67ನೇ ಕನ್ನಡ ರಾಜ್ಯೋತ್ಸವ – ಸುವರ್ಣ ಸೌಧದಲ್ಲಿ ಕೋಟಿ ಕಂಠ ಗಾಯನ

Public TV
2 Min Read

ಬೆಳಗಾವಿ: ತಾಲೂಕಿನ ಸುವರ್ಣ ಸೌಧದ (Suvarna Soudha) ಆವರಣದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ 67ನೇ ಕನ್ನಡ ರಾಜ್ಯೋತ್ಸವದ (Kannada Rajyotsava) ಕೋಟಿ ಕಂಠ ಗಾಯನ ಕಾರ್ಯಕ್ರಮ ಶುಕ್ರವಾರ ನೆರವೇರಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ (Shashikala Jolle), ಇವತ್ತಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಭಿವೃದ್ಧಿಗಾಗಿ ಆಧುನಿಕ ವಾತಾವರಣಕ್ಕೆ ಒಗ್ಗಬೇಕಾಗುತ್ತದೆ. ಆದರೆ ಅದೇ ಕಾರಣಕ್ಕಾಗಿ ನಾಡು, ನುಡಿ, ಸಂಸ್ಕೃತಿ ಮರೆತು ಮೂಢರಾಗದೇ ನಮ್ಮತನದ ಅಭಿಮಾನವನ್ನು ಮೆರೆಯಲೇಬೇಕಿದೆ ಎಂದು ಅಭಿಪ್ರಾಯಪಟ್ಟರು.

ಮಗುವಿಗೆ ಎದೆಹಾಲು ಕುಡಿಸಲಾರಳು ಆಧುನಿಕ ತಾಯಿ ಇವಳಯ್ಯ. ಬಾಟಲಿ ಹಾಲು ಕುಡಿಸಿ ಚಾಕಲೇಟ್ ತಿನ್ನಿಸಿ ಪಾಪ್ ಸಾಂಗ್ ಹಾಡುವಳಯ್ಯ. ಆಕೆ ಎಲ್ಲೇ ಇದ್ದರೂ, ಹೇಗೆ ಇದ್ದರೂ ಪ್ರತಿ ತಾಯಿಯೂ ಕನ್ನಡತಿಯೇ ಆಗಿರಬೇಕು ಎಂದು ಜೊಲ್ಲೆ ಹೇಳಿದರು.

ಇದೇ ವೇಳೆ ಮಾತನಾಡಿದ ಬೆಳಗಾವಿ (Belagavi) ಸಂಸದೆ ಮಂಗಳಾ ಅಂಗಡಿ, ನಾಡು, ನುಡಿ ವಿಚಾರವಾಗಿ ಅಭಿಮಾನ ಬರೀ ಕೂಗಾಟ, ಪ್ರತಿಭಟನೆಗೆ ಸೀಮಿತವಾಗಬಾರದು. ಬದಲಾಗಿ ಪ್ರತಿ ಕ್ಷಣವೂ ಅದನ್ನು ಜೀವಿಸಬೇಕು ಎಂದು ಹೇಳಿದರು.

ಏಕಕಾಲಕ್ಕೆ ನಾಡಗೀತೆ:
ಕಾರ್ಯಕ್ರಮ ಆರಂಭಕ್ಕೂ ಮುಂಚಿತವಾಗಿ ಜಿಲ್ಲೆಯ ವಿವಿಧ ಶಾಲಾ, ಕಾಲೇಜುಗಳಿಂದ ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಂಗೀತ ಶಿಕ್ಷಕ ವಿನಾಯಕ ಮೋರೆ ನೇತೃತ್ವದಲ್ಲಿ ಏಕಕಾಲಕ್ಕೆ ನಾಡಗೀತೆಯನ್ನು ಹಾಡಲಾಯಿತು. ಇದನ್ನೂ ಓದಿ: ಕಾಂಗ್ರೆಸ್ ಸ್ಥಿತಿ `ಮನೆಯೊಂದು ಮೂರು ಬಾಗಿಲು’ ಆಗಿದೆ – ಜೋಶಿ ಲೇವಡಿ

ನಾಡ ದೇವಿಗೆ ಕೋಟಿ ಕಂಠದಾರತಿ:
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಬಾರಿಸು ಕನ್ನಡ ಡಿಂಡಿಮವ, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ ವಿದ್ಯಾ ಚೇತನ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳನ್ನು ಪ್ರಸ್ತುತ ಪಡಿಸುವ ಮೂಲಕ ವಿದ್ಯಾರ್ಥಿ, ವಿದ್ಯಾರ್ಥಿನಿ, ಅಧಿಕಾರಿಗಳು ಸಂಗೀತ ಶಿಕ್ಷಕ ವಿನಾಯಕ ಮೋರೆ ನೇತೃತ್ವದಲ್ಲಿ ಭುವನೇಶ್ವರಿಗೆ ಕೋಟಿ ಕಂಠದಾರತಿ ಬೆಳಗಿದರು. ಕನ್ನಡ ನೆಲ, ಜಲ, ಜನ, ಸಂಸ್ಕೃತಿ, ಪರಂಪರೆಯ ರಕ್ಷಣೆಗೆ ಬದ್ಧವಾಗಿರುತ್ತೇವೆ ಎಂದು ಸಾವಿರಾರು ಕನ್ನಡ ಮನಸುಗಳು ಒಕ್ಕೊರಲಿನಿಂದ ಕನ್ನಡ ಪ್ರತಿಜ್ಞೆ ಮಾಡಿದರು.

ಆಗಸದಲ್ಲಿ ಬಲೂನ್ ಹಾರಾಟ:
ಕೋಟಿ ಕಂಠ ಗಾಯನದ ಯಶಸ್ವಿಪೂರ್ಣ ಕಾರ್ಯಕ್ರಮ ಹಿನ್ನೆಲೆಯಲ್ಲಿ ಎಲ್ಲಾ ಗಣ್ಯರ ಸಮ್ಮುಖದಲ್ಲೇ ಬಲೂನ್‌ಗಳ 2 ಗುಚ್ಛಗಳನ್ನು ಆಗಸದೆತ್ತರಕ್ಕೆ ಹಾರಿ ಬಿಡಲಾಯಿತು. ಹಳದಿ ಕೆಂಪು ಬಣ್ಣದ ಬಲೂನ್‌ಗಳು ಆಗಸದಲ್ಲಿ ಬಹಳ ವರ್ಣರಂಜಿತವಾಗಿ ತೇಲಾಡಿದವು. ಇದನ್ನೂ ಓದಿ: ಪೊಲೀಸರಿಗೆ ಒಂದು ದೇಶ, ಒಂದು ಸಮವಸ್ತ್ರ – ಕಲ್ಪನೆ ಪ್ರಸ್ತಾಪಿಸಿದ ಮೋದಿ

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಜಿಪಂ ಸಿಇಒ ದರ್ಶನ ಹೆಚ್.ವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ್, ಜಿಲ್ಲಾ ಪೊಲೀಸ್ ದಂಡಾಧಿಕಾರಿ ಬೋರಲಿಂಗಯ್ಯ, ಡಿಸಿಪಿ ರವೀಂದ್ರ ಗಡಾದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಸಾವಿರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಜಿಲ್ಲೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಭಾಗವಹಿಸಿದ್ದರು. ಸುನೀತಾ ದೇಸಾಯಿ ನಿರೂಪಿಸಿ ವಂದಿಸಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *