ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ (Deepavali) ಸಂಭ್ರಮ ಒಂದಡೆಯಾದ್ರೇ, ಪಟಾಕಿ ಹಚ್ಚೋಕೆ ಹೋಗಿ, ಬೇರೆಯವರು ಸಿಡಿಸಿದ ಪಟಾಕಿ (Firecrackers) ಕಿಡಿ ಕಣ್ಣಿಗೆ (Eye) ತಾಕಿ ಹಲವರ ಬದುಕು ಕತ್ತಲಾಗಿದೆ.
ಕಳೆದೆರಡು ದಿನದಿಂದ ಬೆಂಗಳೂರಿನ (Bengaluru) ಮಿಂಟೋ ಆಸ್ಪತ್ರೆಯಲ್ಲಿ 25 ಜನ ಪಟಾಕಿ ಸಿಡಿದು ಕಣ್ಣಿಗೆ ಹಾನಿಯಾಗಿ ದಾಖಲಾಗಿದ್ದಾರೆ. ನಾರಾಯಣ ನೇತ್ರಾಲಯದಲ್ಲಿ 43 ಜನ ಪಟಾಕಿ ಸಿಡಿತದಿಂದ ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ. ಮೂರು ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮಿಂಟೋ ಆಸ್ಪತ್ರೆಯಲ್ಲಿ ದಾಖಲಾದ ನಾಲ್ಕು ಜನರಿಗೆ ಗಂಭೀರವಾಗಿ ಕಣ್ಣಿನ ಭಾಗಕ್ಕೆ ಗಾಯವಾಗಿದೆ.
ಬಿಹಾರ ಮೂಲದ 16 ವರ್ಷದ ಬಾಲಕ ಪಟಾಕಿ ಸಿಡಿದು ದೃಷ್ಟಿ ಕಳೆದುಕೊಂಡಿದ್ದಾನೆ. 18 ವರ್ಷದ ಯುವಕನೊಬ್ಬ ಕುಡಿದು ಪಟಾಕಿ ಹಚ್ಚಲು ಹೋಗಿ, ಹಚ್ಚುತ್ತಿದ್ದ ವೇಳೆಯಲ್ಲಿಯೇ ಸ್ಫೋಟಗೊಂಡು ಕಣ್ಣಿಗೆ ಗಂಭೀರವಾಗಿ ಹಾನಿಯಾಗಿದೆ. 10 ವರ್ಷದ ಬಾಲಕನ ಮುಖದ ಬಳಿಯೇ ಪಟಾಕಿ ಸ್ಫೋಟಗೊಂಡು ಕಣ್ಣಿನ ರೆಪ್ಪೆ ಸುಟ್ಟುಹೋಗಿದೆ. ಇದರಿಂದ ದೃಷ್ಟಿ ಸಮಸ್ಯೆ ಎದುರಾಗಿದೆ. ಗಾಯಾಳುಗಳಿಗೆ ನಾರಾಯಣ ನೇತ್ರಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು (ಅ.21) ಮಿಂಟೋ ಆಸ್ಪತ್ರೆಗೆ ಇಲ್ಲಿಯವರೆಗೂ, ಇಬ್ಬರು ಯುವಕರು, ಓರ್ವ ಯುವತಿ, ಒಂದು ಗಂಡು ಮಗುವನ್ನು ದಾಖಲಿಸಲಾಗಿದೆ. ಇದರಲ್ಲಿ ಎರಡು ಗಂಭೀರ, ಎರಡು ಸಾಧಾರಣ ಗಾಯಗಳಾಗಿವೆ. ಮೊದಲ ದಿನದಿಂದ ಇಲ್ಲಿ ತನಕ 17 ಜನರಿಗೆ ಹೆಚ್ಚಿನ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಮಕ್ಕಳು ಪಟಾಕಿ ಹಚ್ಚುವಾಗ ಪೋಷಕರು ಜೊತೆಯಲ್ಲಿಯೇ ಇರಬೇಕು. ಕಣ್ಣಿನ ಸುರಕ್ಷತೆಗಾಗಿ ಕನ್ನಡಕ ಧರಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.