ವ್ಯಕ್ತಿಯ ಅಪಹರಣ- ಕೇವಲ 7 ನಿಮಿಷದಲ್ಲಿ ಆರೋಪಿಯನ್ನ ಬಂಧಿಸಿದ ಪೊಲೀಸರು

Public TV
1 Min Read

ನವದೆಹಲಿ: ಅಪಹರಿಸಿದ್ದ ಗ್ಯಾಂಗ್ ಪತ್ತೆ ಹಚ್ಚಿ ಕೇವಲ 7 ನಿಮಿಷದಲ್ಲಿ ಪೊಲೀಸರು ಯುವಕನನ್ನು ರಕ್ಷಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ಮೋಹನ್ ಗಾರ್ಡನ್ ನಿಂದ ಯುವಕನನ್ನು ಅಪಹರಿಸಿದ ನಂತರ ಕಾರ್ ಜಾಕರ್ ಗ್ಯಾಂಗ್‍ನ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತನನ್ನು ರಿಜ್ವಲ್ ಎಂದು ಗುರುತಿಸಲಾಗಿದ್ದು, ಶಿಮ್ಲಾ ಮೂಲದವರಾಗಿದ್ದಾರೆ. ಅಪಹರಣ ಘಟನೆ ವರದಿಯಾಗಿ ಕೇವಲ ಏಳು ನಿಮಿಷಗಳಲ್ಲಿ ಸಂತ್ರಸ್ತನನ್ನು ರಕ್ಷಿಸಿ, ಆರೋಪಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಶರತ್ ಕುಮಾರ್ ಸಿನ್ಹಾ ತಿಳಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ತನ್ನ ಸಹೋದರನನ್ನು ಜನಕ್‍ಪುರಿಯಿಂದ ನಾಲ್ವರು ಅಪಹರಿಸಿದ್ದಾರೆ ಎಂದು ಸಂತ್ರಸ್ತನ ಸಹೋದರ ದೂರು ನೀಡಿದ್ದ. ಅಪಹರಿಸಿದ ವಿಂಡ್‍ಶೀಲ್ಡ್ ಕಾರ್ ಮೇಲೆ ‘ಹೈ ಲ್ಯಾಂಡರ್’ ಎಂದು ಬರೆಯಲಾಗಿದೆ ಎಂದು ವಿವರಿಸಿದ. ನಂತರ ಪೊಲೀಸ್ ಕಂಟ್ರೋಲ್ ರೂಂ ಸಿಬ್ಬಂದಿ ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದು, ಆಪಾದಿತ ಕಾರನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಆಗ ಉತ್ತಮ್ ನಗರದ ರೆಡ್ ಲೈಟ್ ಬಳಿ ಕಾರು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪೊಲೀಸರು ತಮ್ಮನ್ನು ಹಿಂಬಾಲಿಸುತ್ತಿದ್ದಾರೆ ಎಂಬುದನ್ನು ಮನಗಂಡ ಅಪಹರಣಕಾರರು, ತಂಡದಲ್ಲಿನ ಮೂವರು ನಜಾಫ್‍ಗಢ ರಸ್ತೆಯ ಟ್ರಾಫಿಕ್ ಜಾಮ್‍ನಲ್ಲಿ ತಪ್ಪಿಸಿಕೊಂಡಿದ್ದಾರೆ. ಆದರೆ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿದ್ದು, ಸಂತ್ರಸ್ತನನ್ನು ಸಹ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಬಂಧಿತ ಆರೋಪಿಯನ್ನು ರವಿ ಎಂದು ಗುರುತಿಸಲಾಗಿದ್ದು, ಉತ್ತಮ್ ನಗರದ ನಿವಾಸಿಯಾಗಿದ್ದಾನೆ. ಮೋಹನ್ ಗಾರ್ಡನ್ ಪ್ರದೇಶದಿಂದ ಬಲವಂತವಾಗಿ ನನ್ನನ್ನು ಅಪಹರಿಸಲಾಗಿತ್ತು. ಅಪಹರಣಕಾರರು ನನ್ನ ಕಾರ್ ಕೀಯನ್ನು ಕಿತ್ತುಕೊಂಡು ಕಾರ್ ಪಾರ್ಕ್ ಮಾಡಿದ ಜನಕ್‍ಪುರಿ ಇನ್ಸಿಟಿಟ್ಯೂಟ್ ಸ್ಥಳಕ್ಕೆ ಆಟೋದಲ್ಲಿ ಕರೆದೊಯ್ದರು ಎಂದು 21 ವರ್ಷದ ಸಂತ್ರಸ್ತ ವಿವರಿಸಿದ್ದಾನೆ.

ಪೊಲೀಸರು ಸಂತ್ರಸ್ತನ ಕಾರ್ ಕೀ ಹಾಗೂ ಆತನ 1,650 ರೂ.ಗಳನ್ನು ಮರಳಿ ನೀಡಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *