ವ್ಯಕ್ತಿ ದೇಹದಲ್ಲಿತ್ತು ಬರೋಬ್ಬರಿ 7.4 ಕೆಜಿ ತೂಕದ ಕಿಡ್ನಿ

Public TV
2 Min Read

ನವದೆಹಲಿ: ರಾಷ್ಟ್ರ ರಾಜಧಾನಿಯ ಆಸ್ಪತ್ರೆಯೊಂದರಲ್ಲಿ ವೈದ್ಯರ ತಂಡ ವ್ಯಕ್ತಿಯೊಬ್ಬರ ದೇಹದಿಂದ ಬರೋಬ್ಬರಿ 7.4 ಕೆಜಿ ತೂಕದ ರೋಗಪೀಡಿತ ಮೂತ್ರಪಿಂಡವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.

56 ವರ್ಷದ ವ್ಯಕ್ತಿಯೊಬ್ಬರ ದೇಹದಲ್ಲಿ ಬರೋಬ್ಬರಿ 7.4 ಕೆಜಿ ತೂಕದ ರೋಗಪೀಡಿತ ಮೂತ್ರಪಿಂಡ ಇತ್ತು. ಇದು ರೋಗಿಯ ಇಡೀ ಹೊಟ್ಟೆ ಭಾಗವನ್ನು ಆಕ್ರಮಿಸಿಕೊಂಡಿದ್ದು, ತೀವ್ರ ನೋವು ಅನುಭವಿಸುತ್ತಿದ್ದ ರೋಗಿ ವೈದ್ಯರ ಬಳಿ ಪರೀಕ್ಷೆ ಮಾಡಿಸಿದಾಗ ಮೂತ್ರಪಿಂಡದ ಸಮಸ್ಯೆ ಬಗ್ಗೆ ತಿಳಿದು ಬಂದಿದೆ. ರೋಗಿಯ ದೇಹದಲ್ಲಿ 2 ನವಜಾತ ಶಿಶುಗಳ ತೂಕದ ಮೂತ್ರಪಿಂಡ ಇರುವುದು ಪತ್ತೆಯಾಗಿದೆ. ಹೀಗಾಗಿ ಸತತ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ವೈದ್ಯರು ಕೊನೆಗೂ ಈ ರೋಗಪೀಡಿತ ಮೂತ್ರಪಿಂಡವನ್ನು ರೋಗಿ ದೇಹದಿಂದ ಹೊರತೆಗೆದಿದ್ದಾರೆ.

ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿರುವ ಮೂತ್ರಪಿಂಡ ಸಾಮಾನ್ಯವಾಗಿ 120 ರಿಂದ 150 ಗ್ರಾಂ ಇರುತ್ತದೆ. ಆದರೆ ಈ ರೋಗಿಗೆ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ಮೂತ್ರಪಿಂಡ ಮಾತ್ರ ಬರೋಬ್ಬರಿ 7.4 ಕೆಜಿಯಷ್ಟು ತೂಕ ಇದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ವೈದ್ಯರಾದ ಡಾ.ಸಚಿನ್ ಕಥುರಿಯಾ ಮಾತನಾಡಿ, ಭಾರತದಲ್ಲಿ ಈವರೆಗೆ ಇಂತಹ ದೊಡ್ಡ ಪ್ರಮಾಣದ ರೋಗಪೀಡಿತ ಮೂತ್ರಪಿಂಡ ಹೊರತೆಗೆದ ನಿದರ್ಶನ ಇಲ್ಲ. ಇಷ್ಟು ತೂಕದ ಮೂತ್ರಪಿಂಡ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿರುವುದು ಪ್ರಪಂಚದಲ್ಲೇ ಇದು ಮೂರನೇ ಪ್ರಕರಣವಾಗಿದೆ ಎಂದು ಹೇಳಿದ್ದಾರೆ.

ರೋಗಿಯು ನಿವೃತ್ತ ಸರ್ಕಾರಿ ಉದ್ಯೋಗಿಯಾಗಿದ್ದು, ಈ ಹಿಂದೆ 2006ರಲ್ಲಿ ಅವರಿಗೆ ಆಟೋಸೋಮಲ್ ಡಾಮಿನೆಂಟ್ ಪಾಲಿಸಿಸ್ಟಿಕ್ ಮೂತ್ರಪಿಂಡದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಸಮಸ್ಯೆ ಬಂದರೆ ಮೂತ್ರಪಿಂಡದ ತುಂಬ ದ್ರವ ತುಂಬಿ, ಅದು ದೊಡ್ಡ ಗಾತ್ರದಲ್ಲಿ ಬೆಳೆಯುತ್ತವೆ ಮತ್ತು ಅವುಗಳು ಊದಿಕೊಳ್ಳುತ್ತವೆ. ಬಳಿಕ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಸಾಮಾನ್ಯವಾಗಿ ಈ ಸಮಸ್ಯೆ ಇರುವವರಿಗೆ 40 ವಯಸ್ಸಿಗೆ ಮೂತ್ರಪಿಂಡ ವೈಫಲ್ಯವಾಗುತ್ತದೆ.

ಸದ್ಯ ನಾವು ರೋಗಿಯ ಎಡ ಭಾಗದ ಮೂತ್ರಪಿಂಡವನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದಿದ್ದೇವೆ. ಬಲಗಡೆಯ ಮೂತ್ರಪಿಂಡದಲ್ಲೂ ಸಮಸ್ಯೆ ಇದೆ, ಆದರೆ ಸದ್ಯ ರೋಗಿಗೆ ಅದರಿಂದ ಯಾವುದೇ ಸಮಸ್ಯೆ ಆಗುತ್ತಿಲ್ಲ. ಒಂದು ವೇಳೆ ಬಲ ಭಾಗದ ಮೂತ್ರಪಿಂಡದಲ್ಲೂ ಸಮಸ್ಯೆ ಹೆಚ್ಚಾದರೆ ಅದನ್ನು ಕೂಡ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಬೇಕಾಗುತ್ತದೆ. ಆಗ ರೋಗಿಗೆ ಮೂತ್ರಪಿಂಡ ಕಸಿ ಮಾಡುವವರೆಗೂ ಅವರು ಸಂಪೂರ್ಣ ಡಯಾಲಿಸಿಸ್ ಮೇಲೆಯೇ ಅವಲಂಬಿಸಿರಬೇಕು ಎಂದು ವೈದ್ಯರು ಮಾಹಿತಿ ಕೊಟ್ಟಿದ್ದಾರೆ.

ಈ ಹಿಂದೆ ವೈದ್ಯರ ತಂಡ ಬಾರೀ ತೂಕದ ಮೂತ್ರಪಿಂಡವನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆದ ಎರಡು ಪ್ರಕರಣ ನಡೆದಿತ್ತು. ಅಮೆರಿಕದಲ್ಲಿ ಓರ್ವ ರೋಗಿಯ ದೇಹದಿಂದ ಬರೋಬ್ಬರಿ 9 ಕೆಜಿ ತೂಕದ ಮೂತ್ರಪಿಂಡವನ್ನು ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಲಾಗಿತ್ತು. ಬಳಿಕ ನೆದರ್‌ಲ್ಯಾಂಡ್ಸ್‌ನಲ್ಲಿ ರೋಗಿಯೋರ್ವನ ದೇಹದಲ್ಲಿದ್ದ 8.7 ಕೆಜಿ ತೂಕದ ಮೂತ್ರಪಿಂಡ ಹೊರತೆಗೆಯಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *