ಅಪಘಾತ ರಹಿತ ಚಾಲನೆ: ಕೋಲಾರದ 62 ಚಾಲಕರಿಗೆ ಬೆಳ್ಳಿ ಪದಕ

Public TV
1 Min Read

ಕೋಲಾರ: ಅಪಘಾತ ರಹಿತವಾಗಿ ಸುರಕ್ಷಿತ ಚಾಲನೆ ಮಾಡಿರುವ ಚಾಲಕರಿಗೆ ಸಾರಿಗೆ ಇಲಾಖೆ 30ನೇ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಬೆಳ್ಳಿ ಪದಕವನ್ನು ಪ್ರದಾನ ಮಾಡಿ ಅಭಿನಂದಿಸಲಾಗಿದೆ.

ಜಿಲ್ಲೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಆವರಣದಲ್ಲಿ 30ನೇ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಜೆ. ಮಂಜುನಾಥ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.

ರಾಜ್ಯದಲ್ಲೇ ಕಳೆದ 5 ವರ್ಷಗಳಲ್ಲಿ ಹೆಚ್ಚು ಸುರಕ್ಷಿತ ಚಾಲನೆ ಮಾಡಿದ ಜಿಲ್ಲೆಗೆ ಕೋಲಾರ ಪಾತ್ರವಾದ ಹಿನ್ನೆಲೆಯಲ್ಲಿ ಅಪಘಾತ ರಹಿತ ಸುರಕ್ಷಿತ ಸೇವೆ ನೀಡಿರುವ ಕೋಲಾರ ವಿಭಾಗದ 62 ಜನ ಚಾಲಕರನ್ನ ಜಿಲ್ಲಾಧಿಕಾರಿಗಳು ಬೆಳ್ಳಿ ಪದಕ ನೀಡಿ ಗೌರವಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, 1968ರಲ್ಲಿ ಪ್ರಾರಂಭವಾದ ನಿಗಮ ನಷ್ಟದಲ್ಲಿದ್ದರೂ ಕೂಡ ಸಾರಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಸೇವಾ ಮನೋಭಾವದಿಂದ ಸಾರಿಗೆ ವ್ಯವಸ್ಥೆಯನ್ನು ಸರ್ಕಾರ ನೀಡುತ್ತಾ ಬಂದಿದೆ. ಪ್ರತಿ ಕಿ.ಮೀ ಗೆ 28 ರೂಪಾಯಿ ಆದಾಯ ಬರುತ್ತಿದ್ದರೆ, ಅದಕ್ಕೆ ನಿಗಮ 35 ರೂಪಾಯಿ ವ್ಯಯ ಮಾಡುತ್ತಿದೆ. ಕೋಲಾರ ವಿಭಾಗದಲ್ಲಿ ಮಾತ್ರವೇ 2,856 ಮಂದಿ ಸಾರಿಗೆಯಲ್ಲಿ ಕೆಲಸ ಮಾಡುತ್ತಿದ್ದು, 609 ಸಾರಿಗೆ ಬಸ್‍ಗಳು 754 ಗ್ರಾಮಗಳನ್ನು ತಲುಪಿ ಜನರಿಗೆ ಸಾರಿಗೆ ಸಂಪರ್ಕ ಕಲ್ಪಿಸಿದೆ ಎಂದು ತಿಳಿಸಿದರು.

ಬಳಿಕ ಬೆಳ್ಳಿ ಪದಕ ಪಡೆದ ಚಾಲಕರು ಮಾತನಾಡಿ, ಸುರಕ್ಷಿತವಾಗಿ ಬಸ್ ಚಾಲನೆ ಮಾಡಿದ ನಮ್ಮನ್ನು ಸಾರಿಗೆ ನಿಗಮ ಪದಕ ಕೊಟ್ಟು ಗೌರವಿಸುತ್ತಿರುವುದು ಸಂತೋಷ ತಂದಿದೆ. ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಇಲಾಖೆಯ ಎಲ್ಲಾ ಸಿಬ್ಬಂದಿಗೆ ನಿಗಮ ಉತ್ತಮ ಸೌಲಭ್ಯ ಕೊಟ್ಟಿರುವುದು ನೆಮ್ಮದಿಯ ವಿಚಾರ ಎಂದು ಅಭಿಪ್ರಾಯ ಹಂಚಿಕೊಂಡರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *