ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆ – 7 ಮಂದಿ ಬಲಿ

Public TV
2 Min Read

– ಜನವಸತಿ ಪ್ರದೇಶಕ್ಕೆ ನುಗ್ಗಿದ ನೀರು, ದುರ್ಗಾ ಪೂಜೆಗೆ ಅಡ್ಡಿ

ಕೋಲ್ಕತ್ತಾ: ಸೋಮವಾರ ರಾತ್ರಿಯಿಡೀ ಪಶ್ಚಿಮ ಬಂಗಾಳದ ಕೋಲ್ಕತ್ತಾ (Kolkata) ಹಾಗೂ ಉಪನಗರಗಳಲ್ಲಿ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ (Rain) ಹಲವು ಪ್ರದೇಶಗಳು ಜಲಾವೃತವಾಗಿದೆ. ಮಳೆಯ ಅವಾಂತರಕ್ಕೆ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ.

ಈ ಮಳೆಯು ನವರಾತ್ರಿಯ ದುರ್ಗಾ ಪೂಜೆ ಆಚರಣೆಗಳ ಮೇಲೆ ವ್ಯಾಪಕ ಪರಿಣಾಮ ಬೀರಿದೆ. ಹವಾಮಾನ ಇಲಾಖೆ ಪ್ರಕಾರ ಕೊಲ್ಕತ್ತಾ ನಗರದಲ್ಲಿ ಕೇವಲ ಮೂರು ಗಂಟೆಗಳಲ್ಲಿ 185 ಮಿ.ಮೀ ಮಳೆಯಾಗಿದ್ದು, ಈ ವರ್ಷದಲ್ಲೇ ಇದು ಅತಿ ಹೆಚ್ಚು ಮಳೆ ಎನ್ನಲಾಗಿದೆ. ಜಲಾವೃತ ಪ್ರದೇಶಗಳಲ್ಲಿ ವಿದ್ಯುತ್ ಆಘಾತದಿಂದ ಐದು ಜನರು ಸೇರಿ ಮಳೆಯಿಂದ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

ರಸ್ತೆ ತುಂಬೆಲ್ಲ ಮಳೆ ನೀರು ನಿಂತಿದ್ದರಿಂದ ಸಂಚಾರಕ್ಕೆ ಅಡ್ಡಿಯಾಗಿ, ವಾಹನ ಸವಾರರು ಪರದಾಡಿದ್ದಾರೆ. ಜೊತೆಗೆ ಉಪನಗರ ರೈಲು ಮತ್ತು ಮೆಟ್ರೋ ಸೇವೆಗಳಿಗೂ ಅಡ್ಡಿಯಾಗಿದೆ. ಮಳೆ ನೀರು ನಗರದ ತಗ್ಗು ಪ್ರದೇಶಗಳಿಗೆ ನುಗ್ಗಿ ಅಪಾರ ನಷ್ಟ ಉಂಟಾಗಿದೆ. ಭಾರೀ ಮಳೆ ಹಿನ್ನೆಲೆ ನಗರದ ಹಲವೆಡೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದನ್ನೂ ಓದಿ: ಪ್ಯಾಲೆಸ್ಟೈನ್ ಪ್ರತ್ಯೇಕ ದೇಶಕ್ಕಾಗಿ ಇಟಲಿಯಲ್ಲಿ ತೀವ್ರ ಪ್ರತಿಭಟನೆ – ಬಂದರಿಗೆ ಬೆಂಕಿ, 60 ಪೊಲೀಸರಿಗೆ ಗಾಯ

ಕೋಲ್ಕತ್ತಾದ ದಕ್ಷಿಣ ಮತ್ತು ಪೂರ್ವ ಭಾಗಗಳು ಅತಿ ಹೆಚ್ಚು ಹಾನಿಗೊಳಗಾಗಿದ್ದು, ಗರಿಯಾ ಕಾಮದಹರಿಯಲ್ಲಿ 332 ಮಿಮೀ ಮಳೆಯಾಗಿದೆ. ಜೋಧ್‌ಪುರ ಪಾರ್ಕ್ನಲ್ಲಿ 285 ಮಿ.ಮೀ, ಕಾಳಿಘಾಟ್‌ನಲ್ಲಿ 280 ಮಿ.ಮೀ, ಟಾಪ್ಸಿಯಾದಲ್ಲಿ 275 ಮಿ.ಮೀ, ಬ್ಯಾಲಿಗಂಜ್‌ನಲ್ಲಿ 264 ಮಿ.ಮೀ ಮತ್ತು ಉತ್ತರ ಕೋಲ್ಕತ್ತಾದ ಥಂಟಾನಿಯಾದಲ್ಲಿ 195 ಮಿ.ಮೀ ಮಳೆಯಾಗಿದೆ ಕೋಲ್ಕತ್ತಾ ಮಹಾನಗರ ಪಾಲಿಕೆ ಮಾಹಿತಿ ನೀಡಿದೆ.

ಜನ ವಸತಿ ಪ್ರದೇಶಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ದುರ್ಗಾ ಪೂಜೆಯ ಸಿದ್ಧತೆಗಳಿಗೆ ಅಡ್ಡಿಯುಂಟಾಗಿದೆ. ಮನೆಗಳು, ಮಾರುಕಟ್ಟೆಗಳು ಮತ್ತು ಪೆಂಡಲ್ ನಿರ್ಮಾಣ ಸ್ಥಳಗಳು ಸಹ ಜಲಾವೃತವಾಗಿದೆ.

ಕೋಲ್ಕತ್ತಾ ವಿಮಾನ ನಿಲ್ದಾಣದ ರನ್ ವೇಗಳಲ್ಲೂ ನೀರು ನಿಂತಿದ್ದು, ಏರ್ ಇಂಡಿಯಾ ಹಾಗೂ ಇಂಡಿಗೋ ವಿಮಾನ ಹಾರಾಟದಲ್ಲಿ ವಿಳಂಬವಾಗಬಹುದು ಎಂದು ಗ್ರಾಹಕರಿಗೆ ಮಾಹಿತಿ ನೀಡಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಪೂರ್ವ ಮತ್ತು ಪಶ್ಚಿಮ ಮೇದಿನಿಪುರ, ದಕ್ಷಿಣ 24 ಪರಗಣ, ಜಾರ್ಗ್ರಾಮ್ ಮತ್ತು ಬಂಕುರಾ ಸೇರಿದಂತೆ ದಕ್ಷಿಣ ಬಂಗಾಳ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ. ಸೆ.25 ವರೆಗೂ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಎಚ್ಚರಿಸಿದೆ.

Share This Article