65ರ ಹರೆಯದಲ್ಲಿ 2ನೇ ಮದುವೆಯಾಗಲಿದ್ದಾರೆ ಖ್ಯಾತ ವಕೀಲ ಹರೀಶ್‌ ಸಾಳ್ವೆ

Public TV
2 Min Read

ನವದೆಹಲಿ: 65 ವರ್ಷದ ಹಿರಿಯ ವಕೀಲ, ಭಾರತದ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ಲಂಡನ್ ಮೂಲದ ಕಲಾವಿದೆಯ ಜೊತೆ ಎರಡನೇ ಮದುವೆಯಾಗಲಿದ್ದಾರೆ.

ಕಲಾವಿದೆ ಕ್ಯಾರೋಲಿನ್ ಬ್ರೋಸಾರ್ಡ್ ಅವರನ್ನು ಸಾಳ್ವೆ ಬುಧವಾರ ಚರ್ಚ್‌ನಲ್ಲಿ ವರಿಸಲಿದ್ದಾರೆ. ಸಾಳ್ವೆ ಅವರು ಉತ್ತರ ಲಂಡನ್ ನಲ್ಲಿ ನೆಲೆಸಿದ್ದು, ಚಿತ್ರಕಲಾ ಕಾರ್ಯಕ್ರಮವೊಂದರಲ್ಲಿ ಕ್ಯಾರೋಲಿನ್ ಅವರನ್ನು ಭೇಟಿಯಾಗಿದ್ದರು. ಸುಮಾರು ಒಂದು ವರ್ಷಗಳಿಂದ ಇಬ್ಬರೂ ಸ್ನೇಹಿತರಾಗಿದ್ದಾರೆ.

ಜೂನ್ ತಿಂಗಳಿನಲ್ಲಿ ಮೊದಲ ಪತ್ನಿ ಮೀನಾಕ್ಷಿ ಅವರಿಗೆ ಸಾಳ್ವೆ ವಿಚ್ಛೇದನ ನೀಡಿದ್ದರು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೊದಲ ಮಗಳು 37 ವರ್ಷದ ಸಾಕ್ಷಿ, ಎರಡನೇ ಮಗಳು 33 ವರ್ಷದ ಸಾನಿಯಾ. ಬ್ರಿಟನ್‌ನಲ್ಲಿ ಜನಿಸಿದ ಕ್ಯಾರೋಲಿನ್ ಅವರಿಗೆ 18 ವರ್ಷದ ಮಗಳಿದ್ದಾಳೆ. ಕಲೆಯ ಬಗ್ಗೆ ಒಲವಿರುವ ನಮಗಿಬ್ಬರಿಗೂ ಶಾಸ್ತ್ರೀಯ ಸಂಗೀತ ಮತ್ತು ರಂಗಭೂಮಿಯ ಬಗ್ಗೆ ಆಸಕ್ತಿ ಇದೆ ಎಂದು ಸಾಳ್ವೆ ತಿಳಿಸಿದ್ದಾರೆ.

ಕೋವಿಡ್‌ 19 ಬಿಗಿ ನಿಯಮದ ಹಿನ್ನೆಲೆಯಲ್ಲಿ ಲಂಡನ್ ನಲ್ಲಿ 15 ಜನರು ಮಾತ್ರವೇ ಸೇರಲು ಅವಕಾಶ ಇರುವ ಕಾರಣ ಅತ್ಯಂತ ಸರಳವಾಗಿ ಮದುವೆ ನಡೆಯಲಿದೆ. ಈ ಜನವರಿಯಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನ ಕ್ವೀನ್ಸ್ ಕೌನ್ಸೆಲ್ ಆಗಿ ಸಾಳ್ವೆ ನೇಮಕಗೊಂಡಿದ್ದರು.

ಹರೀಶ್‌ ಸಾಳ್ವೆ ಯಾರು?
ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದ ಹರೀಶ್‌ ಸಾಳ್ವೆ ಮತ್ತು ಪ್ರಸ್ತುತ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾ.ಅರವಿಂದ್‌ ಬೊಬ್ಡೆ ಒಂದೇ ಶಾಲೆಯಲ್ಲಿ ಓದಿದ್ದಾರೆ. ಸಾಳ್ವೆ ಅವರ ತಂದೆ ಎನ್‌ಕೆಪಿ ಸಾಳ್ವೆ ಚಾರ್ಟೆಡ್‌ ಅಕೌಂಟೆಂಟ್‌ ಮತ್ತು ಕಾಂಗ್ರೆಸ್‌ ಸದಸ್ಯರಾಗಿದ್ದರು.

ದೇಶದ ಹೈ ಪ್ರೊಫೈಲ್‌ ಪ್ರಕರಣಗಳ ಪರವಾಗಿ ಸಾಳ್ವೆ ವಾದ ಮಂಡಿಸಿದ್ದರು. ಮುಕೇಶ್‌ ಅಂಬಾನಿ, ರತನ್‌ ಟಾಟಾ, ಐಟಿಸಿ ಹೋಟೆಲ್‌, ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಹಿಟ್‌ ಆಂಡ್‌ ರನ್‌ ಪ್ರಕರಣದಲ್ಲಿ ವಾದಿಸಿದ್ದರು. ಕೋವಿಡ್‌ 19 ಸಮಯದಲ್ಲಿ ಹಲವು ಹೈ ಪ್ರೊಫೈಲ್‌ ಪ್ರಕರಣದಲ್ಲಿ ಸಾಳ್ವೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸುಪ್ರೀಂ ಕೋರ್ಟ್‌ಗೆ ಹಾಜರಾಗುತ್ತಿದ್ದರು.

ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಲು ಕೇವಲ 1 ರೂ. ಶುಲ್ಕ ಪಡೆದಿದ್ದರು. ವಿಧಿವಶರಾಗಿರುವ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಈ ವಿಚಾರವನ್ನು ಬಹಿರಂಗ ಪಡಿಸಿ ಮೆಚ್ಚುಗೆ ಸೂಚಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *