಾಮಸ್ಥರನ್ನು ರಕ್ಷಿಸಿ ಸ್ಥಳಾಂತರಿಸಿಸಲಾಗಿದೆ.

ಬ್ರಹ್ಮಪುತ್ರ ನದಿಯು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಲಕ್ಷಾಂತರ ಮಂದಿ ಆತಂಕದಲ್ಲಿದ್ದಾರೆ. ಧೆಮಾಜಿ, ಲಖಿಂಪುರ್, ಬಿಸ್ವಾನಾಥ್, ಜೋರ್ಹತ್, ದಾರಂಗ್, ಬಾರ್ಪೆಟಾ, ನಲ್ಬಾರಿ, ಮಜುಲಿ, ಚಿರಾಂಗ್, ದಿಬ್ರುಗರ್ ಮತ್ತು ಗೋಲಘಾಟ್ ಸೇರಿದಂತೆ ಒಟ್ಟು 17 ಜಿಲ್ಲೆಗಳ 700 ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ಸುಮಾರು ನಾಲ್ಕು ಲಕ್ಷ ಜನರ ಮೇಲೆ ಪ್ರವಾಹ ಪರಿಣಾಮ ಬೀರಿದೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *